ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಮಾಡುತ್ತೇನೆಂದು ಘೋಷಿಸಿದ್ದ ಬಿ.ಎಸ್.ಯಡಿಯೂರಪ್ಪ(BS Yediyurappa)ನವರು ಇದಕ್ಕಾಗಿ ಹೊಸ ಕಾರನ್ನೇ ಖರೀದಿಸಿದ್ದಾರೆ. ತಮ್ಮ ಕುಟುಂಬದೊಂದಿಗೆ 5 ದಿನಗಳ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದ ಬಿಎಸ್‍ವೈ ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಇದೀಗ ಪಕ್ಷ ಸಂಘಟಿಸಲು ರಾಜ್ಯ ಸುತ್ತಲು ಸಜ್ಜಾಗಿದ್ದಾರೆ.


COMMERCIAL BREAK
SCROLL TO CONTINUE READING

ಕರ್ನಾಟಕದ ಮೂಲೆ ಮೂಲೆ ಸುತ್ತಿ ಪಕ್ಷ ಸಂಘಟಿಸಲು ಬಿಎಸ್‍ವೈ ಅಣಿಯಾಗಿದ್ದು, 1 ಕೋಟಿ ರೂ. ಮೌಲ್ಯದ ಹೊಸ ಟೊಯೋಟಾ ವೆಲ್‌ಫೈರ್ ಕಾರು(Toyota Vellfire Car) ಖರೀದಿಸಿದ್ದಾರೆ. ಮುಂಬರುವ 2023ರ ರಾಜ್ಯ ವಿಧಾನಸಭಾ ಚುನಾವಣಾ ಸಿದ್ಧತೆಗಾಗಿ ಅತ್ಯಾಧುನಿಕ ಟೊಯೋಟಾ ಹೈಬ್ರಿಡ್ ಕಾರಿನಲ್ಲಿ ಬಿಎಸ್‍ವೈ ಪ್ರವಾಸ ಕೈಗೊಳ್ಳಲಿದ್ದಾರೆಂದು ತಿಳಿದು ಬಂದಿದೆ.


ಸೋಮವಾರ 78 ವರ್ಷದ ಹಿರಿಯ ಬಿಜೆಪಿ(BJP) ನಾಯಕ ಮಾಲ್ಡೀವ್ಸ್ ನಿಂದ ಹಿಂದಿರುಗಿದ ಬಳಿಕ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಚ್ಚ ಹೊಸ ಟೊಯೋಟಾ ವೆಲ್‌ಫೈರ್ ಕಾರು ಅವರ ಸ್ವಾಗತಕ್ಕಾಗಿ ಕಾಯುತ್ತಿತ್ತು. ಹೈಕಮಾಂಡ್ ನಿರ್ದೇಶನದ ಮೇರೆಗೆ ಜುಲೈ 26 ರಂದು ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿದಿದ್ದರು. ಬಳಿಕ ಅವರ ಆಪ್ತ ಬಸವರಾಜ್ ಬೊಮ್ಮಾಯಿ(Basavaraj Bommai) ರಾಜ್ಯದ ಚುಕ್ಕಾಣಿ ಹಿಡಿದಿದ್ದರು.


ಇದನ್ನೂ ಓದಿ: ಕೊರೊನಾ 3ನೇ ಅಲೆಗೆ ‘ಕೇರಳದ ಯಶಸ್ವಿ ಮಾದರಿ’ ಕಾರಣ: ಸಿಟಿ ರವಿ ಟೀಕೆ


ಪೆಟ್ರೋಲ್ ಇಂಧನದ ಹೈಬ್ರಿಡ್ ಟೊಯೋಟಾ ವೆಲ್‌ಫೈರ್(Toyota Vellfire) ಕಾರನ್ನು ತವರು ಜಿಲ್ಲೆ ಶಿವಮೊಗ್ಗದಲ್ಲಿ ಬಿಎಸ್‍ವೈ ಕುಟುಂಬದ ಮಾಲೀಕತ್ವದ ಮೈತ್ರಿ ಮೋಟಾರ್ಸ್ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಅಧಿಕೃತ RTO ದಾಖಲೆಗಳ ಪ್ರಕಾರ ಕಾರನ್ನು ದಕ್ಷಿಣ ಬೆಂಗಳೂರಿನ RTO ನಲ್ಲಿ ಆಗಸ್ಟ್ 16ರಂದು ನೋಂದಾಯಿಸಲಾಗಿದೆ. ಈಗಾಗಲೇ ಬಿಳಿ ಬಣ್ಣದ ಐಷಾರಾಮಿ ಕಾರಿನಲ್ಲಿ ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಹೋಗಿ ಬಂದಿದ್ದಾರೆ.  


2016ರಲ್ಲಿ ಬಿಎಸ್‍ವೈ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗ ಸಚಿವ ಮುರುಗೇಶ್ ನಿರಾಣಿ(Murugesh Nirani) 1.16 ಕೋಟಿ ರೂ. ಮೌಲ್ಯದ ಟೊಯೋಟಾ ಲ್ಯಾಂಡ್ ಕ್ರೂಸರ್ ಕಾರನ್ನುಉಡುಗೊರೆಯಾಗಿ ನೀಡಿದ್ದು ದೊಡ್ಡ ವಿವಾದವಾಗಿತ್ತು. ರಾಜ್ಯಾದ್ಯಂತ ಆರಾಮದಾಯಕ ಪ್ರಯಾಣಕ್ಕೆ ಅನುಕೂಲವಾಗಲಿ ಎಂದು ಕಾರು ನೀಡಲಾಗಿದೆ ಎಂದು ನಿರಾಣಿ ಹೇಳಿದ್ದರು. ಈ ವಿವಾದದಿಂದ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಕಾರನ್ನು ನಿರಾಣಿಗೆ ಬಿಎಸ್‍ವೈ ವಾಪಸ್ ಮಾಡಿದ್ದರು.   


ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರೂ ಬಿಎಸ್‍ವೈ ಕರ್ನಾಟಕದ ಪ್ರಮುಖ ಲಿಂಗಾಯತ ನಾಯಕರಾಗಿ ಉಳಿದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ತರಲು ಶ್ರಮಿಸುವುದಾಗಿ ತಿಳಿಸಿದ್ದ ಅವರು, ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ಹೇಳಿದ್ದರು. ಇಷ್ಟು ದಿನ ಸರ್ಕಾರದ ಅಧಿಕೃತ ಕಾರು ಬಳಸುತ್ತಿದ್ದ ಬಿಎಸ್‍ವೈ(BSY) ಇದೀಗ ಕೋಟಿ ರೂ. ಮೌಲ್ಯದ ಕಾರಿನಲ್ಲಿ ರಾಜ್ಯ ಪ್ರವಾಸ ಮಾಡಲಿದ್ದಾರೆ.


ಇದನ್ನೂ ಓದಿ: ಸಿದ್ದು ಸವದಿ ರಕ್ಷಿಸಿದ ಬಿಜೆಪಿಯಿಂದ ಮಹಿಳೆಯರು ರಕ್ಷಣೆ ಬಯಸುವುದು ವ್ಯರ್ಥ: ಕಾಂಗ್ರೆಸ್ ಕಿಡಿ


ಪ್ರಸ್ತುತ ಖರೀದಿಸಿರುವ ಕಾರಿನ ಬೆಲೆ 87 ಲಕ್ಷ ರೂ.ವಾಗಿದ್ದು, ತೆರಿಗೆ ಎಲ್ಲಾ ಸೇರಿ 1 ಕೋಟಿ ರೂ. ಆಗಿದೆ ಎಂದು ತಿಳಿದುಬಂದಿದೆ. ರಾಜ್ಯದ ಪ್ರತಿ ಜಿಲ್ಲೆಗೂ ಭೇಟಿ ನೀಡಿ ಪಕ್ಷ ಸಂಘಟನೆ ಮಾಡುವ ಯೋಜನೆಯನ್ನು ಬಿಎಸ್‍ವೈ ಹೊಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲು ಕಂಡ ಕ್ಷೇತ್ರಗಳಲ್ಲಿ ಮೊದಲು ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.