ಬೆಂಗಳೂರು: ಸಮಾಜವಾದಿ ಚಿಂತಕ, ಮಾಜಿ ಸಚಿವ ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರು ತಮ್ಮ ಸುದೀರ್ಘ‌ 57 ವರ್ಷಗಳ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಲೋಕಸಭೆ ಸೇರಿ ಇನ್ನು ಯಾವುದೇ ಚುನಾವಣೆಗೆ ಸ್ಪರ್ಧಿಸಲ್ಲ. ಚುನಾವಣೆ ರಾಜಕೀಯ ಸಾಕಾಗಿದೆ. ಹೀಗಾಗಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಗೋಡು ತಿಮ್ಮಪ್ಪ, ನನಗೆ ವಯಸ್ಸಾಯ್ತು. ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಹೋರಾಟ ನಡೆಸಿದ್ದೇನೆ. ಇಷ್ಟು ವರ್ಷ ಹೋರಾಟ ಮಾಡಿದ್ದು ಸಾಕು. ರಾಜಕೀಯವಾಗಿ ನಿವೃತ್ತಿ ಪಡೆಯುತ್ತೇನೆ. ಸಮಾಜದಲ್ಲಿ ಇನ್ಮುಂದೆ ಬೇರೆ ರೂಪದಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದರು.


ಸಾಗರದಲ್ಲಿ ವಕೀಲರಾಗಿ ವೃತ್ತಿ ಜೀವನವನ್ನು ಆರಂಭಿಸಿದ ಕಾಗೋಡು ತಿಮ್ಮಪ್ಪ ಅವರಿಗೆ ಹೆಚ್ಚಾಗಿ ಗೇಣಿ ರೈತರ ಸಮಸ್ಯೆಯ ಕೇಸುಗಳೇ ಬರುತ್ತಿದ್ದವು. ಹಣಕ್ಕೆ ಒತ್ತಾಯಿಸದೇ ಅವುಗಳನ್ನು ನಡೆಸುತ್ತಿದ್ದರು. ಜೊತೆಗೆ ಸಮಾಜವಾದೀ ರೈತ ಪರ ಹೋರಾಟಕ್ಕಾಗಿ ಹಳ್ಳಿ ಹಳ್ಳಿಗಳಿಗೆ ಸೈಕಲ್ ನಲ್ಲಿ ತೆರಳಿ ಜನ ಜಾಗೃತಿ ಮೂಡಿಸುತ್ತಿದ್ದರು. 1961ರಲ್ಲಿ ತಾಲೂಕು ಬೋರ್ಡ್ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದ್ದ ಕಾಗೋಡು ತಿಮ್ಮಪ್ಪ ಅವರನ್ನು ಸಮಾಜವಾದೀ ಪಕ್ಷವು 1962 ರಲ್ಲಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಿಲ್ಲಿಸಿತು. ಅದರಲ್ಲಿ, ಕಾಂಗ್ರೆಸ್ಸಿನ ಲಕ್ಷ್ಮಿಕಾಂತಪ್ಪನವ ರಿಂದ ಕೇವಲ 4848 ಮತಗಳಿಂದ ಸೋಲನ್ನು ಅನುಭವಿಸಿದರು. 


2013ರಲ್ಲಿ ಸ್ಪೀಕರ್ ಆಗಿಯೂ ಕಾರ್ಯನಿರ್ವಹಿಸಿದ್ದ ಕಾಗೋಡು ತಿಮ್ಮಪ್ಪ, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹರತಾಳು ಹಾಲಪ್ಪ ವಿರುದ್ಧ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.