ವಿಧಾನ ಸೌಧ `ವಜ್ರಮಹೊತ್ಸವ`ಕ್ಕೆ ಕ್ಷಣಗಣನೆ
60 ವರ್ಷ ಪೂರೈಸಿರುವ ವಿಧಾನ ಸೌಧದ ವಿದ್ಯುತ್ ದೀಪಾಲಂಕಾರ ಮತ್ತು ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದೆ.
ಬೆಂಗಳೂರು: ವಿಧಾನ ಸೌಧ 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 'ವಜ್ರಮಹೊತ್ಸವ'ವನ್ನು ಹಮ್ಮಿಕೊಳ್ಳಲಾಗಿದೆ. ಆ ವಜ್ರಮಹೋತ್ಸವಕ್ಕೆ ಈಗ ಕ್ಷಣಗಣನೆ ಶುರುವಾಗಿದೆ. ಬುಧವಾರ ನಡೆಯಲಿರುವ ವಜ್ರಮಹೋತ್ಸವ ಸಮಾರಂಭಕ್ಕಾಗಿ ವಿಧಾನಸೌಧದ ಹೊರ-ಒಳಭಾಗಗಳಲ್ಲಿ ಕಣ್ಣು ಕೂರೈಸುವಂತೆ ದೀಪಾಲಂಕಾರ ಮಾಡಲಾಗಿದ್ದು, ದ್ವಾರಗಳಿಗೂ ಮೆರುಗು ನೀಡಲಾಗಿದೆ.
ಈ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ವಿಧಾನಮಂಡಲದ ವಿಶೇಷ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವ ಮೂಲಕ ಬೆಳಿಗ್ಗೆ 11 ಗಂಟೆಗೆ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ನಂತರ, ವಿಧಾನಸೌಧ ಹಾಗೂ ವಿಕಾಸಸೌಧದ ಮಧ್ಯೆ ಇರುವ ಗಾಂಧಿ ಪ್ರತಿಮೆ ಎದುರು ಉಭಯ ಸದನಗಳ ಶಾಸಕರು, ರಾಷ್ಟ್ರಪತಿ ಜೊತೆ ಗ್ರೂಪ್ ಫೋಟೊ ತೆಗೆಸಿಕೊಳ್ಳಲಿದ್ದಾರೆ.
ಆನಂತರ ಬ್ಯಾಂಕ್ವೆಟ್ ಹಾಲ್‌ನಲ್ಲಿ ಭೋಜನ ಕೂಟ ಏರ್ಪಡಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿಧಾನಸೌಧ ಕುರಿತಂತೆ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಸೀತಾರಾಂ ನಿರ್ದೇಶಿಸಿರುವ ಸಾಕ್ಷ್ಯ ಚಿತ್ರ ಪ್ರದರ್ಶನ ಹಾಗೂ ಮಾಸ್ಟರ್ ಕಿಶನ್ ನಿರ್ದೇಶನದ ‘3 ಡಿ ವರ್ಚುಯಲ್ ರಿಯಾಲಿಟಿ’ ವಿಡಿಯೊ ಪ್ರದರ್ಶನ ನಡೆಯಲಿದೆ.
ವಿಧಾನಸೌಧದ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆ ಸಂಜೆ 5 ರಿಂದ 6 ಗಂಟೆವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 6ರಿಂದ 6.30 ರವರೆಗೆ ವಿಧಾನಸೌಧ ನಿರ್ಮಾಣಕ್ಕೆ ಪ್ರಧಾನಿ ದಿ. ಜವಾಹರಲಾಲ್ ನೆಹರು ಅವರಿಂದ ಅಡಿಗಲ್ಲು ಹಾಕಿಸಿದ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ ರೆಡ್ಡಿ, ವಿಧಾನಸೌಧ ಕಟ್ಟಡ ನಿರ್ಮಾಣ ಮಾಡಿದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಅವರಿಗೆ ಗೌರವಾರ್ಪಣೆ ನಡೆಯಲಿದ್ದು, ಈ ನಾಯಕರ ಕುಟುಂಬದವರು ಗೌರವ ಸ್ವೀಕರಿಸಲಿದ್ದಾರೆ.
300 ಸದಸ್ಯರು ರಾಷ್ಟ್ರಪತಿಯೊಂದಿಗೆ ಗ್ರೂಪ್ ಫೋಟೋ ತೆಗೆಸಿಕೊಳ್ಳಲಿದ್ದಾರೆ.