ಕುಮಾರಸ್ವಾಮಿ ದುರಹಂಕಾರದ ಮಾತನಾಡುವುದು ಬಿಡಲಿ: ಬಿ.ಎಸ್.ಯಡಿಯೂರಪ್ಪ
ಪ್ರತಿಪಕ್ಷದ ನಾಯಕರು ಜೀತದಾಳುಗಳಂತೆ ಕೆಲಸಮಾಡಬೇಕು ಎಂದು ಸಿಎಂ ತಿಳಿದಿದ್ದಾರೆ. ಮೊದಲು ಅವರು ದುರಹಂಕಾರದ ಮಾತುಗಳನ್ನು ಆಡುವುದನ್ನು ಬಿಡಬೇಕು ಎಂದು ಯಡಿಯೂರಪ್ಪ ಕಿಡಿ ಕಾರಿದರು.
ಬೆಳಗಾವಿ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ದುರಹಂಕಾರದ ಮಾತುಗಳನ್ನು ಆಡುವುದನ್ನು ಮೊದಲು ಬಿಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಗರದ ಕೆಎಲ್ಇ ಗೆಸ್ಟ್ ಹೌಸ್ನಲ್ಲಿ ಬಿಜೆಪಿ ಮುಖಂಡರ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಪ್ರತಿಪಕ್ಷದ ನಾಯಕರು ಜೀತದಾಳುಗಳಂತೆ ಕೆಲಸಮಾಡಬೇಕು ಎಂದು ಸಿಎಂ ತಿಳಿದಿದ್ದಾರೆ. ಮೊದಲು ಅವರು ದುರಹಂಕಾರದ ಮಾತುಗಳನ್ನು ಆಡುವುದನ್ನು ಬಿಡಬೇಕು ಎಂದು ಯಡಿಯೂರಪ್ಪ ಕಿಡಿ ಕಾರಿದರು.
ಮುಂದುವರೆದು ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವರ್ಗಾವಣೆಯನ್ನು ಒಂದು ದಂಧೆ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿಯವರೇ ಅಧಿವೇಶನಕ್ಕೆ ಬಂದು 18 ಕಿಲೋ ಮೀಟರ್ ದೂರದ ವಿಟಿಯು ಗೆಸ್ಟ್ ಹೌಸ್ನಲ್ಲಿ ಉಳಿದುಕೊಂಡಿದ್ದೀರಿ. ನಗರದಲ್ಲಿ ವಾಸ್ತವ್ಯ ಮಾಡಿದ್ರೆ ಜನ ಸಾಮಾನ್ಯರಿಂದ ಕಿರಿಕಿರಿಯಾಗುತ್ತದೆ ಎಂಬ ಮನಸ್ಥಿತಿ ನಿಮ್ಮಲ್ಲಿದೆ. ವಿರೋಧ ಪಕ್ಷದವರ ಬಗ್ಗೆ ಮತ್ತು ಮಾಧ್ಯಮದವರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಎಚ್ಚರಿಕೆ ನೀಡಿದರು.
ಸಿಎಂ ಕುಮಾರಸ್ವಾಮಿ ಅವರು ಕಾಟಾಚಾರಕ್ಕೆ ರೈತರ ಸಾಲ ಮನ್ನಾ ಮಾಡಿದ್ದಾರೆ. ಉತ್ತರ ಕರ್ನಾಟಕ ಜನರನ್ನು ನಿರ್ಲಕ್ಷಿಸಿದ್ದಾರೆ. ಹಾಗಾಗಿ ಬಿಜೆಪಿ ರಾಜ್ಯಾದ್ಯಂತ ರೈತರ ವಿರೋಧಿ ಸರಕಾರದ ವಿರುದ್ಧ ಬೃಹತ್ ಹೋರಾಟ ನಡೆಸಲಿದೆ ಎಂದರು.