ನವದೆಹಲಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ವಿದ್ಯಾನಗರದಲ್ಲಿ ಸ್ಪೋಟ್ಸ್ ಹಬ್ ನಿರ್ಮಾಣಕ್ಕೆ 70 ಕೋಟಿ ರೂ. ಹಾಗೂ ರಾಜ್ಯದಲ್ಲಿ ಇತರೆ ಕ್ರೀಡಾ ಅಭಿವೃದ್ಧಿಗಾಗಿ ಅನುದಾನ ನೀಡುವಂತೆ ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ್ ಅವರು ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.



COMMERCIAL BREAK
SCROLL TO CONTINUE READING

ಬುಧವಾರ ದೆಹಲಿಯಲ್ಲಿ ಕೇಂದ್ರ ಕ್ರೀಡಾ ಸಚಿವರನ್ನು ಭೇಟಿ ಮಾಡಿದ ಪರಮೇಶ್ವರ್, ರಾಜ್ಯ ಕ್ರೀಡಾ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಿದರು. ಬೆಂಗಳೂರಿನ ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಯುವ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಹಬ್ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗಿದ್ದು 70 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಹೀಗಾಗಿ ಖೇಲೋ ಇಂಡಿಯಾ ಯೋಜನೆಯಡಿ ಈ ಕಾರ್ಯಕ್ರಮಕ್ಕೆ ಅನುದಾನ ನೀಡುವಂತೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದರು. 


ಇದರ ಜೊತೆಗೆ, ರಾಜ್ಯದಲ್ಲಿ ಕ್ರೀಡಾ ಅಭಿವೃದ್ಧಿ ನಿಟ್ಟಿನಲ್ಲಿ ಸಾಕಷ್ಟು ಯೋಜನೆ ಕೈಗೆತ್ತಿಕೊಳ್ಳಲಾಗಿದೆ, ಇದಕ್ಕೂ ಸಹ ಕೇಂದ್ರ ಕ್ರೀಡಾ ಇಲಾಖೆಯಿಂದ ಅನುದಾನ ನೀಡುವಂತೆಯೂ ಇದೇ ವೇಳೆ ಪ್ರಸ್ತಾವನೆ ಸಲ್ಲಿಸಿದರು. ಶೀಘ್ರವೇ ಅನುದಾನ ಬಿಡುಗಡೆಗೆ ಮನವಿ ಮಾಡಿದರು. ಪರಮೇಶ್ವರ ಅವರ ಮನವಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.