ಶ್ರೀಮಂತ ಉದ್ಯೋಗಪತಿಗಳಿಂದ ಕರೋನ ತೆರಿಗೆ ಸಂಗ್ರಹಿಸಿ, ಖರ್ಚು ಕಡಿಮೆ ಮಾಡಿ: ಕುಮಾರಸ್ವಾಮಿ
ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಮೊದಲ ಟ್ವೀಟ್ ನಲ್ಲಿ `ರಿಸರ್ವ ಬ್ಯಾಂಕ್ ಒಳಗೊಂಡಂತೆ ಅನೇಕ ಸಂಸ್ಥೆಗಳು ಭಾರತದ ಜಿಡಿಪಿ ಬೆಳವಣಿಗೆ ತೀವ್ರ ಕುಸಿತಕ್ಕೆ ಇಳಿಯುವ ಮುನ್ಸೂಚನೆ ಕೊಟ್ಟಿರುವಾಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನಸಾಮಾನ್ಯನ ಕಯ್ಯಲ್ಲಿ ಹಣ ಉಳಿಸುವ ಮಾರ್ಗೋಪಾಯಗಳನ್ನು ಹುಡುಕಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ `ಕಾಸ್ಟ್ ಆಫ್ ಲಿವಿಂಗ್` ಕಡಿಮೆ ಮಾಡುವುದು ಸರಕಾರಗಳ ಆದ್ಯತೆ ಆಗಲಿದೆ` ಎಂದಿದ್ದಾರೆ.
ಬೆಂಗಳೂರು: ಮೊದಲೇ ಕುಸಿದಿದ್ದ ದೇಶದ ಅರ್ಥ ವ್ಯವಸ್ಥೆ ಇನ್ನಷ್ಟು ಅಸ್ತವ್ಯಸ್ತಗೊಳಿಸಿರುವ 'ಕೊರೋನಾ ಪರಿಸ್ಥಿತಿ' ನಿಭಾಯಿಸಲು, ಬಡವರಿಗೆ ಬಲ ನೀಡಲು, ಆರ್ಥಿಕತೆಗೆ ಚುರುಕು ಮುಟ್ಟಿಸಲು ಕುಬೇರ ಉದ್ಯೋಗಪತಿಗಳಿಂದ ಕರೋನ ತೆರಿಗೆಯನ್ನು ಸಂಗ್ರಹಿಸಲಿ. ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ. ಬಾಡಿಗೆ ಮುಂದೂಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸಲಹೆ ನೀಡಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಮೊದಲ ಟ್ವೀಟ್ ನಲ್ಲಿ 'ರಿಸರ್ವ ಬ್ಯಾಂಕ್ ಒಳಗೊಂಡಂತೆ ಅನೇಕ ಸಂಸ್ಥೆಗಳು ಭಾರತದ ಜಿಡಿಪಿ ಬೆಳವಣಿಗೆ ತೀವ್ರ ಕುಸಿತಕ್ಕೆ ಇಳಿಯುವ ಮುನ್ಸೂಚನೆ ಕೊಟ್ಟಿರುವಾಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನಸಾಮಾನ್ಯನ ಕಯ್ಯಲ್ಲಿ ಹಣ ಉಳಿಸುವ ಮಾರ್ಗೋಪಾಯಗಳನ್ನು ಹುಡುಕಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ 'ಕಾಸ್ಟ್ ಆಫ್ ಲಿವಿಂಗ್' ಕಡಿಮೆ ಮಾಡುವುದು ಸರಕಾರಗಳ ಆದ್ಯತೆ ಆಗಲಿದೆ' ಎಂದಿದ್ದಾರೆ.
ಇನ್ನೊಂದು ಟ್ವೀಟ್ ನಲ್ಲಿ 'ಲಾಕ್ ಡೌನ್ ತಗೆದ ತಕ್ಷಣವೇ ಆರ್ಥಿಕ ಸ್ಥಿತಿ ಯಥಾಸ್ಥಿತಿಗೆ ಮರಳಲಾರದು. ಜಿಡಿಪಿ ಬೆಳವಣಿಗೆ ಈ ಹಿಂದೆ ಇದ್ದ ಸ್ಥಿತಿಗೆ ಮರಳಲು ವರ್ಷಗಳೇ ಬೇಕಾಗಬಹುದು' ಎಂಬ ಅಂದಾಜು ಮಾಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ 'ಈ ಹಠಾತ್ ಶಾಕ್ ನಿಂದ ಜನಸಾಮಾನ್ಯರು ಸುಧಾರಿಸಿಕೊಳ್ಳಲು ಅನುವಾಗುವಂತೆ ಬಾಡಿಗೆ ಮುಂದೂಡಿಕೆ ಬದಲಾಗಿ ಭಾಗಶಃ ಬಾಡಿಗೆ ವಿನಾಯಿತಿ, ಖಾಸಗಿ ಸ್ಕೂಲು/ಕಾಲೇಜುಗಳ ಫೀಸ್ ಕಡಿತ, ವಿದ್ಯುತ್ ಬಿಲ್ ಕಡಿತ, ಪೆಟ್ರೋಲ್/ಡೀಸೆಲ್ ದರ ಕಡಿತ ಘೋಷಣೆ ಮಾಡುವುದು ಸೂಕ್ತ' ಎಂದು ಸಲಹೆ ಮಾಡಿದ್ದಾರೆ.
ಮಗದೊಂದು ಟ್ವೀಟ್ ನಲ್ಲಿ 'ಅನೇಕ ಖಾಸಗಿ ಕಂಪನಿಗಳು ಈಗಾಗಲೇ ಸಿಬ್ಬಂದಿ ಕಡಿತ ಮತ್ತು ಸಂಬಳ ಕಡಿತ ಮಾಡುವ ತೀರ್ಮಾನ ತಗೆದುಕೊಂಡಿವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸಲಿದೆ ಹೀಗಾಗಿ ಸರಕಾರ ಜನಕಲ್ಯಾಣ ಯೋಜನೆಗಳ ಮೇಲೆ ಹೆಚ್ಚು ಖರ್ಚು ಮಾಡಬೇಕಾಗುವುದರರಿಂದ ಕುಬೇರ ಉದ್ಯೋಗಪತಿಗಳಿಂದ ಕರೋನ ತೆರಿಗೆಯನ್ನು ಸಂಗ್ರಹಿಸಲಿ' ಎಂಬ ಶಿಫಾರಸು ಮಾಡಿದ್ದಾರೆ.
ತಮ್ಮ ಕಡೆಯ ಟ್ವೀಟ್ ನಲ್ಲಿ ಕುಮಾರಸ್ವಾಮಿ ಅವರು 'ರೈತರು ಮತ್ತು ಅಸಂಘಟಿತ ವಲಯದ ಕಾರ್ಮಿಕರ ಜೀವನೋಪಾಯಗಳ ರಕ್ಷಣೆ ಮಾಡುವುದು ತುರ್ತಿನ ಆದ್ಯತೆಯಾಗಿದೆ. ಟ್ಯಾಕ್ಸಿ ಮತ್ತು ಆಟೋ ಚಾಲಕರು, ಗಾರ್ಮೆಂಟ್ ಕೆಲಸಗಾರರು, ಕಟ್ಟಡ ಕಾರ್ಮಿಕರು ಇತ್ಯಾದಿ ನಗರ ಪ್ರದೇಶದ ಬಡ ಸಮುದಾಯಕ್ಕೋಸ್ಕರ ಸರಕಾರ ಹೆಚ್ಚಿನ ಪರಿಹಾರ ಒದಗಿಸುವ ಕೆಲಸ ಮಾಡಬೇಕಾಗಿದೆ' ಎಂದು ಹೇಳಿದ್ದಾರೆ.