ಕೋವಿಡ್ 19 ನಿಯಂತ್ರಕ ಉಪಕರಣಗಳ ಲೋಕಾರ್ಪಣೆ
ಇದೇ ವೇಳೆ ಮುಂಬೈನ IIT-SINE ಮತ್ತು ಬಿಬಿಸಿ ನಡುವೆ ಪರಸ್ಪರ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಬೆಂಗಳೂರು: COVID-19 ಪಿಡುಗು ನಿಯಂತ್ರಿಸಲು ನೆರವಾಗುವ ಹಾಗೂ ಸೋಂಕು ಸಂಕಷ್ಟದ ಸಂದರ್ಭದಲ್ಲಿ ಕರ್ನಾಟಕದ ಅನ್ವೇಷಣಾ ಸಾಮರ್ಥ್ಯ ಪ್ರತಿಬಿಂಬಿಸುವ 22 ಉತ್ಪನ್ನಗಳನ್ನು ಐಟಿ/ ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮಂತ್ರಿಯೂ ಆದ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ (Dr CN Ashwathnarayana) ಲೋಕಾರ್ಪಣೆಗೊಳಿಸಿದರು.
ಇಲಾಖೆಯ ಕರ್ನಾಟಕ ಅವಿಷ್ಕಾರ ಮತ್ತು ತಂತ್ರಜ್ಞಾನ ಸಂಸ್ಥೆಯ (KITS) ಆಶ್ರಯದಲ್ಲಿ ಬೆಂಗಳೂರು ಬಯೋ ಇನ್ನೊವೇಷನ್ ಸೆಂಟರ್ (ಬಿಬಿಸಿ- ಬೆಂಗಳೂರು ಜೈವಿಕ ಆವಿಷ್ಕಾರ ಕೇಂದ್ರ) ಮೇಲ್ವಿಚಾರಣೆಯಡಿ 6 ಉತ್ಪನ್ನಗಳು ಅಭಿವೃದ್ಧಿಗೊಂಡಿದ್ದರೆ, KITS ನ ಕರ್ನಾಟಕ ನವೋದ್ಯಮ ಕೋಶದ (ಕರ್ನಾಟಕ ಸ್ಟಾರ್ಟ್ ಅಪ್ ಸೆಲ್) ಮೇಲ್ವಿಚಾರಣೆಯಡಿ 16 ಉತ್ಪನ್ನಗಳು ಅಭಿವೃದ್ಧಿಗೊಂಡಿವೆ.
ಇದೇ ವೇಳೆ ಮುಂಬೈನ IIT-SINE ಮತ್ತು ಬಿಬಿಸಿ ನಡುವೆ ಪರಸ್ಪರ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. IIT-SINEನ ಪ್ರೊ. ಸಂತೋಷ್ ಘರ್ ಪುರೆ ಮಾತನಾಡಿ ಹಣಕಾಸು ಸಂಪನ್ಮೂಲ ಕ್ರೋಡೀಕರಣ, ತಾಂತ್ರಿಕ ನೆರವಿನ ಮೂಲಕ ಬಿಬಿಸಿಯ ನವೋದ್ಯಮಗಳಿಗೆ ಈ ಒಪ್ಪಂದ ನೆರವಾಗಲಿದೆ ಎಂದರು.
ಕರ್ನಾಟಕ ನವೋದ್ಯಮ ಕೋಶವು ‘ಕೋವಿಡ್19 ಚಾಲೆಂಜ್’ ಶೀರ್ಷಿಕೆಯಡಿ ಅನ್ವೇಷಣಾಕಾರದಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. 3 ಹಂತಗಳಲ್ಲಿ 356 ಅರ್ಜಿಗಳು ಬಂದಿದ್ದವು. ವಿನೂತನತೆ, ಸಂಶೋಧನೆಯ ಕಾಲಮಿತಿ, ತಯಾರಿಕಾ ಸಾಮರ್ಥ್ಯ, ತಂಡದ ಶಕ್ತಿ, ಪ್ರಮಾಣಪತ್ರ & ಅನುಪಾಲನೆಗಳು ಇತ್ಯಾದಿಗಳನ್ನು ಆಧರಿಸಿ ಈ 16 ಉತ್ಪನ್ನಗಳನ್ನು ಆಯ್ಕೆ ಮಾಡಲಾಗಿದೆ.
ಉತ್ಪನ್ನಗಳ ಕುರಿತು ಕಿರು ಮಾಹಿತಿ
ನ್ಯೂಕ್ಲಿಯೋಡಿಎಕ್ಸ್ ಆರ್ ಟಿ: COVID-19 ಪತ್ತೆ ಹಚ್ಚಲು RT PCR ನಲ್ಲಿ ಬಳಸುವ RNA ಐಸೋಲೇಷನ್ ವಿಧಾನ ಇದಾಗಿದೆ.
ಕೋವಿಡಿಎಕ್ಸ್ ಎಂಪ್ಲೆಕ್ಸ್ 3R ಮತ್ತು 4R: ವಂಶವಾಹಿನಿಗಳನ್ನು ಬಳಸಿ ಕೋವಿಡ್ 19 ವೈರಸ್ ಪತ್ತೆಹಚ್ಚುವ ಇನ್-ವಿಟ್ರೋ RT PCR ಗುಣಾತ್ಮಕ ಪರೀಕ್ಷೆ ವಿಧಾನ ಇದಾಗಿದೆ.
ಡಾ. ತಾಪಮಾನ್: ದೇಹದ ಉಷ್ಣತೆಯನ್ನು ಅಳೆದು ಕೋವಿಡ್-19 ದೃಢಪಡಿಸುವ ಉಪಕರಣ ಇದಾಗಿದೆ. ಪ್ರಮುಖ ವ್ಯತ್ಯಾಸವೇನೆಂದರೆ, ಇದು ಬೇರೆ ಉತ್ಪನ್ನಗಳಂತೆ ವಿಕಿರಣವನ್ನು ಹೊರಸೂಸುವುದಿಲ್ಲ.
ಎಸ್ಎಎಫ್ಎಇ ಬಯೋಸೆಕ್ಯುರಿಟಿ ಸಲ್ಯೂಷನ್ಸ್: ಸ್ವಯಂಚಾಲಿತವಾಗಿ ದೇಹದ ಉಷ್ಣತೆ, ರಕ್ತದಲ್ಲಿನ ಆಮ್ಲಜನಕ ಮಟ್ಟಗಳನ್ನು ಅಳೆಯಬಲ್ಲದು. ಸ್ವಯಂಚಾಲಿತ ಹ್ಯಾಂಡ್ ವಾಷ್ ಸಾಧ್ಯವಾಗಿಸುತ್ತದೆ. ದೇಹವನ್ನು, ಬಟ್ಟೆಗಳನ್ನು ಮತ್ತು ಸಾಮಾನು ಸರಂಜಾಮುಗಳನ್ನು ಸಂಪೂರ್ಣ ಸೋಂಕು ಮುಕ್ತಗೊಳಿಸುತ್ತದೆ.
ಯುವಿಇಇ ಬೀಮರ್: ಡಿಎನ್ಎ ಗುಣಸ್ವಭಾವಗಳನ್ನು ಬದಲಾಯಿಸುವ ಮೂಲಕ ಸೂಕ್ಷ್ಮಾಣುಕ್ರಿಮಿಗಳನ್ನು 30 ಸೆಕೆಂಡುಗಳ ಒಳಗೆ ನಿವಾರಿಸುತ್ತದೆ.
ಯುವಿಇಇ ಕನ್ವೇಯರ್: ಇದು ದೊಡ್ಡ ವಾಣಿಜ್ಯ ಆವರಣಗಳಲ್ಲಿ ಹೆಚ್ಚು ಉಪಯುಕ್ತ. ವಿವಿಧ ಗಾತ್ರಗಳ ವಸ್ತುಗಳ ಮೇಲಿನ ಕ್ರಿಮಿಗಳನ್ನು ನಿವಾರಿಸುತ್ತದೆ. ಚಲಿಸುವ ಬೆಲ್ಟ್ ನೊಂದಿಗೆ UV- C ವ್ಯವಸ್ಥೆ ಆಧರಿಸಿ ಕೆಲಸ ಮಾಡುತ್ತದೆ.
ಕರ್ನಾಟಕ ನವೋದ್ಯಮ ಕೋಶದ ಉತ್ಪನ್ನಗಳು
ಕ್ವೋಂಚ್ (Qonch): ಸ್ಮಾರ್ಟ್ ಐಡಿ ಕಾರ್ಡ್ ಹೋಲ್ಡರ್ ಹೊಂದಿದ ಐಒಟಿ ಪ್ಲ್ಯಾಟ್ ಫಾರ್ಮ್ ಇದಾಗಿದೆ. ವ್ಯಾಪಾರೋದ್ದಿಮೆಗಳು, ಶಾಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಹೆಚ್ಚಿನ ವಿಶ್ವಾಸದೊಂದಿಗೆ ಪುನಃ ಆರಂಭಿಸಲು ಇದು ಸಹಕಾರಿ.
AMPWORK ಪ್ಲ್ಯಾಟ್ ಫಾರ್ಮ್: ಸರ್ಕಾರಕ್ಕೆ ಪ್ರಸ್ತುತ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು, ಮೇಲ್ವಿಚಾರಣೆ ಮಾಡಲು ಹಾಗೂ ಅವಲೋಕಿಸುವ ನಿಟ್ಟಿನಲ್ಲಿ ವ್ಯಾಪಾರೋದ್ದಿಮೆಗಳು, ಆಡಳಿತ ವರ್ಗ, ಜನರು ಮತ್ತು ಆರೋಗ್ಯ ಸೇವಾ ವಲಯದಲ್ಲಿರುವವರು ಒಟ್ಟಿಗೆ ಸೇರಿ ಕೆಲಸ ಮಾಡಲು ಅನುವು ಮಾಡಿಕೊಡುವ ವೇದಿಕೆ ಇದಾಗಿದೆ.
ರೆಸ್ಪಿರ್ ಏಯ್ಡ್ (RespirAID): ರೋಗಿಗಳ ಉಸಿರಾಟಕ್ಕೆ ನೆರವಾಗುವಂತಹ ಸ್ವಯಂಚಾಲಿತ ಉಪಕರಣ. ಇದು ಸುರಕ್ಷಿತ, ವಿಶ್ವಾಸಾರ್ಹ, ಒಂದೆಡೆಯಿಂದ ಇನ್ನೊಂದೆಡೆಗೆ ಕೊಂಡೊಯ್ಯಲು ಸುಲಭ ಹಾಗೂ ದರ ಕೂಡ ಕಡಿಮೆ.
ಇಎಂವಿಲಿಯೋ (Emvlio): ಲಸಿಕೆಗಳು, ರಕ್ತ, ಸೆರಂ ಇತ್ಯಾದಿಯನ್ನು ಕರಾರುವಾಕ್ಕಾದ ಉಷ್ಣತೆಯಲ್ಲಿ ಸಾಗಿಸಲು ಅನುವು ಮಾಡಿಕೊಡುವ ವೈದ್ಯಕೀಯ ದರ್ಜೆಯ ರೆಫ್ರಿಜರೇಟರ್ ವ್ಯವಸ್ಥೆ ಇದಾಗಿದೆ. ದೋಷಪೂರಿತ ನೆಗೆಟಿವ್ ಫಲಿತಾಂಶ ತಡೆಗಟ್ಟುತ್ತದೆ.
ಪಿಕ್ಸುಯೇಟ್: ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ತಪಾಸಣೆಗೆ ನಿಲ್ಲುವಂತೆ ಮಾಡುವ ಅನಿವಾರ್ಯತೆ ನಿವಾರಿಸುತ್ತದೆ. ಯಾವುದೇ ವ್ಯಕ್ತಿಯು ಹಾದು ಹೋಗುತ್ತಿರುವಾಗ 3-5 ಮೀಟರ್ ಸುರಕ್ಷಿತ ಅಂತರದಿಂದಲೇ ದೇಹದ ಉಷ್ಣತೆಯನ್ನು ಅಳೆಯುತ್ತದೆ.
AskDoc ಕೋವಿಡ್-19 ರೋಗ ಪ್ರಸರಣ ಹಾಗೂ ಸೋಂಕು ನಿಯಂತ್ರಣ ಕುರಿತ ಪ್ರಶ್ನೆಗಳಿಗೆ ಬಹು ಭಾಷೆಯಲ್ಲಿ ಧ್ವನಿ ಹಾಗೂ ಪಠ್ಯದ ಮೂಲಕ ಉತ್ತರಿಸುವ ಡಾಕ್ಟರ್ ವಿಡಿಯೊಬಾಟ್ ಇದಾಗಿದೆ.
ಥರ್ಮಾಕ್ಸಿ: ವ್ಯಕ್ತಿಯ ದೇಹದ ಉಷ್ಣತೆ, ಹೃದಯ ಬಡಿತ ದರ ಹಾಗೂ ಆಮ್ಲಜನಕ ಮಟ್ಟವನ್ನು ಅಳೆಯುತ್ತದೆ. ಜೊತೆಗೆ, ಆಯಾ ಕ್ಷಣದ ಅಂಕಿಅಂಶಗಳನ್ನು ವೈರ್ ಲೆಸ್ ಅಥವಾ ಲ್ಯಾನ್ ಮೂಲಕ ನೆಟ್ ವರ್ಕ್ ಗೆ ವರ್ಗಾಯಿಸುತ್ತದೆ.
ಹೈಲೋಬಿಜ್: ವಿಶೇಷವಾಗಿ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಹೆಚ್ಚು ಉಪಯುಕ್ತ. ಇನ್ ವಾಯ್ಸ್ ಗಳನ್ನು ಕಳಿಸುವುದು, ಜ್ಞಾಪನ ಪತ್ರಗಳನ್ನು ಕಳಿಸುವುದು, ನಗದು ಪಾವತಿ, ವಿಮೆ ಮತ್ತಿತರ ಸೇವೆಗಳನ್ನು ಏಕಗವಾಕ್ಷಿ ಮೂಲಕ ಪಡೆಯಬಹುದು.
ಡಾಕ್ಸ್ ಪರ್: ನರ್ಸ್ ಗಳು ಹಾಗೂ ವೈದ್ಯರಿಗೆ ರೋಗಿಯ ಕುರಿತಾದ ಮಾಪನದ ಅಂಕಿ-ಅಂಶಗಳನ್ನು ತಕ್ಷಣವೇ ರವಾನಿಸಬಲ್ಲ ಕೃತಕ ಬುದ್ಧಿಮತ್ತೆ ಆಧಾರಿತ ಡಿಜಿಟಲ್ ಪೆನ್ ಹಾಗೂ ಎನ್ ಕೋಡೆಡ್ ಪೇಪರ್ ಪರಿಹಾರ ಇದಾಗಿದೆ.
ವ್ಯಾಪ್ ಕೇರ್: ಇದು ವೆಂಟಿಲೇಟರ್ ನಲ್ಲಿರುವ ರೋಗಿಗಳ ಲಾಲಾರಸ ಮತ್ತಿತರ ಸ್ರವಣ ಮಾದರಿಗಳನ್ನು ಸಂಗ್ರಹಿಸಲು ನೆರವಾಗಲಿದೆ. ನರ್ಸ್ ಗಳು ಈ ಸ್ರವಣಗಳ ಸಂಪರ್ಕಕ್ಕೆ ಬರುವುದನ್ನು ತಡೆಗಟ್ಟುತ್ತದೆ.
ನ್ಯೂಬ್ ವೆಲ್ ನೆಟ್ ವರ್ಕ್ ಫಂಕ್ಷನ್ ಗೇಟ್ ವೇ: ವಿಡಿಯೊ ಸ್ಟ್ರೀಮಿಂಗ್ ಅಪ್ಪಿಕೇಷನ್, ವೆಬೆಕ್ಸ್, ಮೈಕ್ರೋಸಾಫ್ಟ್ ಟೀಮ್ಸ್, ಗೂಗಲ್ ವಿಡಿಯೊ, ಸಿಟ್ರಿಕ್ಸ್, ಸ್ಯಾಪ್, ಒರಾಕಲ್ ಇಆರ್ಪಿ ಹಾಗೂ ಆಫೀಸ್ 365, ಸ್ಯಾಪ್ ಕ್ಲೌಡ್, ಒರಾಕಲ್ ಕ್ಲೌಡ್, ಕಾರ್ಪೊರೇಟ್ ವಿಪಿಎನ್ ಇತ್ಯಾದಿ ಕ್ಲೌಡ್ ಅಪ್ಪಿಕೇಷನ್ ಗಳನ್ನು ಒಂದೆಡೆ ಅಡಕಗೊಳಿಸಿ ಸುಲಭ ಬಳಕೆಗೆ ಅನುವು ಮಾಡಲಾಗಿರುವ ತಾಂತ್ರಿಕ ವೇದಿಕೆ ಇದಾಗಿದೆ.
ಫೇಸ್ ಷೀಲ್ಡ್ಸ್, ಇನ್ ಟ್ಯುಬೇಷನ್ ಬಾಕ್ಸಸ್: ಮುಖ್ಯವಾಗಿ ಆರೋಗ್ಯಸೇವಾ ಸಿಬ್ಬಂದಿಯನ್ನು ವೈರಸ್ ಸೋಂಕಿನಿಂದ ದೂರವಿರಿಸಲು ಸಿದ್ಧಪಡಿಸಿರುವ ತಾಂತ್ರಿಕ ಉತ್ಪನ್ನ ಇದಾಗಿದೆ.
ಸೆನ್ಸ್ ಗಿಜ್: ಕೋವಿಡ್-19 (Covid 19) ಅಪಾಯಗಳನ್ನು ತಗ್ಗಿಸಲು, ಉದ್ಯೋಗಿಗಳನ್ನು ಸುರಕ್ಷಿತವಾಗಿರಿಸಲು ಹಾಗೂ ಮುಂದಿನ ದಿನಗಳಲ್ಲಿ ವ್ಯಾಪಾರೋದ್ದಿಮೆಗಳನ್ನು ಮುಚ್ಚುವ ಅವಶ್ಯಕತೆ ಇಲ್ಲದಂತೆ ಮಾಡಲು ಇದನ್ನು ಅಭಿವೃದ್ಧಿಪಡಿಸಲಾಗಿದೆ.
ಸ್ಟ್ಯಾಸಿಸ್: ದೂರದಿಂದಲೇ ರೋಗಿಯ ಆರೈಕೆ ಮೇಲೆ ನಿಗಾ ಇಡಲು ಇದು ಸಹಕಾರಿ. ಕ್ಲೌಡ್ ತಂತ್ರಜ್ಞಾನದ ನೆರವಿನಿಂದ ಯಾವುದೇ ಬೆಡ್ ಅನ್ನು ಪರಿಣಾಮಕಾರಿ ಆರೈಕೆಗೆ ಅನುವು ಮಾಡಿಕೊಡುವ ಬೆಡ್ ಆಗಿ ಪರಿವರ್ತಿಸಬಹುದು. ಜನರಲ್ ವಾರ್ಡ್, ಖಾಸಗಿ ಕೊಠಡಿಗಳು, ಐಸೋಲೇಷರ್ ರೂಮ್ ಗಳು, ಕಸಿ ಘಟಕಗಳು, ಐಸಿಯು ಸೇರಿದಂತೆ ಹಲವೆಡೆ ಬಳಸಲು ಸೂಕ್ತ.
ಟಚ್ ಲೆಸ್ ಐಡಿ: HW ಸ್ಕ್ಯಾನರ್ ಗಳಿಗೆ ಬದಲಿಯಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಮೊಬೈಲ್ ಫೋನ್ ಕ್ಯಾಮೆರಾದಿಂದ ಬೆರಳಚ್ಚಿನ ಜೈವಿಕ ಚಹರೆ ಸೆರೆಹಿಡಿಯುತ್ತದೆ.
ಡೋಜೀ: ಹಾಸಿಗೆಯ ತಳಭಾಗದಲ್ಲಿ ಇಡಬಹುದಾದ ತೆಳ್ಳನೆಯ ಸೆನ್ಸಾರ್ ಷೀಟ್ ಇದಾಗಿರುತ್ತದೆ.