ಪ್ರವಾಹ ಸಂತ್ರಸ್ತರ ರಕ್ಷಣೆಗೆ ಸಂಜೆಯೊಳಗೆ ಹೆಚ್ಚುವರಿ ಸೇನೆ ನಿಯೋಜನೆ: ಸಿಎಂ ಬಿ.ಎಸ್. ಯಡಿಯೂರಪ್ಪ
ಪ್ರವಾಹ ನಿರ್ವಹಣೆಗೆ ಜಿಲ್ಲಾಡಳಿತ ಸನ್ನದ್ಧವಾಗಿದೆ. ಸಂತ್ರಸ್ಥ ಕುಟುಂಬ ಒಂದಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು.
ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ 106 ಗ್ರಾಮಗಳು ಜಲಾವೃತಗೊಂಡಿದ್ದು, ಜನ-ಜಾನುವಾರುಗಳ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಲಿದೆ. ಪ್ರವಾಹ ಸಂತ್ರಸ್ತರ ರಕ್ಷಣೆಗಾಗಿ ಗುರುವಾರ ಸಂಜೆಯೊಳಗೆ ಹೆಚ್ಚುವರಿ ಸೇನೆಯ ತುಕಡಿಗಳನ್ನು ನಿಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ಬೆಳಗಾವಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಹೆಚ್ಚುವರಿ ಸೇನೆ ಹಾಗೂ ಹೆಲಿಕಾಪ್ಟರ್ ಕೇಂದ್ರಕ್ಕೆ ಮನವಿ ಕಳಿಸಲಾಗಿದೆ. ನಿರಾಶ್ರಿತರಿಗೆ ಆಹಾರ, ಬಟ್ಟೆ, ವೈದ್ಯಕೀಯ ಸೌಲಭ್ಯ ಒದಗಿಸಲಾಗುವುದು. ಒಟ್ಟು ಆರು ಜನರು ಸಾವನ್ನಪ್ಪಿರುವುದು ದುರದೃಷ್ಟಕರ ಸಂಗತಿ. ಪ್ರವಾಹ ನಿರ್ವಹಣೆಗೆ ಜಿಲ್ಲಾಡಳಿತ ಸನ್ನದ್ಧವಾಗಿದೆ. ಸಂತ್ರಸ್ಥ ಕುಟುಂಬ ಒಂದಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು.
ಪಿ.ಎಸ್.ಐ ಕುಟುಂಬಕ್ಕೆ 50 ಲಕ್ಷ ಪರಿಹಾರ:
ಧಾರಾಕಾರ ಮಳೆ ಸುರಿಯುತ್ತಿದ್ದ ವೇಳೆ ರಸ್ತೆ ಸಂಚಾರ ನಿಯಂತ್ರಣದ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟಿರುವ ಪಿ.ಎಸ್.ಐ ಲಟ್ಟೆ ಕುಟುಂಬಕ್ಕೆ ಐವತ್ತು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಒದಗಿಸಲಾಗುವುದು ಎಂದು ಸಿಎಂ ಘೋಷಿಸಿದರು.
ಪ್ರವಾಹ ಸಂತ್ರಸ್ತರ ನೆರವಿಗಾಗಿ ಈಗಾಗಲೇ ಎಂಟು ಸೇನಾ ತುಕಡಿ, 5 ಎನ್.ಡಿ.ಆರ್.ಎಫ್. 2 ಎಸ್ ಡಿ.ಆರ್.ಎಫ್. ನಿಯೋಜನೆ ಮಾಡಲಾಗಿದೆ. ಗುರುವಾರ ನಾಲ್ಕು ಎನ್.ಡಿ.ಆರ್.ಎಫ್. ಹಾಗೂ ಸೇನಾ ತುಕಡಿಗಳ ಆಗಮಿಸಲಿವೆ. ಅಧಿಕಾರಿಗಳು ದೃತಿಗೆಡದೇ ರಕ್ಷಣಾ ಕಾರ್ಯದಲ್ಲಿ ತೊಡಗಲಿ. ಸರ್ಕಾರದಿಂದ ಎಲ್ಲ ರೀತಿಯ ಸಹಾಯ ಒದಗಿಸಲಾಗುವುದು ಎಂದು ಯಡಿಯೂರಪ್ಪ ಭರವಸೆ ನೀಡಿದರು.
ಜಿಲ್ಲೆಯ ಐದು ನದಿಗಳ ನೀರು ಸೇರಿದಂತೆ 5 ಲಕ್ಷ ಕ್ಯುಸೆಕ್ ನೀರು ಕೃಷ್ಣೆಯ ಮೂಲಕ ಹರಿಸಲಾಗುತ್ತಿದೆ. ಚಿಕ್ಕೋಡಿ, ಹುಕ್ಕೇರಿ, ಗೋಕಾಕ, ಅಥಣಿ, ರಾಯಬಾಗ ತಾಲ್ಲೂಕುಗಳಲ್ಲಿ ಹೆಚ್ಚು ಹಾನಿ ಸಂಭವಿಸಿದೆ. ಸಮರ್ಪಕ ರಕ್ಷಣಾ ಕೇಂದ್ರಗಳ ಸ್ಥಾಪನೆಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಮೂರು ದಿನ ಮೊಕ್ಕಾಂ:
ಗುರುವಾರ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ, ಪ್ರವಾಹ ಬಾಧಿತ ಸ್ಥಳಗಳ ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಎರಡು ದಿನಗಳ ಕಾಲ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಚಾರ ಮಾಡುತ್ತೇನೆ. ಅಗತ್ಯಬಿದ್ದರೆ ಇನ್ನೊಂದು ದಿನ ಇಲ್ಲಿಯೇ ವಾಸ್ತವ್ಯ ಹೂಡುತ್ತೇನೆ ಎಂದರು.
ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಜಿಲ್ಲಾಡಳಿತ ಎಲ್ಲ ರೀತಿಯ ಪ್ರಯತ್ನ ನಡೆಸಿದೆ. ಇದಕ್ಕಾಗಿ ಹೆಲಿಕಾಪ್ಟರ್ ನಿಯೋಜನೆ ಮಾಡಲಾಗುವುದು ಎಂದು ಅವರು ತಿಳಿಸಿದರು.