ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಖರ್ಗೆಗೆ ಸಿಎಂ ಪಟ್ಟ, ದೇವೇಗೌಡರ ಹೊಸ ಪ್ಲಾನ್ .!
ರಾಜ್ಯದಲ್ಲಿನ 13 ತಿಂಗಳ ಮೈತ್ರಿ ಸರ್ಕಾರವನ್ನು ಉಳಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಈಗ ತಮ್ಮ ಪದವಿಯನ್ನು ತ್ಯಜಿಸಲಿದ್ದಾರೆ ಎಂದು ಯುಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬೆಂಗಳೂರು: ರಾಜ್ಯದಲ್ಲಿನ 13 ತಿಂಗಳ ಮೈತ್ರಿ ಸರ್ಕಾರವನ್ನು ಉಳಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಈಗ ತಮ್ಮ ಪದವಿಯನ್ನು ತ್ಯಜಿಸಲಿದ್ದಾರೆ ಎಂದು ಯುಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈಗ 11 ಶಾಸಕರು ರಾಜಿನಾಮೆ ನೀಡಿರುವ ಹಿನ್ನಲೆಯಲ್ಲಿ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ದೇವೇಗೌಡರು ಸಿಎಂ ಸ್ಥಾನಕ್ಕೆ ಮಲ್ಲಿಕಾರ್ಜುನ್ ಖರ್ಗೆ ಅವರ ಹೆಸರನ್ನು ಸೋನಿಯಾ ಗಾಂಧಿ ಬಳಿ ಪ್ರಸ್ತಾಪಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಸೋನಿಯಾ ಗಾಂಧಿಯವರಿಗೆ ಕರೆ ಮಾಡಿ ಈ ಪ್ರಸ್ತಾಪ ಮುಂದಿಟ್ಟಿರುವ ದೇವೇಗೌಡರು, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಖರ್ಗೆಯವರಿಗೆ ಸಿಎಂ ಪದವಿ ನೀಡುವುದರಲ್ಲಿ ತಮ್ಮದು ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಸೋನಿಯಾ ಗಾಂಧಿ ಸಹಿತ ಈಗಾಗಲೇ ಕೋರ್ ಕಮಿಟಿ ಜೊತೆ ಸಭೆ ಮಾಡಿ ದೇವೇಗೌಡರು ಇಟ್ಟಿರುವ ಪ್ರಸ್ತಾಪದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.ರಾಜ್ಯ ರಾಜಕಾರಣದಿಂದ ದೂರ ಉಳಿದಿದ್ದ ಖರ್ಗೆ ಈಗ ಏಕಾಏಕಿ ಅಲರ್ಟ್ ಆಗಿದ್ದು, ಶಾಸಕರು ರಾಜೀನಾಮೆ ನೀಡಿರುವ ವಿಚಾರವಾಗಿ ಮಾತನಾಡುತ್ತಾ ' ಸ್ಪೀಕರ್ ರಮೇಶ್ ಕುಮಾರ್ ಅವರು ಇನ್ನು ಶಾಸಕರ ರಾಜಿನಾಮೆಯನ್ನು ಸ್ವೀಕರಿಸಬೇಕಾಗಿದೆ. ಅದರಲ್ಲಿ ಕೆಲವರು ತಮ್ಮ ಮನಸ್ಸನ್ನು ಬದಲಾಯಿಸಲಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಈಗಾಗಲೇ ತಾವು ಬಂಡಾಯ ಎದ್ದಿರುವ ಶಾಸಕರ ಜೊತೆ ತಾವು ಮಾತುಕತೆ ನಡೆಸಿರುವುದಾಗಿ ಹೇಳಿದ್ದಾರೆ.
ಇನ್ನು ಖರ್ಗೆಯನ್ನು ಮುಖ್ಯಮಂತ್ರಿಯಾಗಿ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕರೊಬ್ಬರು " ಒಂದು ವೇಳೆ ಖರ್ಗೆಯವರು ರಾಜ್ಯದ ನೇತೃತ್ವವನ್ನು ವಹಿಸುವುದಾದಲ್ಲಿ ಹೈದರಾಬಾದ್ ಕರ್ನಾಟಕದ ಭಾಗದ ಬಿಜೆಪಿ ಶಾಸಕರು ಸಹಿತ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎಂದು ಹೇಳಿದರು.