ಪುತ್ರ ನಿಖಿಲ್ ಹೇಳಿಕೆಗೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ
ಮೈತ್ರಿ ಸರ್ಕಾರ ಐದು ವರ್ಷ ಪೂರೈಸಲಿದೆ- ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ಯಾವುದೇ ಸಂದರ್ಭದಲ್ಲಾದರೂ ಚುನಾವಣೆಗೆ ಸಿದ್ಧರಾಗಿ ಎಂದು ನಿಖಿಲ್ ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡುತ್ತ ನೀಡಿದ್ದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದೀಗ ಪುತ್ರನ ಹೇಳಿಕೆಗೆ ಸ್ವತಃ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೇ ಸ್ಪಷ್ಟನೆ ನೀಡಿದ್ದಾರೆ.
ನಿಖಿಲ್ ಹೇಳಿಕೆ ಕುರಿತು ಇಂದು ಮಾಧ್ಯಮ ಮಿತ್ರರಿಗೆ ಸ್ಪಷ್ಟನೆ ನೀಡಿದ ಕುಮಾರಸ್ವಾಮಿಯವರು, ಪಕ್ಷದ ಕಾರ್ಯಕರ್ತರು ಸದಾ ಸಮಾಜ ಸೇವೆಗೆ ಸನ್ನದ್ಧರಾಗಿರಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ಈ ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ.
ಚುನಾವಣೆ ಕಾಲದಲ್ಲಿ ಮಾತ್ರ ಹೋರಾಟ ಎಂದಾಗದೇ ಯಾವಾಗ ಚುನಾವಣೆ ಎದುರಾದರೂ ಜಯ ಗಳಿಸುವ ಸ್ಥಿತಿಯಲ್ಲಿ ಪಕ್ಷವನ್ನು ಚುರುಕಾಗಿಟ್ಟಿರಬೇಕು ಎಂದು ನಿಖಿಲ್ ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡುತ್ತಾ ಹುರಿದುಂಬಿಸಿದ್ದಾರೆ. ಇದನ್ನು ಸಂದರ್ಭರಹಿತವಾಗಿ ಉಲ್ಲೇಖಿಸಿ ಮಾಧ್ಯಮಗಳಲ್ಲಿ ಚುನಾವಣೆ ಯಾವಾಗ ಬೇಕಾದರೂ ಎದುರಾಗಬಹುದು ಎನ್ನುವಂತೆ ಬಿಂಬಿಸಲಾಗಿದೆ.
ಇದು ವಾಸ್ತವಕ್ಕೆ ದೂರವಾದ ಸಂಗತಿ. ಮೈತ್ರಿ ಸರ್ಕಾರ ತನ್ನ ಐದು ವರ್ಷದ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತದೆ. ಮಧ್ಯಂತರ ಚುನಾವಣೆಯ ವಿಷಯವೇ ಈಗ ಅಪ್ರಸ್ತುತ
ಎಂದು ಅವರು ತಿಳಿಸಿದ್ದಾರೆ.