ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. 


COMMERCIAL BREAK
SCROLL TO CONTINUE READING

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಇಂದು ಎರಡು ವರ್ಷಗಳ ಹಿಂದೆ ಹತ್ಯೆಗೀಡಾಗಿದ್ದ ಬಿಜೆಪಿ ಕಾರ್ಯಕರ್ತ ರಾಜು ಮನೆಗೆ ಭೇಟಿ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿ, ಸಾಂತ್ವನ ಹೇಳಿದ್ದರು. ಆದರೆ, ಇದೇ ಸಂದರ್ಭದಲ್ಲಿ ಮೃತ ರಾಜು ಕುಟುಂಬಕ್ಕೆ 5 ಲಕ್ಷ ರೂ. ಚೆಕ್ ಸಹಾ ನೀಡಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ. 



ಈ ಸಂಬಂಧ ಕೆಪಿಸಿಸಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಬಿಜೆಪಿ ಸಂಸದ ಮತ್ತು ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಸಂಸದರಾದ ಅನಂತ್ ಕುಮಾರ್, ಪ್ರತಾಪ್ ಸಿಂಹ ಅವರು ಕಳೆದ ಒಂದೂವರೆ ವರ್ಷದ ಹಿಂದೆ ಮೃತಪಟ್ಟ ಬಿಜೆಪಿ ಕಾರ್ಯಕರ್ತ ರಾಜು ಮನೆಗೆ ಭೇಟಿ ನೀಡಿ, ಈ ಸಂದರ್ಭದಲ್ಲಿ ಆ ಕುಟುಂಬಕ್ಕೆ 5 ಲಕ್ಷ ರೂ. ಚೆಕ್ ನೀಡಿದ್ದಾರೆ. ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ವಿವರಿಸಿದೆ. 


ಅಲ್ಲದೆ, ಅಮಿತ್ ಷಾ ಅವರು ಈ ಹಿಂದೆ ಬಹಳಷ್ಟು ಸಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದರು. ಆದರೆ ಅಂದಿನಿಂದ ಇಂದಿನವರೆಗೂ ಒಂದು ದಿನವೂ ರಾಜು ಮನೆಗೆ ಭೇಟಿ ನೀಡಿರಲಿಲ್ಲ. ಇದೀಗ ಸಾಂತ್ವನ ಹೇಳುವ ನೆಪದಲ್ಲಿ ಅಮಿತ್ ಷಾ 5 ಲಕ್ಷ ರೂ. ಚೆಕ್ ನೀಡಿದ್ದು, ಸಾವಿನ ಮನೆಯಲ್ಲಿ ಹಣ ಕೊಟ್ಟು ಅನುಕಂಪ ಗಿಟ್ಟಿಸಲು ಬಿಜೆಪಿ ಯತ್ನಿಸುತ್ತಿದೆ. ಹಾಗಾಗಿ ಬಿಜೆಪಿ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಯೋಗಕ್ಕೆ ನೀಡಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ.