ಯಾದಗಿರಿ : ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ದೊರೆಯಲಿದ್ದು, ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಂಡರಕಿ ಗ್ರಾಮದಲ್ಲಿ ಮೊದಲ ವಾಸ್ತವ್ಯ ಹೂಡಲಿದ್ದಾರೆ. ಈಗಾಗಲೇ ಸಿಎಂ ವಾಸ್ತವ್ಯಕ್ಕೆ ಸಕಲ ಸಿದ್ಧತೆಗಳು ನಡೆದಿವೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಮಾಹಿತಿ ನೀಡಿದ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ ಅವರು, "ಹಿಂದುಳಿದ ಜಿಲ್ಲೆಗೆ ಮುಖ್ಯಮಂತ್ರಿಗಳೇ ಬಂದು ಜನರ ಅಹವಾಲು ಆಲಿಸುತ್ತಿರುವುದು ಸಾಮಾನ್ಯ ವಿಷಯವಲ್ಲ. ಯಾವುದೇ ಆಡಂಬರಕ್ಕೆ ಆದ್ಯತೆ ನೀಡದೆ ಸರಳವಾಗಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಸುಮಾರು 10 ರಿಂದ 15 ಸಾವಿರ ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ" ಎಂದು ಸಚಿವರು ಹೇಳಿದರು.


ಸಿಎಂ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಪಟ್ಟಿ
* ಗುರುವಾರ ಸಂಜೆ 7 ಗಂಟೆಗೆ ಬೆಂಗಳೂರಿನಿಂದ ಕರ್ನಾಟಕ ಎಕ್ಸ್‌ಪ್ರೆಸ್ ರೈಲಿನಲ್ಲಿ ಯಾದಗಿರಿಗೆ ಸಿಎಂ ಕುಮಾರಸ್ವಾಮಿ ಪ್ರಯಾಣ.
* ಶುಕ್ರವಾರ ಮುಂಜಾನೆ 3.40ಕ್ಕೆ ಯಾದಗಿರಿ ರೈಲ್ವೆ ನಿಲ್ದಾಣಕ್ಕೆ ಆಗಮನ.
* ಬೆಳಿಗ್ಗೆ 7.30ಕ್ಕೆ ರಸ್ತೆ ಮಾರ್ಗದ ಮೂಲಕ ಚಂಡರಕಿ ಗ್ರಾಮಕ್ಕೆ ಪ್ರಯಾಣ
* ಶುಕ್ರವಾರ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯ ತನಕ ಚಂಡರಕಿ ಗ್ರಾಮದಲ್ಲಿ ಜನರಿಂದ ಅಹವಾಲು ಸ್ವೀಕಾರ.
* ಸಂಜೆ 7 ಗಂಟೆಗೆ ರೈತರು, ಶಾಲಾ ಮಕ್ಕಳು ನಡೆಸಿಕೊಡುವ ಸಾಂಸ್ಕೃತಿ ಕಾರ್ಯಕ್ರಮ ವೀಕ್ಷಣೆ.
* ರಾತ್ರಿ 9 ಗಂಟೆಗೆ ಮಕ್ಕಳೊಂದಿಗೆ ಭೋಜನ 
* ಬಳಿಕ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ.