ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ (SM Krishna) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರ ಗುರು-ಶಿಷ್ಯರ ಸಂಬಂಧ ಇದೀಗ ಕೌಟುಂಬಿಕ ಸಂಬಂಧವಾಗಿ ಬೆಸೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ ಎಸ್.ಎಂ. ಕೃಷ್ಣ ಅವರ ಮೊಮ್ಮಗ ಕೆಫೆ ಕಾಫಿ ಡೇ (Cafe Coffee Day) ಸಂಸ್ಥಾಪಕ ದಿವಂಗತ ವಿ.ಜಿ.ಸಿದ್ಧಾರ್ಥ ಪುತ್ರನೊಂದಿಗೆ ಡಿ.ಕೆ. ಶಿವಕುಮಾರ್ ಪುತ್ರಿ ವಿವಾಹ ಮಾತುಕತೆ ನಡೆಯುತ್ತಿದ್ದು ಈ ವರ್ಷಾಂತ್ಯದೊಳಗೆ ವಿವಾಹ ಕಾರ್ಯ ನೆರವೇರಲಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.


COMMERCIAL BREAK
SCROLL TO CONTINUE READING

ದಿವಂಗತ ವಿ.ಜಿ.ಸಿದ್ಧಾರ್ಥ (VG Siddhartha) ಹೆಗ್ಡೆ ಅವರ ಪುತ್ರ ಅಮಾರ್ತ್ಯ ಹೆಗ್ಡೆ (26) ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದು ಸದ್ಯ ತಾಯಿಯೊಂದಿಗೆ ಕಂಪನಿ ವ್ಯವಹಾರ ಮುನ್ನಡೆಸುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ (22) ಇಂಜಿನಿಯರಿಂಗ್ ಪದವೀಧರೆಯಾಗಿದ್ದು ತಂದೆ ಸ್ಥಾಪಿಸಿರುವ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಸಂಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ಅಮಾರ್ತ್ಯ ಹಾಗೂ ಐಶ್ವರ್ಯ ಇಬ್ಬರ ವಿವಾಹದ ಬಗ್ಗೆ ಎರಡೂ ಕುಟುಂಬಗಳ ಮಾತುಕತೆ ಅಂತಿಮ ಹಂತಕ್ಕೆ ತಲುಪಿದ್ದು ಶೀಘ್ರದಲ್ಲೇ ಆ ಬಗ್ಗೆ ಘೋಷಿಸುವ ಸಾಧ್ಯತೆ ಇದೇ ಎಂದು ಹೇಳಲಾಗುತ್ತಿದೆ.


ಎಲ್ಲರಿಗೂ ತಿಳಿದಿರುವಂತೆ ಎಸ್‌ಎಂಕೆ ಹಾಗೂ ಡಿಕೆಶಿ ನಡುವಿನ ಸ್ನೇಹ ಸಂಬಂಧ ಸುದೀರ್ಘವಾದದ್ದು. ಶಿವಕುಮಾರ್ ಅವರು ಎಸ್. ಎಂ. ಕೃಷ್ಣ ಅವರೊಂದಿಗೆ ಮಾತ್ರವಲ್ಲದೆ ಅವರ ಅಳಿಯ ವಿ. ಜಿ. ಸಿದ್ಧಾರ್ಥ ಅವರೊಂದಿಗೂ ಉತ್ತಮ ಸ್ನೇಹ ಹೊಂದಿದ್ದರು. ಸಿದ್ಧಾರ್ಥ ಅವರ ಸಾವಿಗೂ ಮೊದಲೇ ಎರಡೂ ಕುಟುಂಬಗಳ ಮಧ್ಯೆ ವಿವಾಹ ಮಾತುಕತೆ ನಡೆದಿತ್ತು. ಇದೀಗ ಮೇ 31(ಭಾನುವಾರದಂದು) ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಒಟ್ಟಿಗೆ ಸೇರಿದ್ದ ಎರಡೂ ಕುಟುಂಬಗಳು ಎಸ್.ಎಂ. ಕೃಷ್ಣ ಅವರ ಸಮ್ಮುಖದಲ್ಲಿ ವಿವಾಹ ಮಾತುಕತೆಯನ್ನು ಪೂರ್ಣಗೊಳಿಸಿವೆ ಎನ್ನಲಾಗಿದೆ.