ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಬರುತ್ತಿದೆ, ಮುಂದಿನ 45 ದಿನ ಹುಷಾರಾಗಿರಬೇಕು!
ಕೋವಿಡ್ -19 ಎರಡನೇ ಅಲೆ ಬರುತ್ತಿದ್ದು ಅದನ್ನು ನಿಯಂತ್ರಿಸಲು ಮುಂದಿನ 45 ದಿವಸಗಳು ಬಹಳ ನಿರ್ಣಾಯಕವಾಗಿವೆ. 45 ದಿನಗಳ ಅವಧಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅತ್ಯಗತ್ಯ ಎಂದು ತಜ್ಞರ ಸಮಿತಿ ಸಲಹೆ ನೀಡಿದೆ.
ಬೆಂಗಳೂರು: ರಾಜ್ಯವನ್ನು ಹಿಂದೆಂದೂ ಕಂಡುಕೇಳಿಯದಂತಹ ಕಡು ಕಷ್ಟಕ್ಕೆ ಸಿಲುಕಿಸಿದ್ದ ಕೊರೋನಾ ಈಗ ಎರಡನೇ ಅಲೆಯಲ್ಲಿ ಬರಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ 45 ಭಾರೀ ಹುಷಾರಾಗಿರಬೇಕು ಎಂದು ಆರೋಗ್ಯ ಮತ್ತು ವ್ಯದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ (Dr K Sudhakar) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ತಜ್ಞರ ಸಮಿತಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, 'ಕೋವಿಡ್-19 (Covid 19) ಎರಡನೇ ಅಲೆ ಬರುತ್ತಿದೆ ಎಂದು ತಜ್ಞರ ಸಲಹಾ ಸಮಿತಿ 54 ಸಭೆಗಳನ್ನು ನಡೆಸಿ ವರದಿ ಕೊಟ್ಟಿದೆ. ಸಮಿತಿಯ ವರದಿ ಪ್ರಕಾರ ಮುಂದಿನ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಎರಡನೇ ಅಲೆ ಬರುವ ಸಾಧ್ಯತೆ ಇದೆ. ಅದನ್ನು ತಡೆಯಬೇಕೆಂದು ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.
ಕೋವಿಡ್ -19 ಎರಡನೇ ಅಲೆ ಬರುತ್ತಿದ್ದು ಅದನ್ನು ನಿಯಂತ್ರಿಸಲು ಮುಂದಿನ 45 ದಿವಸಗಳು ಬಹಳ ನಿರ್ಣಾಯಕವಾಗಿವೆ. 45 ದಿನಗಳ ಅವಧಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅತ್ಯಗತ್ಯ ಎಂದು ತಜ್ಞರ ಸಮಿತಿ ಸಲಹೆ ನೀಡಿದೆ ಎಂದು ತಿಳಿಸಿದರು.
ಶೀಘ್ರದಲ್ಲೇ COVID-19 Vaccine ಲಭ್ಯ: ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ
ಮುಂದಿನ 45 ದಿನಗಳು ಜನರು ಗುಂಪು ಗುಂಪಾಗಿ ಸೇರುವುದನ್ನು ನಿಲ್ಲಿಸಬೇಕು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನ ಸೇರುವುದನ್ನು ನಿಯಂತ್ರಿಸಬೇಕು. ಮದುವೆಗಳಲ್ಲಿ 100ಕ್ಕಿಂತ ಹೆಚ್ಚು ಜನರು ಸೇರಲು ಅವಕಾಶ ಮಾಡಿಕೊಡಬಾರದು. ರಾಜಕೀಯ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ 200 ಜನ ಮಾತ್ರ ಸೇರಬೇಕು. ಅಂತ್ಯಕ್ರಿಯೆ ವೇಳೆ 50 ಜನಕ್ಕಿಂತ ಹೆಚ್ಚು ಜನ ಇರಬಾರದು. ಡಿಸೆಂಬರ್ 20ರಿಂದ ಜನವರಿ 2ನೇ ತಾರೀಖಿನವರಿಗೆ ಇನ್ನೂ ನಿರ್ಣಾಯಕವಾಗಿವೆ. ಕೊರೊನಾ ಎರಡನೇ ಅಲೆಯ ಆರಂಭದ ಹಂತವಾಗಿವೆ. ಈ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಕೋವಿಡ್ ಮಾರ್ಗಸೂಚಿಯನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ತಜ್ಞರ ಸಮಿತಿ ವರದಿ ಸಲಹೆ ನೀಡಿದೆ.
ತಜ್ಞರ ಸಮಿತಿ ವರದಿಯ ಮತ್ತೊಂದು ಪ್ರಮುಖ ಶಿಫಾರಸು ಕೋವಿಡ್ ಟೆಸ್ಟ್ (Covid Test) ಗಳ ಬಗ್ಗೆ. ಯಾವ ಕಾರಣಕ್ಕೂ ಕೋವಿಡ್ ಟೆಸ್ಟ್ ಗಳನ್ನು ಕಡಿಮೆ ಮಾಡಬಾರದು. ಪ್ರತಿದಿನ 1,25,000 ಟೆಸ್ಟ್ ಗಳನ್ನು ಮಾಡಲೇಬೇಕು. ವಿಶೇಷವಾಗಿ ರೋಗ ಲಕ್ಷಣ ಇದ್ದವರಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಬೇಕು ಎಂದು ಸೂಚಿಸಿದೆ.
ಶಾಲೆಗಳು ತೆರೆಯಲಿವೆ! ದೇಶಾದ್ಯಂತ ಶಾಲೆಗಳನ್ನು ತೆರೆಯಲು ನಡೆದಿದೆಯೇ ಸಿದ್ಧತೆ, ಇದನ್ನು ಓದಿ
ವರದಿಯ ವಿವರಗಳನ್ನು ತಿಳಿಸಿದ ಆರೋಗ್ಯ ಸಚಿವ ಡಾ. ಸುಧಾಕರ್, ಜನವರಿ ಮತ್ತು ಫೆಬ್ರವರಿಯಲ್ಲಿ ಬರುವ ಕೋವಿಡ್ ಎರಡನೇ ಅಲೆ ಬಗ್ಗೆ ಈಗಿನಿಂದಲೇ ಮುನ್ನೆಚ್ಚರಿಕೆ ಮಾಡಲಾಗುವುದು. ಹೊಸ ವರ್ಷದ ಸಂಭ್ರಮಾಚರಣೆ ಬೇಡ ಎಂದು ತಜ್ಞರ ಸಲಹಾ ಸಮಿತಿ ವರದಿ ನೀಡಿದ್ದು ಸರ್ಕಾರ ಅದನ್ನೂ ಗಂಭೀರವಾಗಿ ಪರಿಗಣಿಸಲಿದೆ. ಮುಖ್ಯವಾಗಿ ಜನ ಒಂದೆಡೆ ಸೇರದಂತೆ ಕ್ರಮ ಕೈಗೊಳ್ಳಲಾಗುವುದು. ರಾತ್ರಿ ಕರ್ಫ್ಯೂ ಬಗ್ಗೆ ಸಮಿತಿ ಏನನ್ನು ಹೇಳಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಕೋವಿಡ್ ವ್ಯಾಕ್ಸಿನ್ (Covid Vaccine) ಬಗ್ಗೆ ಈಗಾಗಲೇ ಮೂರನೇ ಹಂತದ ಕ್ಲಿನಿಕಲ್ ಟೆಸ್ಟ್ ನಡೆದಿದೆ. ಅಗತ್ಯ ಬಿದ್ದರೆ ಲಸಿಕೆ ನೀಡಲು ಖಾಸಗಿ ವಲಯವನ್ನು ಬಳಸಿಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದರು.
ಈಗ ಗ್ರಾಮ ಪಂಚಾಯತಿ ಚುನಾವಣೆ ಬರುತ್ತಿರುವುದರಿಂದ ದೇವಸ್ಥಾನಗಳಲ್ಲಿ ರಾಜಕೀಯ ಚಟುವಟಿಕೆ ನಡೆಯುವುದು ಮತ್ತು ಹೆಚ್ಚು ಜನ ಸೇರ್ಪಡೆಯಾಗುವ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇನೆ. ಗ್ರಾಮ ಪಂಚಾಯತಿ ಚುನಾವಣೆ ನಡೆದರೆ ಮನೆಮನೆಗೆ ವೈರಸ್ ಹರಡಲು ಅವಕಾಶ ಅಂತಾ ಚುನಾವಣಾ ಆಯೋಗದ ಅಧಿಕಾರಗಳೇ ಹೇಳಿದ್ದಾರೆ. ಆದರೂ ಸರ್ಕಾರ ಕೊರೊನಾ ಹರಡದಂತೆ ಪ್ರಯತ್ನ ನಡೆಸಲಿದೆ ಎಂದರು.