ಮೈಸೂರು: ಮಂಡ್ಯ ಲೋಕಸಭಾ ಉಪಚುನಾವಣೆ ದಿನಾಂಕ ಪ್ರಕಟವಾದ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚುನಾವಣಾ ನೀತಿ ಸಂಹಿತೆ ಬಿಸಿ ತಟ್ಟಿದೆ. 


COMMERCIAL BREAK
SCROLL TO CONTINUE READING

ಇಡೀ ಮೈಸೂರು ಜಿಲ್ಲೆಗೆ ನೀತಿ ಸಂಹಿತೆ ಅನ್ವಯವಾಗುವ ಹಿನ್ನೆಲೆಯಲ್ಲಿ ನೀತಿ ಸಂಹಿತೆ ವಿನಾಯಿತಿ ಕೋರಿ ಮೈಸೂರು ಜಿಲ್ಲಾಡಳಿತ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿದ್ದು, ಚುನಾವಣಾ ಆಯೋಗ ನಾಳೆ ತನ್ನ ನಿಲುವನ್ನು ನಿರ್ಧರಿಸಲಿದೆ. 


ಒಂದು ವೇಳೆ ಚುನಾವಣಾ ಆಯೋಗದಿಂದ ವಿನಾಯಿತಿ ಸಿಗದೇ ಇದ್ದಲ್ಲಿ ಸಿಎಂ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ದಸರಾದಿಂದ ದೂರ ಇರುವ ಸಾಧ್ಯತೆ ಇದೆ. ಸರ್ಕಾರಿ ಕಾರ್ಯಕ್ರಮಗಳಿಂದ ದೂರ ಇರುವಂತೆ ಜನಪ್ರತಿನಿಧಿಗಳಿಗೆ ಸೂಚನೆ ನೀಡಲಾಗಿದೆ. ಚುನಾವಣಾ ಆಯೋಗದಿಂದ ಸ್ಪಷ್ಟನೆ ಬರುವವರೆಗೆ ಸಭಾ ಕಾರ್ಯಕ್ರಮದಿಂದ ದೂರಯಿರುವಂತೆ ಜನಪ್ರತಿನಿಧಿಗಳಿಗೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆಯಿಂದ ಜನಪ್ರತಿನಿಧಿಗಳು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. 


ಕೇಂದ್ರ ಚುನಾವಣಾ ಆಯೋಗ  ಐದು ರಾಜ್ಯಗಳ ಚುನಾವಣೆಯನ್ನು ಎರಡು ಹಂತಗಳಲ್ಲಿ ನಡೆಸುವ ನಿರ್ಧಾರವನ್ನು ಘೋಷಿಸಿದ ಜತೆಯಲ್ಲೇ ಕರ್ನಾಟಕದ ಉಪ ಚುನಾವಣೆಗಳಿಗೂ ದಿನಾಂಕ ನಿಗದಿ ಪ್ರಕಟಿಸಿದೆ. ನವೆಂಬರ್​ 3ರಂದು ಮೂರು ಲೋಕಸಭಾ ಕ್ಷೇತ್ರಗಳಿಗೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.


ಸಿದ್ದು ನ್ಯಾಮಗೌಡ ಅವರ ಅಕಾಲಿಕ ಮರಣದಿಂದ ತೆರವಾದ ಜಮಖಂಡಿ ಕ್ಷೇತ್ರ, ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ರಾಮನಗರ ಕ್ಷೇತ್ರ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ತೆರವಾದ ಶಿವಮೊಗ್ಗ, ಶ್ರೀರಾಮುಲು ಅವರ ಬಳ್ಳಾರಿ ಮತ್ತು ಸಿ.ಎಸ್​. ಪುಟ್ಟರಾಜು ಅವರಿಂದ ತೆರವಾದ ಮಂಡ್ಯ ಲೋಕಸಭೆಗಳಿಗೆ ಚುನಾವಣೆ ನಡೆಯಲಿದೆ. 


ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಅಕ್ಟೋಬರ್ 10 ರಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಾಡಹಬ್ಬ ದಸರಾಕ್ಕೆ ಚಾಲನೆ ನೀಡಲಿದ್ದರು. ಆದರೆ ಇದೀಗ ಚುನಾವಣಾ ಆಯೋಗ ಮಂಡ್ಯ ಲೋಕಸಭಾ ಉಪಚುನಾವಣೆಗೆ ದಿನಾಂಕ ಪ್ರಕಟಿಸಿದ್ದು, ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕು ಕೂಡ ಇದರ ವ್ಯಾಪ್ತಿಗೆ ಬರಲಿದ್ದು ಮೈಸೂರಿನಲ್ಲೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ದಸರಾ ಕಾರ್ಯಕ್ರಮದಲ್ಲಿಯೂ ಕೂಡ ಯಾವ ಜನಪ್ರತಿನಿಧಿಗಳೂ ಭಾಗವಹಿಸುವಂತಿಲ್ಲ.