ಬೆಂಗಳೂರು : ರಾಜ್ಯಪಾಲರ ಕಚೇರಿ ದುರ್ಬಳಕೆ ಮಾಡಿಕೊಂಡು ಸುಳ್ಳು ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಲುಕಿಸಿ ಸರ್ಕಾರ ಅಸ್ಥಿರಗೊಳಿಸುವ ಷಡ್ಯಂತ್ರ ನಡೆಯುತ್ತಿದೆ. ಇಡೀ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುತ್ತದೆ, ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಖಡಕ್ಕಾಗಿ ತಿಳಿಸಿದರು.


COMMERCIAL BREAK
SCROLL TO CONTINUE READING

ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವ ಬಗ್ಗೆ ಶಿವಕುಮಾರ್ ಅವರು ವಿಧಾನಸೌಧದಲ್ಲಿ ಸಂಪುಟ ಸಹೋದ್ಯೋಗಿಗಳ ಜತೆ ಶನಿವಾರ ಮಾಧ್ಯಮಗೋಷ್ಠಿ ನಡೆಸಿದರು.


ಇದನ್ನೂ ಓದಿ:ರಾಜ್ಯಪಾಲರು ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವಕ್ಕೆ ಮಾರಕವಾದ ಪತ್ರ ಕಳುಹಿಸಿದ್ದಾರೆ: ಡಿಕೆಶಿ


ಸಿದ್ದರಾಮಯ್ಯ ಅವರು ನಮ್ಮ ಮುಖ್ಯಮಂತ್ರಿಗಳು, ಅವರು ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆ. ನಮ್ಮ ಮುಖ್ಯಮಂತ್ರಿಗಳು ಈ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಅವರು ನಮ್ಮ ಮುಖ್ಯಮಂತ್ರಿಗಳಾಗಿ ಮುಂದುವರಿಯಲಿದ್ದು, ನಾವು ಒಟ್ಟಾಗಿ ರಾಜ್ಯದ ಜನರ ಸೇವೆ ಮುಂದುವರಿಸುತ್ತೇವೆ. ಕೇವಲ ಕಾಂಗ್ರೆಸ್ ಪಕ್ಷ ಮಾತ್ರವಲ್ಲ ಇಡೀ ಇಂಡಿಯಾ ಒಕ್ಕೂಟ ನಮ್ಮ ಮುಖ್ಯಮಂತ್ರಿಗಳ ಬೆನ್ನಿಗೆ ನಿಲ್ಲಲಿದೆ. ಮುಖ್ಯಮಂತ್ರಿಗಳ ವಿರುದ್ಧ ಸುಳ್ಳು ಪ್ರಕರಣ ಸೃಷ್ಟಿಸಲಾಗಿದೆ. ಹೀಗಾಗಿ ಕಾನೂನು ಚೌಕಟ್ಟಿನಲ್ಲಿ ಹೋರಾಟ ಮುಂದುವರಿಸುತ್ತೇವೆ. ಇದರ ಜತೆಗೆ ರಾಜಕೀಯವಾಗಿಯೂ ಜನರ ಮಧ್ಯೆ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.


ರಾಜ್ಯಪಾಲರ ಕಚೇರಿಯನ್ನು ಬಿಜೆಪಿ ಕಚೇರಿಯಾಗಿ ಪರಿವರ್ತನೆ ಮಾಡಿಕೊಳ್ಳಲು ನಡೆಯುತ್ತಿರುವ ಹುನ್ನಾರದ ವಿರುದ್ಧ ಹೋರಾಟ ಮಾಡುತ್ತೇವೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣೆ ಮಾಡಬೇಕಿದೆ. ಮುಖ್ಯಮಂತ್ರಿಗಳ ವಿರುದ್ಧ ಕಾನೂನು ಬಾಹಿರವಾಗಿ ವಿಚಾರಣೆಗೆ ಅನುಮತಿ ನೀಡಲಾಗಿದೆ. ನಾವು ಕಾನೂನು ಗೌರವಿಸುತ್ತೇವೆ. ದೇಶದ ಕಾನೂನು ನಮಗೆ ರಕ್ಷಣೆ ನೀಡಲಿದೆ ಎಂಬ ವಿಶ್ವಾಸವಿದೆ. ನ್ಯಾಯ ಪೀಠದಿಂದ ಅನ್ಯಾಯ ಆಗುವುದಿಲ್ಲ ಎಂಬ ನಂಬಿಕೆ ಇದೆ. ಹೀಗಾಗಿ ಕಾನೂನು ಸಮರಕ್ಕೆ ನಾವು ಸಜ್ಜಾಗಿದ್ದೇವೆ ಎಂದು ತಿಳಿಸಿದರು.


ಇದನ್ನೂ ಓದಿ: ವೈದ್ಯರ ಮುಷ್ಕರ: ಗಡಿಜಿಲ್ಲೆ ಆಸ್ಪತ್ರೆಗಳಲ್ಲಿ ರೋಗಿಗಳ ಪರದಾಟ, ಚಿಕಿತ್ಸೆ ಸಿಗದೇ ವಾಪಾಸ್!!


ಹಿಂದುಳಿದ ವರ್ಗದ ನಾಯಕ ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಬೆಳೆಯುತ್ತಿರುವುದನ್ನು ಸಹಿಸಲಾಗದೇ ಕೇಂದ್ರ ಬಿಜೆಪಿ ಸರ್ಕಾರ ದೊಡ್ಡ ಪಿತೂರಿ ನಡೆಸಿದೆ. ಇದನ್ನು ಧಿಕ್ಕರಿಸಿ ನಾವು ಹೋರಾಟ ಮಾಡುತ್ತೇವೆ. ರಾಜ್ಯಪಾಲರ ಕಚೇರಿ ಬಿಜೆಪಿ ಪಕ್ಷದ ಕೈಗೊಂಬೆಯಾಗಬಾರದು. ನಮ್ಮ ಸರ್ಕಾರ ಪ್ರತಿ ವರ್ಷ 56 ಸಾವಿರ ಕೋಟಿ ಹಣವನ್ನು ಬಡವರಿಗಾಗಿ ಹಂಚುತ್ತಿದೆ. ಇಂತಹ ಐತಿಹಾಸಿಕ ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರದ ವಿರುದ್ಧ ಈ ಷಡ್ಯಂತ್ರ ನಡೆಸಲಾಗುತ್ತಿದೆ. ಈ ಸರ್ಕಾರ ತೆಗೆಯುವ ಹುನ್ನಾರ ನಡೆಯುತ್ತಿದ್ದು, ಇದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಕಿಡಿಕಾರಿದರು.


ಹಲವು ಬಾರಿ ಇಂತಹ ಪ್ರಕರಣಗಳಲ್ಲಿ ರಾಜ್ಯಪಾಲರು ಯಾವ ರೀತಿ ನಡೆದುಕೊಳ್ಳಬೇಕು ಎಂದು ನ್ಯಾಯಾಲಯಗಳಲ್ಲಿ ಮಾರ್ಗದರ್ಶನ ನೀಡಲಾಗಿದೆ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಜಾರ್ಖಂಡ್, ತೆಲಂಗಾಣ, ಪಂಜಾಬ್ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿನ ಪ್ರಕರಣಗಳು ಇದಕ್ಕೆ ಉದಾಹರಣೆಗಳಾಗಿವೆ ಎಂದರು.


ಇಂದು ಬೆಳಗ್ಗೆ ರಾಜ್ಯಪಾಲರು ಸಂವಿಧಾನ ವಿರೋಧಿ ಹಾಗೂ ಪ್ರಜಾಪ್ರಭುತ್ವಕ್ಕೆ ಮಾರಕವಾದಿ ತೀರ್ಮಾನ ಮಾಡಿದ್ದಾರೆ. 26-7-2024ರಂದು ರಾಜ್ಯಪಾಲರು ನೀಡಿದ ನೋಟೀಸ್ ಗೆ ನಾವು 1-8-2024 ರಂದು ವಿವರವಾದ ಉತ್ತರ ನೀಡಿದ್ದೆವು. ಅಲ್ಲದೆ ಸಚಿವ ಸಂಪುಟ ಸಭೆ ಮಾಡಿ ದ್ವೇಷದ ಪಿತೂರಿಯ ಈ ದೂರನ್ನು ತಿರಸ್ಕರಿಸುವಂತೆ ಮನವಿ ಮಾಡಿದ್ದೆವು. ಈ ಪ್ರಕರಣದ ಮೂರು ದೂರಿನಲ್ಲಿಯೂ ತಿರುಳಿಲ್ಲ. ಸಂವಿಧಾನ ಹಾಗೂ ಕಾನೂನಿನಲ್ಲಿರುವ ಅಂಶವನ್ನು ವಿವರಿಸಿ ಇದು ರಾಜಕೀಯ ಪ್ರೇರಿತ ದೂರು, ಇದನ್ನು ಪರಿಗಣಿಸಬೇಡಿ. ಜನರು ಆರಿಸಿರುವ ಸರ್ಕಾರಕ್ಕೆ ಮನ್ನಣೆ ಸಿಗಬೇಕು. ನಮ್ಮ ಮುಖ್ಯಮಂತ್ರಿಗಳು ಅಧಿಕಾರ ದುರುಪಯೋಗ ಮಾಡಿಲ್ಲ, ಯಾವುದೇ ಲೋಪದೋಷ ಆಗಿಲ್ಲ ಎಂದು ಸ್ಪಷ್ಟವಾಗಿ ರಾಜ್ಯಪಾಲರಿಗೆ ಹಾಗೂ ಜನರಿಗೆ ತಿಳಿಸಿದ್ದೇವೆ ಎಂದು ತಿಳಿಸಿದರು.


ಇದನ್ನೂ ಓದಿ: ಶಾಲಾ ವಾಹನ ಚಕ್ರ ಹರಿದು ಬಾಲಕನ ಕಾಲು ನಜ್ಜುಗುಜ್ಜು


ರಾಜ್ಯಪಾಲರ ಹುದ್ದೆ ಬಹಳ ದೊಡ್ಡ ಸ್ಥಾನ. ಘನವೆತ್ತ ರಾಜ್ಯಪಾಲರನ್ನು ನಾವೆಲ್ಲರೂ ಗೌರವಿಸುತ್ತೇವೆ. ನಾವು ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇವೆ. ಹೀಗಾಗಿ ನಾವು ಸಂವಿಧಾನದ ಮೌಲ್ಯ ಎತ್ತಿಹಿಡಿಯಲು ಬದ್ಧರಾಗಿದ್ದೇವೆ. ನಾವು ಸಂವಿಧಾನದ ಮೇಲೆ ಪ್ರಮಾಣ ಮಾಡಿ ನಮ್ಮ ಹುದ್ದೆ ಅಲಂಕರಿಸುತ್ತೇವೆ. 


ಪ್ರಾಥಮಿಕ ತನಿಖೆ ಇಲ್ಲದೇ ವಿಚಾರಣೆಗೆ ಅನುಮತಿ: ನಮ್ಮ ರಾಜಕೀಯ ಅನುಭವದಲ್ಲಿ ಯಾವುದಾದರೂ ತನಿಖೆಗೆ ಅನುಮತಿ ನೀಡಬೇಕಾದರೆ, ಯಾವುದಾದರೂ ತನಿಖಾ ಸಂಸ್ಥೆಯಿಂದ ಪ್ರಾಥಮಿಕ ತನಿಖೆ ನಡೆಸಿ ಆ ತನಿಖೆಯ ವರದಿಯಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿರುವವರ ವಿಚಾರಣೆ ಅಗತ್ಯವಿದೆ ಎಂದು ಮನವರಿಕೆ ಮಾಡಿದ್ದರೆ ಆಗ ವಿಚಾರಣೆ ನಡೆಸಲು ಅನುಮತಿ ನೀಡಬಹುದು. ಆದರೆ ಇಲ್ಲಿ ಯಾವುದೇ ಕಾನೂನು ಪ್ರಕ್ರಿಯೆ ಪಾಲನೆ ಆಗಿಲ್ಲ. ಈ ಹಿಂದೆಯೂ ಬೇಕಾದಷ್ಟು ಘಟನೆಗಳಿವೆ ಎಂದರು.


ರಾಜ್ಯದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪ್ರಕರಣವನ್ನೇ ಉದಾಹರಣೆ ತೆಗೆದುಕೊಳ್ಳುವುದಾದರೆ, ಲೋಕಾಯುಕ್ತದಲ್ಲಿ ತನಿಖೆ ನಡೆದು ಈ ಸಂಸ್ಥೆ 23-11-2023ರಂದು ಕುಮಾರಸ್ವಾಮಿ ಅವರ ವಿಚಾರಣೆಗೆ ಅನುಮತಿ ನೀಡಿ ಎಂದು ರಾಜ್ಯಪಾಲರಿಗೆ ಮನವಿ ಮಾಡುತ್ತಾರೆ. 13-05-2024ರಂದು ಜನಾರ್ಧನ ರೆಡ್ಡಿ ಅವರ ವಿರುದ್ಧ ವಿಚಾರಣೆಗೆ ಅನುಮತಿ ನೀಡಿ ಎಂದು ಕಳುಹಿಸಿಕೊಟ್ಟಿದ್ದಾರೆ. 09-12-2021ರಂದು ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರ ವಿಚಾರಣೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ. 9-12-2020ರಂದು ಮಾಜಿ ಸಚಿವ ಮುರುಗೇಶ ನಿರಾಣಿ ಅವರ ನಿರಾಣಿ ಅವರ ವಿರುದ್ಧ ವಿಚಾರಣೆಗೆ ಅನುಮತಿ ಕೋರಲಾಗಿದೆ. ಈ ಎಲ್ಲಾ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆ ವರದಿ ಇದ್ದು, ಅದರ ಆಧಾರದ ಮೇಲೆ ವಿಚಾರಣೆಗೆ ಅನುಮತಿ ಕೇಳಲಾಗಿದೆ ಎಂದು ವಿವರಿಸಿದರು.


ಇದನ್ನೂ ಓದಿ:ಭಂಡತನ ಬಿಟ್ಟು ರಾಜೀನಾಮೆ ಕೊಡಿ: ಮುಖ್ಯಮಂತ್ರಿಗಳಿಗೆ ವಿಜಯೇಂದ್ರ ಆಗ್ರಹ


ಈ ಮನವಿಗಳನ್ನೇ ರಾಜ್ಯಪಾಲರು ಇನ್ನು ತೀರ್ಮಾನ ಮಾಡಿಲ್ಲ. ಆದರೆ ಈ ಪ್ರಕರಣದಲ್ಲಿ ರಾಜ್ಯಪಾಲರು ದೂರು ಬಂದ 24 ತಾಸಿನಲ್ಲೇ ಸರ್ಕಾರಕ್ಕೆ ಶೋಕಾಸ್ ನೋಟೀಸ್ ನೀಡಿ ವಿವರಣೆ ಕೇಳುತ್ತಾರೆ. ನಮ್ಮ ಮನವಿಯನ್ನು ತಿರಸ್ಕರಿಸಿ ಈಗ ವಿಚಾರಣೆಗೆ ಅನುಮತಿ ನೀಡಿರುವ ಬಗ್ಗೆ ಆದೇಶ ನೀಡಿರುವ ಬಗ್ಗೆ ಪತ್ರ ಕಳುಹಿಸಿದ್ದಾರೆ. ಇದು ಕೇವಲ ಸಿದ್ದರಾಮಯ್ಯ ಅವರ ವಿರುದ್ಧದ ಷಡ್ಯಂತ್ರವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 136+2 ಶಾಸಕರ ಬಲದೊಂದಿಗೆ ಅಧಿಕಾರಕ್ಕೆ ಬಂದಿರುವ ಸರ್ಕಾರದ ವಿರುದ್ಧ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯದ ಜನರು ಕೊಟ್ಟಿರುವ ಆಶೀರ್ವಾದದ ವಿರುದ್ಧ ನಡೆದಿರುವ ಷಡ್ಯಂತ್ರ ಎಂದು ವಾಗ್ದಾಳಿ ನಡೆಸಿದರು.


ಈ ಷಡ್ಯಂತ್ರದಲ್ಲಿ ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಕುಮಾರಸ್ವಾಮಿ ಅವರು ಮುಂದಿನ 8-10 ತಿಂಗಳಲ್ಲಿ ಈ ಸರ್ಕಾರವನ್ನು ಕಿತ್ತೊಗೆಯುತ್ತೇವೆ ಎಂದು ಹೇಳಿಕೆ ನೀಡಿದ್ದು, ಇದಕ್ಕೆ ಪೂರಕವಾಗಿ ಈ ಷಡ್ಯಂತ್ರ ನಡೆಯುತ್ತಿದೆ ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ