ಬೆಂಗಳೂರು/ಬೆಳಗಾವಿ : ಇಂದು ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. 


COMMERCIAL BREAK
SCROLL TO CONTINUE READING

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ಸಂಜೆ 6 ಗಂಟೆಗೆ ರಾಜ್ಯ ಸಚಿವ ಸಂಪುಟ ಸಭೆ ಪೂರ್ವ ನಿಯೋಜಿತವಾಗಿತ್ತು. ಅಲ್ಲದೆ, ರಾಜ್ಯಾದ್ಯಂತ ತೀರ್ವ ಚರ್ಚೆಗೆ ಗ್ರಾಸವಾಗಿದ್ದ ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಈ ಸಭೆಯಲ್ಲಿ ಚರ್ಚಿಸಿ, ಸಮಿತಿ ಸಲ್ಲಿಸಿದ್ದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಬೇಕೋ ಬೇಡವೋ ಎನ್ನುವುದನ್ನು ಈ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. 


ಆದರೆ, ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಸಚಿವರಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಈ ಸಭೆಯನ್ನು ಮುಂದೂಡಲಾಗಿದೆ ಎನ್ನಲಾಗುತ್ತಿದೆ. 


ಬೆಳಗಾವಿಯಲ್ಲಿ ಪ್ರತಿಭಟನೆ 
ಮತ್ತೊಂದೆಡೆ, ಪ್ರತ್ಯೇಕ ಲಿಂಗಾಯತ ಧರ್ಮ ಬೇಡ, ಈ ಕುರಿತು ಸರ್ಕಾರ ರಚಿಸಿದ್ದ ಸಮಿತಿ ಶಿಫಾರಸುಗಳನ್ನು ಕೇಂದ್ರಕ್ಕೆ ಸಲ್ಲಿಸುವುದು ಬೇಡ ಎಂದು ಒತ್ತಾಯಿಸಿ ವಿವಿಧ ಮತಗಳ ಮಠಾಧೀಶರು ಮತ್ತು ಅವರ ಅನುಯಾಯಿಗಳು ಬೆಳಗಾವಿಯಲ್ಲಿ ಪ್ರತಿಭಟನಾ ಜಾಥಾ ನಡೆಸುತ್ತಿದ್ದಾರೆ. ಒಂದೆಡೆ ಪ್ರತ್ಯೇಕ ಲಿಂಗಾಯತ ಧರ್ಮ ಬೇಕು ಎನ್ನುವವರಾದರೆ ಮತ್ತೊಂದೆಡೆ ಬೇಡ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. 


ಕಳೆದ ಕೆಲವು ದಿನಗಳಿಂದ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಹಂತದಲ್ಲಿ ಕೆಲವರು ಲಿಂಗಾಯತ-ವೀರಶೈವರು ಒಂದೇ ಎಂದು ಹೇಳುತ್ತಿದ್ದರೆ, ಮತ್ತೊಂದೆಡೆ ಲಿಂಗಾಯತರು ಮತ್ತು ವೀರಶೈವ ಎರಡೂ ವಿಭಿನ್ನವಾಗಿದ್ದು, ಆಚಾರ-ವಿಚಾರಗಳಲ್ಲಿ ಭಿನ್ನತೆ ಇದೆ ಎಂದು ಕೆಲವರು ಪ್ರತಿಪಾದಿಸಿದ್ದರು. 


ಈ ವಿಚಾರದ ಕುರಿತು ಅಧ್ಯಯನ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ಸಲ್ಲಿಸುವಂತೆ ಹೇಳಿದ್ದರು. ಈಗಾಗಲೇ ಈ ಸಮಿತಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದು, ಇಂದು ನಡೆಯಬೇಕಿದ್ದ ಸಭೆಯಲ್ಲಿ ಈ ವರದಿ ಕುರಿತು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ಹೇಳಿದ್ದರು.