ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ  ಕರೋನವೈರಸ್ (Coronavirus) COVID 19 ವ್ಯಾಪಕವಾಗಿ ಹರಡುತ್ತಿದ್ದು ಆತಂಕಗೊಂಡಿರುವ ಜನ ಬೆಂಗಳೂರು ತ್ಯಜಿಸಿ ಅವರವರ ಊರಿಗೆ ಹೊರಡುತ್ತಿದ್ದಾರೆ. ಒಂದೇ ಸಲಕ್ಕೆ ದೊಡ್ಡ ಮಟ್ಟದಲ್ಲಿ ಜನ ಊರಿಗೆ ತೆರಳಿರುವುದರಿಂದ ರಾಜ್ಯ ಸರ್ಕಾರಕ್ಕೆ ಹೊಸ ತಲೆನೋವು ಶುರುವಾಗಿದೆ.


COMMERCIAL BREAK
SCROLL TO CONTINUE READING

ಹಿಂದೆ ವಲಸಿಗರ ವಿಷಯವನ್ನು ಸರಿಯಾಗಿ ನಿರ್ವಹಿಸದೆ ವ್ಯಾಪಕ ಟೀಕೆಗೆ ಗುರಿಯಾಗಬೇಕಾಯಿತು. ಈಗಲೂ ಅದೇ ಸಮಸ್ಯೆ ಆಗಬಹುದು. ಜೊತೆಗೆ ಜನ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿರುವುದರಿಂದ  ಕೋವಿಡ್ -19 (COVID-19)  ಗ್ರಾಮಗಳಿಗೂ ಪಸರಿಸಬಹುದು ಎಂಬ ಆತಂಕ ನಿರ್ಮಾಣವಾಗಿದೆ.


ಸದ್ಯದ ಪರಿಸ್ಥಿತಿಯಲ್ಲಿ ಊರಿಗೆ ಹೋಗುವವರನ್ನು ತಡೆದು ಬೆಂಗಳೂರಿನಲ್ಲಿ ಇಟ್ಟುಕೊಳ್ಳುವುದಕ್ಕೂ ಸಾಧ್ಯ ಇಲ್ಲ. ಏಕೆಂದರೆ ಬೆಂಗಳೂರಿನಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾದರೆ ಅವರನ್ನು ಉಪಚರಿಸಲು ಬೇಕಾದ ಮೂಲಭೂತ ವ್ಯವಸ್ಥೆಗಳನ್ನು ಸರ್ಕಾರ ಮಾಡಿಕೊಂಡಿಲ್ಲ. ಆದುದರಿಂದ ಈಗ ಊರಿಗೆ ಹೊರಟಿರುವವರ ವಿಷಯ ಎರಡು ಹಂಚಿನ ಕತ್ತಿಯಂತಾಗಿದೆ.


ಇದಕ್ಕೆ ಪರಿಹಾರ ಎಂಬಂತೆ ಊರಿಗೆ ಹೋದ ಜನರನ್ನು ಅವರವರ ಊರಿನಲ್ಲೇ ಕ್ವಾರಂಟೈನ್ (Quarantine) ಮಾಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ  ಹಳ್ಳಿಗಳತ್ತ ಹೋಗುತ್ತಿರುವ ಜನರ ಮಾಹಿತಿ ಸಂಗ್ರಹಕ್ಕೆ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.


ಬೆಂಗಳೂರಿನಲ್ಲಿ COVID 19 ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜುಲೈ 6ರಂದು ಸಂಜೆ 4 ಗಂಟೆಗೆ ಬೆಂಗಳೂರು ನಗರ ಶಾಸಕರ ಸಭೆ ಕರೆದಿದ್ದಾರೆ. ಸಭೆಯಲ್ಲಿ ಬೆಂಗಳೂರಿನಲ್ಲಿ COVID 19 ಸೋಂಕು ಹರಡುವುದನ್ನು ತಡೆಗಟ್ಟಲು ಏನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಚರ್ಚಿಸಲಾಗುತ್ತದೆ. ಮುಖ್ಯವಾಗಿ ಲಾಕ್ ಡೌನ್ ಮಾಡಬೇಕೋ ಬೇಡವೋ ಎಂಬುದರ ಸಮಾಲೋಚನೆ ನಡೆಯಲಿದೆ.


ಶಾಸಕರ ಸಭೆಗೆ ಕೆಲ ಕಾಂಗ್ರೆಸ್ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಮಕಾವಸ್ತೆಗೆ ಸಭೆ ಕರೆಯುತ್ತಾರೆ. ಆದರೆ ನಾವು ನೀಡುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಕಳೆದ ಬಾರಿ Random Test ಮಾಡುವಂತೆ ಸಲಹೆ ನೀಡಿದ್ದೆವು. ಆದರೆ ಅದನ್ನು ಸರ್ಕಾರ ಪಾಲಿಸಿಲ್ಲ ಎಂದಿದ್ದಾರೆ.


ಬೆಂಗಳೂರಿನಲ್ಲಿ  COVID 19 ಸೋಂಕು ಮಿತಿಮೀರಿ ಹರಡುತ್ತಿರುವ ನಡುವೆ ಲಾಕ್​ಡೌನ್​ ಘೋಷಣೆ ಮಾಡಿಬಿಡಬಹುದೆಂದು ಜನರು ಬೆಂಗಳೂರು ಬಿಡುತ್ತಿರುವುದರ ಪರಿಣಾಮ ರಾಷ್ಟ್ರೀಯ ಹೆರದ್ದಾರಿಯಲ್ಲಿ ಭಾರೀ ಸಂಚಾರ ದಟ್ಟಣೆ ಕಂಡುಬರುತ್ತಿದೆ.