ಬೆಂಗಳೂರು: ಇದೇ ಡಿಸೆಂಬರ್ 5 ರಂದು ಸಮ್ಮಿಶ್ರ ಸರ್ಕಾರ ಸಮನ್ವಯ ಸಮಿತಿ ಸಭೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್​ 05ರಂದು ಸಮ್ಮಿಶ್ರ ಸರ್ಕಾರ  ಸಮನ್ವಯ ಸಮಿತಿ ಸಭೆ ಕರೆದಿದ್ದೇವೆ. ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿ ನೇಮಕ ಸೇರಿದಂತೆ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಚಳಿಗಾಲದ ಅಧಿವೇಶನಕ್ಕೂ ಮೊದಲೇ ಸಂಪುಟ ವಿಸ್ತರಣೆ ಮಾಡಬೇಕು ಅಂದುಕೊಂಡಿದ್ದೇವೆ. ಸಮನ್ವಯ ಸಮಿತಿ ಸಭೆ ಬಳಿಕ ದೆಹಲಿಗೆ ತೆರಳಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.


ಮುಂದುವರೆದು ಮಾತನಾಡಿದ ಅವರು, ಡಿಸೆಂಬರ್ 8 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಈ ಸಭೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನೂ ಆಹ್ವಾನಿಸಲಿದ್ದು, ಶಾಸಕರು ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು. ನಮ್ಮದು ಸಮ್ಮಿಶ್ರ ಸರ್ಕಾರವಾದ್ದರಿಂದ  ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗುವುದು ಎಂದರು.


ಇದೆ ಸಂದರ್ಭದಲ್ಲಿ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರು ಸರ್ಕಾರ ಪತನವಾಗುವ ಬಗ್ಗೆ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈಶ್ವರಪ್ಪಗೆ ಮೆದುಳಿಲ್ಲ ಅಂತ ಮೊದಲೇ ಹೇಳಿದ್ದೆ. ಅವರ ಮಾತಿಗೆ ಉತ್ತರ ಕೊಡೋದು ಅನಾವಶ್ಯಕ ಎಂದು ಲೇವಡಿ ಮಾಡಿದರು.