ಬೆಂಗಳೂರು: ರಾಜ್ಯದಲ್ಲಿ ಜಾನುವಾರುಗಳಿಗೆ ಹರಡುತ್ತಿರುವ ಚರ್ಮಗಂಟು ರೋಗವನ್ನು ತಡೆಯುವ ಉದ್ದೇಶದಿಂದ ಲಸಿಕೆ ಹಾಕಲು, ಚಿಕಿತ್ಸೆ ಹಾಗೂ ಮೃತಪಟ್ಟ ರಾಸುಗಳಿಗೆ ಪರಿಹಾರ ಒದಗಿಸಲು ಒಟ್ಟು 13 ಕೋಟಿ ರೂ. ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆರ್ಥಿಕ ಇಲಾಖೆಗೆ ಸೂಚಿಸಿದ್ದಾರೆ.


COMMERCIAL BREAK
SCROLL TO CONTINUE READING

ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ  ಜಾನುವಾರುಗಳ ಚರ್ಮಗಂಟು ರೋಗದ ಕುರಿತು ಪರಿಶೀಲನಾ ಸಭೆ ನಡೆಯಿತು. ಮೃತ ರಾಸುಗಳ ಪರಿಹಾರಕ್ಕೆ ಈಗಾಗಲೇ 2 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಹೆಚ್ಚುವರಿ 5 ಕೋಟಿ ರೂ. ಹಾಗೂ ಜಾನುವಾರುಗಳ ಚಿಕಿತ್ಸೆಗೆ ಮತ್ತು ಲಸಿಕೆಗೆ ಒಟ್ಟು 8 ಕೋಟಿ ರೂ. ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು. ರಾಜ್ಯದ 28 ಜಿಲ್ಲೆಗಳ 160 ತಾಲೂಕುಗಳ 4380 ಗ್ರಾಮಗಳಲ್ಲಿ ರೋಗ ಕಾಣಿಸಿಕೊಂಡಿದೆ. 45,645 ಜಾನುವಾರುಗಳು ಈ ರೋಗಕ್ಕೆ ತುತ್ತಾಗಿದ್ದು, 26,135 ಜಾನುವಾರುಗಳು ಗುಣಮುಖವಾಗಿವೆ. 2070 ಜಾನುವಾರುಗಳು ಮರಣ ಹೊಂದಿವೆ.


ಇದನ್ನೂ ಓದಿ: ಯುವತಿಗೆ ಮದುವೆ ಆಸೆ ತೋರಿಸಿ ಇಸ್ಲಾಂಗೆ ಮತಾಂತರ: ಯುವಕನ ಬಂಧನ


15 ಲಕ್ಷ ಲಸಿಕೆ ಒದಗಿಸಲು ಸೂಚನೆ


6.57 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಭಾರತ ಸರ್ಕಾರದ ಮಾರ್ಗಸೂಚಿಯಂತೆ ರೋಗ ಕಾಣಿಸಿಕೊಂಡ 5 ಕಿ.ಮೀ. ಸುತ್ತಳತೆಯಲ್ಲಿ ಆರೋಗ್ಯವಂತ ಜಾನುವಾರುಗಳಿಗೆ ಲಸಿಕೆ ಹಾಕಬೇಕು ಎಂದು ಅಧಿಕಾರಿಗಳು ತಿಳಿಸಿದರು. ಈ ಹಿನ್ನೆಲೆ ರೋಗ ತೀವ್ರವಾಗಿರುವ ಜಿಲ್ಲೆಗಳಲ್ಲಿ ಆದ್ಯತೆಯ ಮೇರೆಗೆ ಲಸಿಕೆ ಹಾಕಲು ಸೂಚಿಸಿದರಲ್ಲದೆ, ಕೂಡಲೇ 15 ಲಕ್ಷ ಡೋಸ್ ಲಸಿಕೆಗಳನ್ನು ಒದಗಿಸುವಂತೆ ತಿಳಿಸಿದರು. ಲಸಿಕೆ ಪೂರೈಕೆ ಕುರಿತು ಭಾರತ ಸರ್ಕಾರ ಅನುಮೋದಿಸಿದ ಕಂಪೆನಿಗಳೊಂದಿಗೆ ಮಾತುಕತೆ ನಡೆಸಿ, ಲಸಿಕೆ ಒದಗಿಸಲು ಕ್ರಮ ಕೈಗೊಳ್ಳುವಂತೆ ಪಶುಸಂಗೋಪನೆ ಇಲಾಖೆ ಕಾರ್ಯದರ್ಶಿಗಳಿಗೆ ಸಿಎಂ ಸೂಚಿಸಿದರು.


ಮಳೆಗೆ ಹತ್ತಿ ಬೆಳೆ ಸಂಪೂರ್ಣ ಹಾಳು, ವಿಷದ ಬಾಟಲಿ ಹಿಡಿದು ರೈತ ಕಣ್ಣೀರು


ಮನುಷ್ಯರಿಗೆ ರೋಗ ಹರಡುವುದಿಲ್ಲ


ರೋಗಪೀಡಿತ ರಾಸುಗಳ ಹಾಲಿನಿಂದ ಮನುಷ್ಯರಿಗೆ ಈ ಚರ್ಮಗಂಟು ರೋಗ ಹರಡುವುದಿಲ್ಲ. ಈ ಕುರಿತು ಜನರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಲು ಸಿಎಂ ಸೂಚಿಸಿದರು. ಚರ್ಮಗಂಟು ರೋಗ ತೀವ್ರವಾಗಿರುವ ಹಾವೇರಿ ಮತ್ತು ಕೋಲಾರ ಜಿಲ್ಲೆಗಳಲ್ಲಿ ರೋಗನಿಯಂತ್ರಣಕ್ಕೆ ತೀವ್ರ ಕ್ರಮ ಕೈಗೊಳ್ಳಬೇಕು. ಇತರ ಜಿಲ್ಲೆಗಳಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಲಸಿಕೆ ಅಭಿಯಾನ ತೀವ್ರಗೊಳಿಸುವಂತೆ ತಿಳಿಸಿದರು.


ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್, ಹಣಕಾಸು ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಕಾರ್ಯದರ್ಶಿ ಸಲ್ಮಾ ಫಾಹಿಂ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.