ಬೆಂಗಳೂರು: ಕಾವೇರಿ ನೀರಿನ ವಿವಾದದ ಬಗ್ಗೆ ಐತಿಹಾಸಿಕ ತೀರ್ಪನ್ನು ಶುಕ್ರವಾರ ಸುಪ್ರೀಂಕೋರ್ಟ್ ಪ್ರಕಟಿಸಿದೆ. 'ನದಿಗಳು ರಾಷ್ಟ್ರೀಯ ಸಂಪತ್ತು. ಯಾವುದೇ ಒಂದು ರಾಜ್ಯಕ್ಕೂ ನದಿಗಳ ಬಗ್ಗೆ ಸಂಪೂರ್ಣ ಹಕ್ಕು ಇರುವುದಿಲ್ಲ' ಎಂಬುದನ್ನು ಸ್ಪಷ್ಟಪಡಿಸಿದ ನ್ಯಾಯಾಲಯ, ತಮಿಳುನಾಡಿನ 20 ಟಿಎಂಸಿ ಅಂತರ್ಜಲವನ್ನು ಪರಿಗಣಿಸಿ ರಾಜ್ಯಕ್ಕೆ 14.75 ಟಿಎಂಸಿ ಹೆಚ್ಚುವರಿ ನೀರು ಉಪಯೋಗಿಸಲು ಆದೇಶ ನೀಡಿದೆ. ಕರ್ನಾಟಕಕ್ಕೆ ಹೆಚ್ಚಿನ ನೀರು ಕೊಡುವ ನ್ಯಾಯಾಲಯದ ತೀರ್ಪಿನ ಸಂತಸವನ್ನು ವಿಧಾನಸಭೆ ಅನುಭವಿಸಿತು.


COMMERCIAL BREAK
SCROLL TO CONTINUE READING

ಬಜೆಟ್ ಮಂಡನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆ ಪ್ರವೇಶಿಸುವ ಮೊದಲೇ ಕಾವೇರಿ ಕುರಿತ ಸುಪ್ರೀಂಕೋರ್ಟ್ ತೀರ್ಪು ಹೊರಬಂದಿತ್ತು. ಹಾಗಾಗಿ ಬಜೆಟ್ ಮಂಡನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆ ಪ್ರವೇಶಿಸುತ್ತಿದ್ದಂತೆ ಪಕ್ಷದ ಶಾಸಕರು ಚಪ್ಪಾಳೆಯೊಂದಿಗೆ ಅವರನ್ನು ಸ್ವಾಗತಿಸಿದರು. ಕಾವೇರಿ ತೀರ್ಪಿನ ಸಂತಸ ಸಿಎಂ ಮುಖದಲ್ಲಿ ಎದ್ದು ಕಾಣುತ್ತಿತ್ತು. ಬಜೆಟ್ ಮಂಡನೆಗಾಗಿ ಬಂದ ಸಿಎಂಗೆ ಅಭಿನಂದನೆಯ ಮಹಾಪೂರವೇ ಹರಿದುಬಂದಿತು. 



ಸುಪ್ರೀಂಕೋರ್ಟ್ ತೀರ್ಪಿನ ವಿಶೇಷ ವಿಷಯಗಳು;
* ಕರ್ನಾಟಕ ಬಿಳಿಗುಂಡ್ಲು ಅಣೆಕಟ್ಟೆ ಮೂಲಕ ತಮಿಳುನಾಡಿಗೆ 177.25 ಟಿಎಂಸಿ ಬಿಡುಗಡೆ ಮಾಡಬೇಕು. 
* ಕರ್ನಾಟಕಕ್ಕೇ 14.75 ಟಿಎಂಸಿ ಹೆಚ್ಚುವರಿ ನೀರು ಲಭಿಸಿದೆ.
* 2007 ರಲ್ಲಿ ಕಾವೇರಿ ನ್ಯಾಯಾಧಿಕರಣ ಕೇರಳಕ್ಕೆ 30 ಟಿಎಂಸಿ ಮತ್ತು ಪುದುಚೇರಿಗೆ ಏಳು ಟಿಎಂಸಿ ಎಂದು ಮಾಡಿದ್ದ ನೀರಿನ ಹಂಚಿಕೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.
* ತಮಿಳುನಾಡಿಗೆ ನ್ಯಾಯಾಧೀಕರಣ ಆದೇಶಿಸಿದ್ದ 419 ಟಿಎಂಸಿ ನೀರಿಗೆ ಬದಲಾಗಿ 404.25 ಟಿಎಂಸಿ ನೀರು ದೊರೆಯಲಿದೆ.
* ಬೆಂಗಳೂರಿನ ನಿವಾಸಿಗಳ ಕುಡಿಯುವ ನೀರು ಮತ್ತು ತಮಿಳುನಾಡಿನ ಅಂತರ್ಜಲದ ಆಧಾರದ ಮೇಲೆ ಕರ್ನಾಟಕಕ್ಕೆ ಕಾವೇರಿ ನೀರಿನ ಹಂಚಿಕೆ ಹೆಚ್ಚಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.