ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ನಡೆಸುತ್ತಿರೋ ಮೇಲ್ಮನವಿ ಅರ್ಜಿಗಳ ವಿಚಾರಣೆಯಲ್ಲಿ ಕರ್ನಾಟಕ ತನ್ನ ವಾದ ಮುಗಿಸಿದ್ದು. ಕಳೆದ ಎಂಟು ದಿನಗಳಲ್ಲಿ ನಡೆದ ಕರ್ನಾಟಕದ ವಾದದಲ್ಲಿ ರಾಜ್ಯದ ಪರ ಹಿರಿಯ ವಕೀಲ ಫಾಲಿ.ಎಸ್ ನಾರಿಮನ್ ,ಶರತ್ ಜವಳಿ, ಮೋಹನ್ ಕಾತರಕಿ,ಶ್ಯಾಮ್ ದಿವಾನ್ ರವರು  ವಾದ ಮಂಡಿಸಿದ್ದರು. 


COMMERCIAL BREAK
SCROLL TO CONTINUE READING

ವಾದ ವೇಳೆ ಸಾಕಷ್ಟು ವಿಷಯಗಳು ಮೇಲೆ ಬೆಳಕು ಚೆಲ್ಲಿದ ಕರ್ನಾಟಕವು ಬ್ರಿಟಿಷರ ಕಾಲದಲ್ಲಾದ ಒಪ್ಪಂದಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮತ್ತು ಈಗಾಗಲೇ ನ್ಯಾಯಾಧಿಕರಣದಿಂದ ನೀರಾವರಿ ವಿಚಾರದಲ್ಲಿ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಅದು ಸುಪ್ರಿಂಕೋರ್ಟ್ ಗೆ ಮನವರಿಕೆ ಮಾಡಿದೆ. 


ಇದೆ ವೇಳೆ ಕರ್ನಾಟಕವು  ಕೋರ್ಟ್ ಗೆ ತಮಿಳುನಾಡಿನಲ್ಲಿರುವ ಅಂತರ್ಜಲ ಪ್ರಮಾಣವನ್ನು ಸಹಿತ ಪರಿಗಣಿಸಬೇಕೆಂದು ವಿನಂತಿಸಿಕೊಂಡಿದೆ. ವಿಶ್ವ ಸಂಸ್ಥೆಯ ವರದಿಯನ್ವಯ ತಮಿಳುನಾಡಿನ  ಅಂತರ್ಜಲದ ಪ್ರಮಾಣ 30 ಟಿಎಂಸಿ ಆಗಿದ್ದು ಆದರೆ ಅದು 20 ಟಿ ಎಂ ಸಿ ಎಂದು ಸುಳ್ಳು ಹೇಳುತ್ತಿದೆ ಎಂದು ತಿಳಿಸಿದೆ. ತಮಿಳುನಾಡಿನ ನಿರ್ಧಾರಗಳು ಸಹಿತ ಕರ್ನಾಟಕದಲ್ಲಿನ ನೀರಾವರಿ ಅಭಿವೃದ್ದಿಗೆ ಮಾರಕವಾಗಿವೆ ಎಂದು ಅಭಿಪ್ರಾಯಪಟ್ಟಿದೆ.


ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರಿನ ಅವಶ್ಯಕತೆ ಇರುವುದರಿಂದ ಪೂರ್ಣ ನಗರವನ್ನು ಕಾವೇರಿ ಕುಡಿಯುವ ನೀರಿನ ವ್ಯಾಪ್ತಿಗೆ ಸೇರಿಸಬೇಕು ಎಂದು ವಾದದ ವೇಳೆ ರಾಜ್ಯವು ಸುಪ್ರೀಂಕೋರ್ಟ್ ನ್ನು ಒತ್ತಾಯಿಸಿದೆ.


ಇಂದು ಕರ್ನಾಟಕದ ವಾದ ಮುಗಿಯುತ್ತಿದ್ದಂತೆಯೇ ಕಾವೇರಿ ನಿರ್ವಹಣ ಮಂಡಳಿಗೆ ಮತ್ತೆ ನೀರಿನ ವಿಚಾರವಾಗಿ ತಮಿಳುನಾಡು ಪಟ್ಟು ಹಿಡಿದಿದ್ದರಿಂದಾಗಿ, ಈ ಮನವಿಗೆ ಪ್ರತಿಕ್ರಿಯಿಸಿರುವ ಪೀಠ, ನಿರ್ವಹಣ ಮಂಡಳಿ ರಚನೆಗೆ ಕೇಂದ್ರ ಸರ್ಕಾರದ ಅಭಿಪ್ರಾಯ ಅಗತ್ಯವೆಂದು ತಿಳಿಸಿದೆ. ಹಾಗಾಗಿ ನಾಳೆ ಅಟಾರ್ನಿ ಜನರಲ್ ವಿಚಾರಣೆಗೆ ಖುದ್ದು ಹಾಜರಾಗಿ ಅಭಿಪ್ರಾಯ ತಿಳಿಸುವಂತೆ ಕೇಂದ್ರಕ್ಕೆ  ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ.


ಇದೆ ಫೆಬ್ರುವರಿ 23 ರೊಳಗೆ ಸುಪ್ರಿಂ ಕೋರ್ಟ್ ತನ್ನ ಅಂತಿಮ ತೀರ್ಪನ್ನು ನೀಡಲಿದೆ ಎಂದು ತಿಳಿದುಬಂದಿದೆ.ಒಂದು ವೇಳೆ ಇದೂವರೆಗೆ ಕರ್ನಾಟಕ ಮಂಡಿಸಿದ ವಾದವನ್ನು ಸುಪ್ರೀಂಕೋರ್ಟ್ ಪರಿಗಣಿಸಿದ್ದೇ ಆದಲ್ಲಿ ತಮಿಳುನಾಡಿಗೆ 192 ಟಿಎಂಸಿ ಹರಿಸುವ ಬದಲಾಗಿ 102 ಟಿಎಂಸಿ ಮಾತ್ರ ಹರಿಸಬೇಕಾಗುತ್ತದೆ ಎಂದು ತಿಳಿದುಬಂದಿದೆ.