ಮಂಗಳೂರಿನ ಬದಲು ದೆಹಲಿ ಚಲೋ ಮಾಡಿ: ಸಿಎಂ
ಸಾವಿರಾರು ಬೈಕ್‍ಗಳಿಗೆ ಬಾವುಟ ಕಟ್ಟಿಕೊಂಡು, ಘೋಷಣೆಗಳನ್ನು ಕೂಗಿಕೊಂಡು ಹೊರಟರೆ ಶಾಂತಿಗೆ ಭಂಗವಾಗುವುದಿಲ್ಲವೇ ? ಸಾರ್ವಜನಿಕರಿಗೆ ತೊಂದರೆ ಆಗುವುದಿಲ್ಲವೇ ? ಬೇಕಾದರೆ ಬಿಜೆಪಿಯವರು ಪಾದಯಾತ್ರೆ ಮಾಡಲಿ. ಅದನ್ನು ನಾವೂ ಮಾಡಿದ್ದೇವೆ. ಅದು ಬಿಟ್ಟು ರಸ್ತೆಗಳನ್ನು ಬಂದ್ ಮಾಡುವುದು ಸರಿಯೇ ? ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ಸಮಾಜದ ಸಾಮರಸ್ಯ ಕೆಡಿಸುವ ಮಂಗಳೂರು ಚಲೋ ಬದಲಿಗೆ ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ದೆಹಲಿ ಚಲೋ ಮಾಡಿ. ನಾವೂ ಬರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಬಿಜೆಪಿಯ ಮಂಗಳೂರು ಚಲೋ ಬೈಕ್ ರ್ಯಾಲಿ ಕುರಿತು ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಯವರು ಈ ರೀತಿ ಪ್ರತಿಕ್ರಿಯಿಸಿದರು. ಸಹಕಾರ ಬ್ಯಾಂಕ್‍ಗಳ ಮೂಲಕ ರೈತರು ಪಡೆದಿರುವ ಸಾಲವನ್ನು 50 ಸಾವಿರ ರೂ.ಗಳ ವರೆಗೆ ನಾವು ಮನ್ನಾ ಮಾಡಿದ್ದೇವೆ. ರಾಷ್ಟ್ರೀಕೃತ ಮತ್ತು ಗ್ಯಾಮೀಣ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ ಸಾಲ 42 ಸಾವಿರ ಕೋಟಿ ರೂ.ಗಳಿಷ್ಟಿದೆ.
ಅದನ್ನು ಮನ್ನಾ ಮಾಡುವಂತೆ ಪ್ರಧಾನಿಯವರ ಮೇಲೆ ಒತ್ತಡ ಹೇರಲು ಬಿಜೆಪಿಯವರು ದೆಹಲಿ ಚಲೋ ಮಾಡಲಿ. ನಾವೂ ಕೈ ಜೋಡಿಸುತ್ತೇವೆ. ಅದು ಬಿಟ್ಟು ಸಮಾಜದ ಶಾಂತಿ ಮತ್ತು ಸಾಮರಸ್ಯ ಹಾಳು ಮಾಡುವ, ಸಾರ್ವಜನಿಕರಿಗೆ ತೊಂದರೆ ನೀಡುವ ರ್ಯಾಲಿಗಳೇಕೆ ಬೇಕು ಎಂದು ಮುಖ್ಯಮಂತ್ರಿಯವರು ಪ್ರಶ್ನಿಸಿದ್ದಾರೆ.
ಬಿಜೆಪಿಯವರು ಪಾದಯಾತ್ರೆ ಅಥವಾ ಬಹಿರಂಗ ಸಭೆ ಮಾಡಿದರೆ ಅದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಬೈಕ್ ರ್ಯಾಲಿ ಒಪ್ಪುವುದಿಲ್ಲ. ಸಾವಿರಾರು ಬೈಕ್‍ಗಳು 4-5 ಕಡೆಗಳಿಂದ ರಸ್ತೆಗೆ ಇಳಿದರೆ ಸಾರ್ವಜನಿಕರಿಗೆ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಅದು ಬೇಡ ಎಂಬುದಷ್ಟೇ ನಮ್ಮ ನಿಲುವು ಎಂದು ಹೇಳಿದರು.
ಇಷ್ಟಕ್ಕೂ ಸಮಯ ಹಾಳು ಮಾಡುವ ಇಂಥ ಕಾರ್ಯಕ್ರಮಗಳು ಏಕೆ ಬೇಕು ? ಮಂಗಳೂರು ಚಲೋ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಜೆಪಿಯವರು ಮುದ್ರಿಸಿರುವ ಪುಸ್ತಕ ನೋಡಿದ್ದೇನೆ. ಅದರಲ್ಲಿ ಪ್ರಚೋದನಕಾರಿ ಬರಹಗಳೇ ಇವೆ. ಸಮಾಜದ ಶಾಂತಿ ಮತ್ತು ಸಾಮರಸ್ಯ ಹಾಳು ಮಾಡುವ ಭಾಷಣಗಳಿವೆ. ನಾವು ಸಮಾಜದಲ್ಲಿ ಸಾಮರಸ್ಯ ನೆಲೆಸಲು ಪ್ರಯತ್ನಿಸಬೇಕು. ಅದಕ್ಕೆ ಭಂಗ ತರುವ ಕೆಲಸ ಮಾಡಬಾರದು.
ಸಾವಿರಾರು ಬೈಕ್‍ಗಳಿಗೆ ಬಾವುಟ ಕಟ್ಟಿಕೊಂಡು, ಘೋಷಣೆಗಳನ್ನು ಕೂಗಿಕೊಂಡು ಹೊರಟರೆ ಶಾಂತಿಗೆ ಭಂಗವಾಗುವುದಿಲ್ಲವೇ ? ಸಾರ್ವಜನಿಕರಿಗೆ ತೊಂದರೆ ಆಗುವುದಿಲ್ಲವೇ ? ಬೇಕಾದರೆ ಬಿಜೆಪಿಯವರು ಪಾದಯಾತ್ರೆ ಮಾಡಲಿ. ಅದನ್ನು ನಾವೂ ಮಾಡಿದ್ದೇವೆ. ಅದು ಬಿಟ್ಟು ರಸ್ತೆಗಳನ್ನು ಬಂದ್ ಮಾಡುವುದು ಸರಿಯೇ ? ಎಂದು ಮುಖ್ಯಮಂತ್ರಿಯವರು ಪ್ರಶ್ನಿಸಿದರು.
ಬೈಕ್ ರ್ಯಾಲಿ ಮಾಡಲು ಯಾರಪ್ಪನ ಅಪ್ಪಣೆಯೂ ಬೇಕಿಲ್ಲ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ನಾನು ಅವರಂತೆ ಏಕವಚನ ಬಳಸುವುದಿಲ್ಲ. ಅವರ ಭಾಷೆಯನ್ನು ಅನುಸರಿಸುವುದಿಲ್ಲ. ಕೆಟ್ಟ ಪದಗಳಿಂದಲೂ ಟೀಕೆ ಮಾಡುವುದಿಲ್ಲ. ಯಡಿಯೂರಪ್ಪ ಅವರು ವೀರಾವೇಷದಿಂದ ಮಾತನಾಡಿದರೆ ಅದಕ್ಕೆ ಕಾನೂನು ರೀತ್ಯ ಉತ್ತರ ನೀಡಬೇಕಾಗುತ್ತದೆ.
ಇಷ್ಟಕ್ಕೂ ಬಿಜೆಪಿಯವರ ರ್ಯಾಲಿ ಹಿಂದೂಪರ ಅಲ್ಲ. ಅದು ಸಮಾಜ ಮತ್ತು ಸಾಮರಸ್ಯವನ್ನು ಹಾಳು ಮಾಡುವುದರ ಪರವಾಗಿದೆ ಎಂದು ಮುಖ್ಯಮಂತ್ರಿಯವರು ಹೇಳಿದರು.