ಚಿತ್ರದುರ್ಗ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ 5 ವರ್ಷಗಳ ಆಡಳಿತ ನಡೆಸಲಿದೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಸಮ್ಮಿಶ್ರ ಸರ್ಕಾರದ ಆಡಳಿತಾವಧಿ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ, ಭಿನ್ನಾಭಿಪ್ರಾಯವಿಲ್ಲ. ಸರ್ಕಾರ ರಚನೆ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಒಪ್ಪಂದ ಮಾಡಿಕೊಂಡಿರುವಂತೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಐದು ವರ್ಷಗಳ ಪೂರ್ಣ ಆಡಳಿತ ನಡೆಸಲಿದೆ ಎಂದು ಹೇಳಿದರು.


ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಲೋಕಸಭಾ ಚುನಾವಣೆ ವರೆಗೆ ಮಾತ್ರ ಮುಂದುವರಿಯಲಿದೆ ಎಂದು ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಜಿ.ಪರಮೇಶ್ವರ್ ಅವರು, "ಸಿದ್ದರಾಮಯ್ಯನವರು ಯಾವ ಕಾರಣಕ್ಕೆ ಹೀಗೆ ಹೇಳಿದ್ದಾರೋ ನಂಗೆ ಗೊತ್ತಿಲ್ಲ, ಅವರನ್ನೇ ಹೋಗಿ ಕೇಳಿ" ಎಂದಿದ್ದಾರೆ. 


ಒಟ್ಟಾರೆ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ನಡುವೆ ಸರಕಾರದ ಅವಧಿ, ಬಜೆಟ್ ಮಂಡನೆ ಮೊದಲಾದ ವಿಚಾರಗಳಲ್ಲಿ ಮುಸುಕಿನ ಗುದ್ದಾಟ ಆರಂಭವಾಗಿದೆ. ಕೆಲವು ದಿನಗಳ ಹಿಂದೆ ಒಂದು ವರ್ಷದವರೆಗೆ ನನ್ನನ್ನೂ ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಅದಕ್ಕೆ ಪೂರಕ ಎಂಬಂತೆ ಇದೀಗ ಸಿದ್ದರಾಮಯ್ಯನವರು ಲೋಕಸಭೆ ಚುನಾವಣೆ ಬಳಿಕ ಏನಾಗುತ್ತೋ ನೋಡೋಣ ಎಂದು ಹೇಳಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.