ಕಾವೇರಿ ನದಿ ವಿವಾದದ ವಿಚಾರಣೆ ಅಂತ್ಯ, ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್
ಕೊನೆಗೂ ಪೂರ್ಣಗೊಂಡ ಕಾವೇರಿ ಅಂತಿಮ ಹಂತದ ವಿಚಾರಣೆ.
ನವದೆಹಲಿ: ಕಾವೇರಿ ನ್ಯಾಯಾಧಿಕರಣ ಐತೀರ್ಪನ್ನು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು 2007ರ ಜುಲೈ 11 ರಂದು ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಗಳ ಅಂತಿಮ ಹಂತದ ವಿಚಾರಣೆ ಕಡೆಗೂ ಅಂತ್ಯಗೊಂಡಿದೆ. ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ತೀರ್ಪನ್ನು ಕಾಯ್ದಿರಿಸಿದೆ.
ಕಾವೇರಿ ನದಿ ನೀರಿನ ಹಂಚಿಕೆ ವಿವಾದದ ಅಂತಿಮ ಹಂತದ ವಿಚಾರಣೆಯಲ್ಲಿ ಹಿರಿಯ ವಕೀಲ ಪಾಲಿ ಎಸ್. ನಾರಿಮನ್ ಕರ್ನಾಟಕದ ಪರವಾಗಿ ವಾದ ಮಂಡಿಸಿದರೆ, ವಕೀಲರಾದ ಶೇಖರ್ ನಾಫಡೆ ತಮಿಳುನಾಡು ಪರ ಹಾಗೂ ವಕೀಲ ಹರೀಶ್ ಸಲ್ವ ಕೇರಳ ಪರ ವಾದ ಮಂಡಿಸಿದ್ದರು.
1892 ಮತ್ತು 1924ರಲ್ಲಿ ಮದ್ರಾಸ್, ಮೈಸೂರು ಸಂಸ್ಥಾನಗಳ ನಡುವೆ ಆಗಿದ್ದ ಒಪ್ಪಂದಗಳನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆಸಿರುವ ಕರ್ನಾಟಕದ ಪರ ವಕೀಲ ಫಾಲಿ.ಎಸ್. ನಾರಿಮನ್, ಎರಡೂ ಒಪ್ಪಂದಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಹೊಸದಾಗಿ ನೀರು ಹಂಚಿಕೆ ಮಾಡಬೇಕು ಎಂದು ಪ್ರತಿಪಾದಿಸಿದ್ದಾರೆ.
ಹಳೇ ಒಪ್ಪಂಗಳ ಮಾನ್ಯತೆ ಬಗ್ಗೆ ಸುದೀರ್ಘ ವಾದ ಮಂಡಿಸಿದ ನಾರಿಮನ್, ಬ್ರಿಟಿಷ್ ಕಾಲದ ಒಪ್ಪಂದಗಳೇ ರಾಜ್ಯಕ್ಕೆ ಮುಳುವಾಗಿದ್ದು, ಅವುಗಳನ್ನು ಮಾನ್ಯತೆ ಮಾಡಬಾರದು. ಸ್ವಾತಂತ್ರ್ಯದ ನಂತರವೂ ಹಳೆ ಒಪ್ಪಂದಗಳನ್ನು ನ್ಯಾಯಾಧಿಕರಣ ಪರಿಗಣಿಸಿ ತೀರ್ಪು ನೀಡಿರುದರಿಂದ ರಾಜ್ಯಕ್ಕೆ ನೀರು ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕಾವೇರಿ ನ್ಯಾಯಾಧಿಕರಣ ತೀರ್ಪುನೀಡುವಾಗ 1991ರ ಜನಗಣತಿಯನ್ನು ಆಧರಿಸಿ ಬೆಂಗಳೂರಿಗೆ ಕುಡಿಯುವ ನೀರನ್ನು ನಿಗಧಿ ಮಾಡಿದೆ. ಈಗ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ 2011ರ ಜನಗಣತಿಯ ಮಾಹಿತಿಗಳನ್ನು ಆಧರಿಸಿ ಬೆಂಗಳೂರಿಗೆ ನೀರನ್ನು ನೀಡಬೇಕೆಂದು ಕರ್ನಾಟಕದ ಪರ ವಾದ ಮಂಡಿಸಿದ ಮತ್ತೊಬ್ಬ ವಕೀಲ ಶಾಮ್ ದಿವಾನ್ ಮನವಿ ಮಾಡಿದರು. ಜೊತೆಗೆ ಅಂತರ್ಜಲ ಲಭ್ಯತೆಯ ಬಗ್ಗೆ ವಿಶ್ವಸಂಸ್ಥೆ ನೀಡಿರುವ ವರದಿಯನ್ನು ಕಾವೇರಿ ನ್ಯಾಯಾಧೀಕರಣ ತನ್ನ ಐತೀರ್ಪು ಪ್ರಕಟಿಸುವಾಗ ಪರಿಗಣಿಸಿರಲಿಲ್ಲ. ಈಗಲಾದರೂ ತಮಿಳುನಾಡಿನಲ್ಲಿರುವ ಅಂತರ್ಜಲ ಲಭ್ಯತೆ ಬಗೆಗೆ ಮತ್ತು ಈ ಕುರಿತು ವಿಶ್ವಸಂಸ್ಥೆ ನೀಡಿರುವ ವರದಿಯ ಬಗೆಗೆ ಪರಿಗಣಿಸಬೇಕು ಎಂದು ಕೂಡ ಕೇಳಿಕೊಂಡರು.
* ಕಾವೇರಿ ನಿರ್ವಹಣ ಮಂಡಳಿಗೆ ಪಟ್ಟು ಹಿಡಿದ ತಮಿಳುನಾಡು
ತಮಿಳುನಾಡು ಪರ ವಾದ ಮಂಡಿಸಿರುವ ವಕೀಲ ಶೇಖರ್ ನಾಫಡೆ, ಕಾವೇರಿ ನಿರ್ವಹಣಾ ಮಂಡಳಿಯ ರಚನೆಗೆ ಪಟ್ಟು ಹಿಡಿದಿದ್ದಾರೆ. ಕರ್ನಾಟಕದ ಕಾವೇರಿ ನೀರಾವರಿ ಪ್ರದೇಶವು ಮರಳು ಮಿಶ್ರಿತವಾಗಿರುವುದರಿಂದ, ಅಚ್ಚುಕಟ್ಟು ನೀರಾವರಿಗೆ ಯೋಗ್ಯವಲ್ಲ. ಆದ್ದರಿಂದ ಹನಿ ನೀರಾವರಿಗೆ ಉತ್ತೇಜನ ನೀಡಬೇಕು ಎಂದು ವಾದ ಮಂಡಿಸಿದ್ದಾರೆ. ಅಲ್ಲದೆ, ನ್ಯಾಯಾಧಿಕರಣದ ಆದೇಶವನ್ನು ಕರ್ನಾಟಕ ಪಾಲಿಸುತ್ತಿಲ್ಲ, ಸುಪ್ರೀಂಕೋರ್ಟ್ ಮಧ್ಯಂತರ ಆದೇಶವನ್ನು ಕರ್ನಾಟಕ ಉಲ್ಲಂಘಿಸಿದೆ. ಕರ್ನಾಟಕದಿಂದ ತಮಿಳುನಾಡಿಗೆ ಪದೇ ಪದೇ ಅನ್ಯಾಯವಾಗುತ್ತಿದೆ ಎಂದು ತಿಳಿಸಿದೆ.