ನನ್ನದು ಗರ್ವ ಅಲ್ಲ, ಕನ್ನಡಿಗನ ಸ್ವಾಭಿಮಾನ: ದೇವೇಗೌಡರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು!
BJP-JDS alliance: ದೇವೇಗೌಡರೇ, ಎಪ್ಪತ್ತು ವರ್ಷಗಳ ಕಾಲ ರಾಜಕೀಯದಲ್ಲಿದ್ದು ಕನ್ನಡಿಗರ ಪ್ರೀತಿ-ಅಭಿಮಾನವನ್ನು ಉಂಡು ಬೆಳೆದ ನೀವು ʼನಾವು ಪ್ರಧಾನಿ ಮೋದಿಯವರ ಹೆಸರಿನಲ್ಲಿಯೇ ಚುನಾವಣೆ ನಡೆಸುತ್ತೇವೆ” ಎಂಬ ಶರಣಾಗತಿಯ ಹೇಳಿಕೆಯನ್ನು ನೀಡುವಾಗ ಕನಿಷ್ಠ ನಿಮ್ಮ ಆತ್ಮಾಭಿಮಾನವೂ ಕುಟುಕಲಿಲ್ಲವೇ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ನನ್ನ ಗರ್ವಭಂಗ ಮಾಡುತ್ತೇನೆಂದು ಶಪಥ ಮಾಡಿದ್ದಾರೆ. ನನ್ನದು ಗರ್ವವೂ ಅಲ್ಲ, ಅಹಂಕಾರವೂ ಅಲ್ಲ. ನನ್ನದು ಕನ್ನಡಿಗರ ರಕ್ತದ ಕಣಕಣದಲ್ಲಿರುವ ಸ್ವಾಭಿಮಾನ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಶನಿವಾರ ಮಾತನಾಡಿರುವ ಅವರು, ಕನ್ನಡ-ಕನ್ನಡಿಗ-ಕರ್ನಾಟಕದ ರಕ್ಷಣೆಗಾಗಿ ತಲೆ ಎತ್ತಿ, ಎದೆಯುಬ್ಬಿಸಿ ಪ್ರಶ್ನಿಸುವ ಮತ್ತು ಹೋರಾಟ ನಡೆಸುವ ಸ್ವಾಭಿಮಾನ ಎನ್ನುವುದನ್ನು ಅತ್ಯಂತ ವಿನಯಪೂರ್ವಕವಾಗಿ ಅವರ ಗಮನಕ್ಕೆ ತರಬಯಸುತ್ತೇನೆ ಎಂದು ತಿಳಿಸಿದ್ದಾರೆ.
ದೇವೇಗೌಡರೇ ವೈಯಕ್ತಿಕ ಇಲ್ಲವೆ ರಾಜಕೀಯ ಲಾಭಕ್ಕಾಗಿ ನಾನು ಯಾರ ಜೊತೆಯಲ್ಲಿಯೂ ರಾಜಿ ಮಾಡಿಕೊಳ್ಳಲಾರೆ. ಅಂತಹ ಪರಿಸ‍್ಥಿತಿ ಬಂದೊದಗಿದರೆ ರಾಜಕೀಯವಾಗಿ ನಿವೃತ್ತಿಯಾಗುತ್ತೇನೆ ವಿನಃ ಕರ್ನಾಟಕದ ಹಿತಾಸಕ್ತಿಯ ವಿರೋಧಿಗಳ ಜೊತೆಯಲ್ಲಿ ನಿಮ್ಮಂತೆ ಹೊಂದಾಣಿಕೆ ಮಾಡಿಕೊಳ್ಳಲಾರೆ. ದೇವೇಗೌಡರ ಜೊತೆ ರಾಜಕೀಯವಾಗಿ ನನಗೆ ಭಿನ್ನಾಭಿಪ್ರಾಯವಿದ್ದರೂ. ನಮ್ಮ ನೆಲ-ಜಲ ಮತ್ತು ಭಾಷೆಯ ರಕ್ಷಣೆಯ ಬಗೆಗಿನ ಅವರ ನಿಲುವಿನ ಬಗ್ಗೆ ಗೌರವ ಇತ್ತು. ಆದರೆ ಕಳೆದ ಹತ್ತು ವರ್ಷಗಳ ಅಧಿಕಾರವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹೆಜ್ಜೆಹೆಜ್ಜೆಗೂ ಕರ್ನಾಟಕದ ಹಿತಾಸಕ್ತಿಯ ವಿರುದ್ಧವೇ ಕೆಲಸ ಮಾಡಿದೆ. ನಾಡಧ್ವಜಕ್ಕೆ ವಿರೋಧ, ಹಿಂದಿ ಹೇರಿಕೆ, ಕಾವೇರಿ, ಕೃಷ್ಣ, ಮಹದಾಯಿ ಜಲವಿವಾದಗಳಲ್ಲಿ ಅನ್ಯಾಯ, ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗ ಯುವಜನರಿಗೆ ವಂಚನೆ…. ಹೀಗೆ ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ದ್ರೋಹ ಎಸಗುತ್ತಾ ಬಂದಿದೆ. ಹೀಗಿದ್ದರೂ “ದೇಶದ ಎಲ್ಲಾ ಸಮಸ್ಯೆಗಳಿಗೆ ಮೋದಿ ಮತ್ತು ಅಮಿತ್ ಶಾ ಬಳಿ ಪರಿಹಾರ ಇದೆ” ಎಂದು ಹೇಳುವಾಗ ಕನಿಷ್ಠ ನಿಮ್ಮ ಆತ್ಮಸಾಕ್ಷಿಯಾದರೂ ನಿಮ್ಮನ್ನು ಚುಚ್ಚಲಿಲ್ಲವೇ?ʼ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಹೆಸರು ಪ್ರಕಟ
ಪ್ರಧಾನಿ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಮಾಡಿರುವ ಅನ್ಯಾಯಕ್ಕೆ ಕ್ಷಮೆಯೇ ಇಲ್ಲ. ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರದ ಖಜಾನೆಗೆ ಸಂದಾಯವಾಗುವ ಕನ್ನಡಿಗರ ಒಂದು ರೂಪಾಯಿಗೆ ಪ್ರತಿಯಾಗಿ ಕೇವಲ ಹದಿಮೂರು ಪೈಸೆಯಷ್ಟು ಹಣ ಮಾತ್ರ ಕರ್ನಾಟಕಕ್ಕೆ ವಾಪಸು ಬರುತ್ತಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮೊದಲಾದ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಕೂಡ ಕೇಂದ್ರ ಸರ್ಕಾರದ ಅನ್ಯಾಯವನ್ನು ಕೂಗಿ ಕೂಗಿ ಹೇಳುತ್ತಿವೆ. ಆದರೆ ಕರ್ನಾಟಕದ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಮಾತ್ರ ನಮ್ಮ ನೆಲ-ಜಲ-ಭಾಷೆಯ ವಿರೋಧಿಗಳ ಜೊತೆಯಲ್ಲಿ ರಾಜಿ ಮಾಡಿಕೊಂಡು ಕನ್ನಡಿಗರಿಗೆ ದ್ರೋಹ ಎಸಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವೇಗೌಡರೇ, ಎಪ್ಪತ್ತು ವರ್ಷಗಳ ಕಾಲ ರಾಜಕೀಯದಲ್ಲಿದ್ದು ಕನ್ನಡಿಗರ ಪ್ರೀತಿ-ಅಭಿಮಾನವನ್ನು ಉಂಡು ಬೆಳೆದ ನೀವು ʼನಾವು ಪ್ರಧಾನಿ ಮೋದಿಯವರ ಹೆಸರಿನಲ್ಲಿಯೇ ಚುನಾವಣೆ ನಡೆಸುತ್ತೇವೆ” ಎಂಬ ಶರಣಾಗತಿಯ ಹೇಳಿಕೆಯನ್ನು ನೀಡುವಾಗ ಕನಿಷ್ಠ ನಿಮ್ಮ ಆತ್ಮಾಭಿಮಾನವೂ ಕುಟುಕಲಿಲ್ಲವೇ? ಕನ್ನಡ-ಕರ್ನಾಟಕ ವಿರೋಧಿ ನಾಯಕನಿಗೆ ಈ ರೀತಿ ಶರಣಾಗುವುದು ಸಮಸ್ತ ಕನ್ನಡಿಗರಿಗೆ ಮಾಡುವ ದ್ರೋಹ ಎಂದು ನಿಮಗೆ ಅನಿಸಲಿಲ್ಲವೇ? ನಿಮ್ಮೊಳಗಿನ ರಾಜಕೀಯ ನಾಯಕ ಅಷ್ಟೊಂದು ದುರ್ಬಲ ಅಸಹಾಯಕನಾಗಿ ಹೋದನೇ?ʼ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.
ಇದನ್ನೂ ಓದಿ: ಬೀದರ್‌ನಲ್ಲಿ ರಂಗೇರಿದ ಲೋಕಸಭೆ ಚುನಾವಣೆ ಅಖಾಡ
ತಮ್ಮ ರಾಜಕೀಯ ಜೀವನದುದ್ದಕ್ಕೂ ಪ್ರಾದೇಶಿಕ ಆಶೋತ್ತರಗಳನ್ನು ಪ್ರತಿಪಾದಿಸಿಕೊಂಡು ಕೇಂದ್ರದ ಅಧಿಪತ್ಯವನ್ನು ಪ್ರಶ್ನಿಸುತ್ತಾ ಬಂದ ದೇವೇಗೌಡರು ಈ ಇಳಿವಯಸ್ಸಿನಲ್ಲಿ ಈ ರೀತಿಯ ರಾಜಕೀಯ ರಾಜಿ ಮಾಡಿಕೊಳ್ಳುವಂತೆ ಮಾಡಿದ ಶಕ್ತಿ ಮತ್ತು ವ್ಯಕ್ತಿ ಯಾರೇ ಇರಬಹುದು, ಆದರೆ ದೇವೇಗೌಡರು ಕೇವಲ ರಾಜಕೀಯ ಲಾಭಕ್ಕಾಗಿ ಮೈತ್ರಿ ಮಾಡಿಕೊಂಡು ಸಮಸ್ತ ಆರುವರೆ ಕೋಟಿ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದ್ದಾರೆ. ಈ ದ್ರೋಹಕ್ಕಾಗಿ ದೇವೇಗೌಡರು ಮತ್ತು ಅವರ ಪಕ್ಷ ಭಾರೀ ಬೆಲೆ ತೆರಲಿರುವುದು ಖಚಿತವೆಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.