ಬೆಂಗಳೂರು: 14 ತಿಂಗಳಲ್ಲಿ ಮೂರು ಮುಖ್ಯಮಂತ್ರಿಗಳನ್ನು ಕಂಡಿರುವ 15ನೇ ವಿಧಾನಸಭೆ ಮತ್ತೊಮ್ಮೆ ವಿಶ್ವಾಸಮತ ಯಾಚನೆಗೆ ಸಿದ್ದವಾಗಿದ್ದು, ಶುಕ್ರವಾರದಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿ.ಎಸ್ ಯಡಿಯೂರಪ್ಪ ಇಂದು ಬೆಳಿಗ್ಗೆ 11 ಗಂಟೆಗೆ ವಿಶ್ವಾಸಮತ ನಿರ್ಣಯ ಮಂಡಿಸಲಿದ್ದಾರೆ. 


COMMERCIAL BREAK
SCROLL TO CONTINUE READING

ಜುಲೈ 25 ರಂದು ಮೂವರು ಶಾಸಕರನ್ನು ಅನರ್ಹತೆಗೊಳಿಸಿ ತೀರ್ಪು ಪ್ರಕಟಿಸಿದ್ದ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್, ಭಾನುವಾರ 14 ಶಾಸಕರನ್ನು ಅನರ್ಹಗೊಳಿಸಿ ತೀರ್ಪು ಪ್ರಕಟಿಸಿದರು. ಇದರೊಂದಿಗೆ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಕಾಂಗ್ರೆಸ್‌-ಜೆಡಿಎಸ್‌ನ ಎಲ್ಲಾ 17 ಶಾಸಕರನ್ನು ಈ ಅವಧಿಗೆ ಅನರ್ಹಗೊಂಡಿದ್ದಾರೆ. ಇದರಿಂದಾಗಿ 224 ಸದಸ್ಯ ಬಲವುಳ್ಳ ಸದನದ ಸದ್ಯದ ಬಲಾಬಲ 208 ಆಗಿದೆ. ಈ ಹಿನ್ನಲೆಯಲ್ಲಿ ಬಹುಮತ ಸಾಬೀತುಪಡಿಸಲು ನೂತನ ಸರ್ಕಾರಕ್ಕೆ ಅಗತ್ಯವಿರುವ ಮ್ಯಾಜಿಕ್ ಸಂಖ್ಯೆ 104 ಆಗಿದೆ. ಈಗಾಗಲೇ ಬಿಜೆಪಿ 105 ಸಂಖ್ಯೆಯನ್ನು ಹೊಂದಿರುವದರಿಂದ ಬಿಜೆಪಿಗೆ ಬಹುಮತದ ಹಾದಿ ಸುಲಭವಾಗಿದೆ.


ಧನ ವಿನಿಯೋಗ ವಿಧೇಯಕ ಮಂಡನೆ:
"ವಿಧಾನಸಭೆಯಲ್ಲಿ ಸೋಮವಾರ ವಿಶ್ವಾಸಮತ ಯಾಚಸಿ ಬಹುಮತ ಸಾಬೀತುಪಡಿಸುವುದು 100% ಖಚಿತ. ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸಿದ ಬಳಿಕ ಮೊದಲು ಧನ ವಿನಿಯೋಗ ವಿಧೇಯಕವನ್ನು ಎತ್ತಿಕೊಳ್ಳಲಾಗುವುದು" ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭಾನುವಾರ ತಿಳಿಸಿದ್ದಾರೆ.


ಚಾನ್ಸರಿ ಪೆವಿಲಿಯನ್ ಹೊಟೆಲ್ ನಲ್ಲಿ ಭಾನುವಾರ ರಾತ್ರಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸಲಾಯಿತು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ವಿಶ್ವಾಸಮತಯಾಚನೆ ಹಿನ್ನೆಲೆಯಲ್ಲಿ ಶಾಸಕರೊಂದಿಗೆ ವಿಸ್ಕೃತವಾಗಿ ಚರ್ಚಿಸಿದ್ದೇನೆ. ವಿಶ್ವಾಸಮತ ಯಾಚನೆ ಬಳಿಕ ಧನ ವಿನಿಯೋಗ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆಯಲಾಗುವುದು ಎಂದರು.


ಬಳಿಕ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಎಂಎಲ್ಸಿ ರವಿಕುಮಾರ್, "ಸೋಮವಾರ ನಡೆಯಲಿರುವ ಅಧಿವೇಶನಕ್ಕೆ ಬಿಜೆಪಿಯ 105 ಶಾಸಕರು ಬರಲಿದ್ದಾರೆ. ಸದನದಲ್ಲಿ ವಿಶ್ವಾಸಮತ ಸಾಬೀತು ಪಡಿಸುವ ವಿಶ್ವಾಸವಿದೆ ಎಂದು ತಿಳಿಸಿದರು. ಅಲ್ಲದೆ, ಧನ ವಿನಿಯೋಗ ವಿಧೇಯಕ ಪಾಸ್ ಮಾಡಲು ಸಹಕರಿಸುವಂತೆ ಕಾಂಗ್ರೆಸ್- ಜೆಡಿಎಸ್ ಶಾಸಕರಲ್ಲಿ ಮನವಿ ಮಾಡಿಕೊಳ್ಳಲಾಗುವುದು. ರಾಜ್ಯದ ಬರ ಪರಿಸ್ಥಿತಿಯ ಬಗ್ಗೆ ನಂತರ ಚರ್ಚೆ ಮಾಡಲಾಗುತ್ತದೆ. ಆಗಸ್ಟ್ 02ರಂದು ಅಧಿಕಾರಿಗಳ ಜೊತೆ ಮುಖ್ಯಮಂತ್ರಿಗಳು ಸಭೆ ನಡೆಸಲಿದ್ದಾರೆ" ಎಂದು ತಿಳಿಸಿದರು.