ಬೆಂಗಳೂರು : ಬರ ಹಾಗೂ ಪ್ರವಾಹಪೀಡಿತ ಪ್ರದೇಶಗಳಿಗೆ ನೆರವು ಒದಗಿಸುವಲ್ಲಿ ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಸೆಪ್ಟೆಂಬರ್ 24ರಂದು ಬೃಹತ್ ಪತ್ರಿಭಟನೆ ನಡೆಸಲಾಗುವುದು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳೂ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಬೆಳಗಾವಿಯಲ್ಲಿ 24ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರು, ಸಂಸದರು, ಪಕ್ಷದ ಮುಖಂಡರು ಭಾಗವಹಿಸುವರು ಎಂದು ಅವರು ತಿಳಿಸಿದ್ದಾರೆ.


ಸಭೆಯ ಬಳಿಕ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದ 22 ಜಿಲ್ಲೆ ಹಾಗೂ 103 ತಾಲೂಕುಗಳಲ್ಲಿ ಹಿಂದೆಂದೂ ಕಾಣದಂತಹ ಪ್ರವಾಹ ಉಂಟಾಗಿದೆ. ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆಯಾಗಿದೆ. ಪರಿಹಾರ ಕಾರ್ಯ ಎಲ್ಲಿಯೂ ಸಮರ್ಪಕವಾಗಿ ಆಗಿಲ್ಲ ಎಂದು ಸಭೆಯಲ್ಲಿ ಶಾಸಕರು ತಿಳಿಸಿದ್ದಾರೆ. ನೀರು ನುಗ್ಗಿರುವ ಮನೆಗಳ ಮಾಲೀಕರಿಗೆ ತಲಾ ಹತ್ತು ಸಾವಿರ ರೂ.ಗಳ ಪರಿಹಾರ ಕೊಟ್ಟಿರುವುದನ್ನು ಬಿಟ್ಟರೆ ಪ್ರವಾಹಪೀಡಿತ ಪ್ರದೇಶಗಳಲ್ಲಿ ಯಾವುದೇ ಕೆಲಸವಾಗಿಲ್ಲ. ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‍ಗಳನ್ನು ಬಹುತೇಕ ಕಡೆ ನಿರ್ಮಿಸಿಲ್ಲ ಎಂದರು.


ಪ್ರವಾಹದಿಂದ ಶಾಲೆಗಳು ಕುಸಿದಿದ್ದು, ಅಂತಹ ಕಡೆ ಶಾಲೆಗಳು ಪುನಾರಂಭವಾಗಿಲ್ಲ. ಆ ಜನರಿಗೆ ಕುಡಿಯುವ ನೀರಿಲ್ಲ, ದನ-ಕರುಗಳಿಗೆ ಮೇವು ಒದಗಿಸಿಲ್ಲ. ಮನೆಗಳನ್ನು ಕಳೆದುಕೊಂಡವರು ಈಗಲೂ ಜನರು ರಸ್ತೆ ಬದಿಯಲ್ಲಿ ವಾಸವಾಗಿದ್ದಾರೆ. ನಾನು ಹಾಗೂ ಪಕ್ಷದ ನಾಯಕರು ರಾಜ್ಯದ ನಾನಾ ಕಡೆ ಭೇಟಿ ಕೊಟ್ಟಾಗ ಸಂತ್ರಸ್ತರ ಕಷ್ಟವನ್ನು ಕಣ್ಣಾರೆ ನೋಡಿದ್ದೇವೆ. 


ಮರುವಸತಿಗೆ ಸಂತ್ರಸ್ತರ ಬೇಡಿಕೆ:
ಬಹುತೇಕ ಕಡೆ ಪ್ರವಾಹಪೀಡಿತ ಗ್ರಾಮಗಳ ಸ್ಥಳಾಂತರ ಹಾಗೂ ಮರುವಸತಿಗೆ ಸಂತ್ರಸ್ತರು ಬೇಡಿಕೆ ಇಟ್ಟಿದ್ದಾರೆ. ಆ ಕುರಿತು ರಾಜ್ಯ ಸರ್ಕಾರ ಈ ವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಹತ್ತು ಸಾವಿರ ರೂ.ಗಳ ಪರಿಹಾರವೂ ಅನೇಕ ಸಂತ್ರಸ್ತರಿಗೆ ಸಿಕ್ಕಿಲ್ಲ. ಅಣ್ಣ, ತಮ್ಮಂದಿರು ಭಾಗವಾಗಿ ಒಂದೇ ಮನೆಯಲ್ಲಿ ಇದ್ದರೂ ಒಬ್ಬರಿಗೆ ಮಾತ್ರ ಪರಿಹಾರ ಕೊಟ್ಟಿದ್ದಾರೆ. ಈ ಬಗ್ಗೆ ಅನೇಕ ಬಾರಿ ಒತ್ತಾಯ ಮಾಡಿದ್ದರೂ ಪರಿಹಾರವನ್ನು ಸಮರ್ಪಕವಾಗಿ ಕೊಟ್ಟಿಲ್ಲ. 


ನಮಗೂ ಪ್ರವಾಹಕ್ಕೂ ಸಂಬಂಧವೇ ಇಲ್ಲ ಎಂಬಂತಿರುವ ಕೇಂದ್ರ ಸರ್ಕಾರ:
ಇನ್ನು ಕೇಂದ್ರ ಸರ್ಕಾರ ನಮಗೂ ಪ್ರವಾಹಕ್ಕೂ ಸಂಬಂಧವೇ ಇಲ್ಲ ಎಂಬಂತೆ ಇದೆ. ಪ್ರಧಾನಿ ನರೇಂದ್ರಮೋದಿಯವರು ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ಕೊಡಲಿಲ್ಲ. ಕೇಂದ್ರದಿಂದಲೂ ರಾಜ್ಯಕ್ಕೆ ಪರಿಹಾರ ಘೋಷಣೆಯಾಗಿಲ್ಲ. ಕೇಂದ್ರ ಸರ್ಕಾರದಿಂದ ಪರಿಹಾರ ತರುವಲ್ಲಿ ರಾಜ್ಯ ಸರ್ಕಾರವೂ ಮೌನ ವಹಿಸಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಯನ್ನು ಭಾರಿ ಪ್ರಮಾಣದಲ್ಲಿ ಬೆಂಬಲಿಸಿದ್ದಾರೆ. ಆ ಪಕ್ಷದ 25 ಮಂದಿಯನ್ನು ಸಂಸದರನ್ನಾಗಿ ಮಾಡಿದ್ದಾರೆ. ಈ ಸಂಸದರೂ ಸಹ ಪರಿಹಾರದ ವಿಚಾರದಲ್ಲಿ ಏಕೆ ಮೌನ ವಹಿಸಿದ್ದಾರೋ ತಿಳಿದಿಲ್ಲ ಎಂದು ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.


ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಮೋದಿಯವರು ಪ್ರವಾಹ ಕುರಿತು ಒಂದು ಶಬ್ದವನ್ನೂ ಮಾತನಾಡಿಲ್ಲ. ಉಳಿದಂತೆ 53 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಮಳೆ ಇಲ್ಲದೆ ಅನೇಕ ಕಡೆ ಬೆಳೆ ಹಾಳಾಗಿದೆ. ಈ ವರೆಗೆ ಬಿತ್ತನೆ ಸಹ ಆಗಿಲ್ಲ. ಆದರೂ ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳ ಘೋಷಣೆ ಮಾಡಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.