ಬೆಂಗಳೂರು: ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಕಚೇರಿ ಆರ್.ಅಶೋಕ್ ಅವರನ್ನು ಲೆಕ್ಕಕ್ಕೇ ಇಟ್ಟುಕೊಂಡಿಲ್ಲ ಎಂಬುದಕ್ಕೆ ಅವರ ಮಾತೇ ಸಾಕ್ಷಿ. ನಾವು ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಸಿದ್ಧವಿದ್ದೆವು. ಆದರೆ ಪ್ರಧಾನಮಂತ್ರಿಗಳ ಕಚೇರಿಯ ಸಂದೇಶ ಗೌರವಿಸಿ, ಸ್ವಾಗತಕ್ಕೆ ತೆರಳಲಿಲ್ಲ. ಈ ವಿಚಾರದ ಬಗ್ಗೆ ಪ್ರಧಾನಿ ಕಚೇರಿಯಿಂದ ಮಾಹಿತಿ ಪಡೆದುಕೊಂಡು ನಂತರ ಅಶೋಕ್ ಮಾತನಾಡಲಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಬೆಂಗಳೂರಿಗೆ ಆಗಮಿಸಿದ ಪ್ರಧಾನಮಂತ್ರಿಗಳನ್ನು ಸ್ವಾಗತಿಸಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಾಗಲಿ, ಸರ್ಕಾರದ ಪ್ರತಿನಿಧಿಗಳಾಗಲಿ ತೆರಳಿಲ್ಲ ಎಂಬ ವಿಚಾರದ ಬಗ್ಗೆ ಆರ್. ಅಶೋಕ್ ಅವರ ಟೀಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದರು. 


ನಮಗೆ ರಾಜಕೀಯ ಪ್ರಜ್ಞೆ, ಶಿಷ್ಟಾಚಾರ, ಯಾರಿಗೆ ಯಾವ ಗೌರವ ನೀಡಬೇಕು ಎಂಬ ಪರಿಜ್ಞಾನ ಬಿಜೆಪಿಯವರಿಗಿಂತಲೂ ಹೆಚ್ಚಾಗಿ ಇದೆ. ಶಿಷ್ಟಾಚಾರದ ಪ್ರಕಾರ ಸರ್ಕಾರ ಪ್ರಧಾನಿಗಳ ಸ್ವಾಗತಕ್ಕೆ ಸಿದ್ಧವಿತ್ತು. ಆದರೆ ಪ್ರಧಾನಮಂತ್ರಿಗಳ ಕಚೇರಿಯಿಂದಲೇ ಬರಬಾರದೆಂದು ಅನಧಿಕೃತವಾಗಿ ನಮಗೆ ಸಂದೇಶ ಬಂದಿತ್ತು. ನಾವು ಮುಖ್ಯಕಾರ್ಯದರ್ಶಿಗಳಿಗೆ ಈ ವಿಚಾರವಾಗಿ ಲಿಖಿತ ಸಂದೇಶ ನೀಡಿ ಎಂದು ಮನವಿ ಮಾಡಿದೆವು. ನಂತರ ಅವರು ಅಧಿಕೃತವಾಗಿ ಪತ್ರದ ಮೂಲಕ ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸೇರಿದಂತೆ ಯಾರೂ ಸ್ವಾಗತ ಮಾಡಲು ಬರುವುದು ಬೇಡ ಎಂದು ಸಂದೇಶ ರವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ತೆರಳಲಿಲ್ಲ. ಅಶೋಕ್ ಅವರು ಈ ಬಗ್ಗೆ ತಿಳಿದುಕೊಂಡಿದ್ದರೆ ಚನ್ನಾಗಿತ್ತು ಎಂದಿದ್ದಾರೆ.


ನಾವು ಪ್ರಧಾನಮಂತ್ರಿ ಸ್ಥಾನಕ್ಕೆ ಗೌರವ ನೀಡುತ್ತೇವೆ. ಅವರು ನಮ್ಮ ವಿಜ್ಞಾನಿಗಳನ್ನು ಸನ್ಮಾನಿಸಲು ಬಂದಿದ್ದಾರೆ. ನಾವು ಅವರನ್ನು ಸ್ವಾಗತಿಸುತ್ತೇವೆ. ನಮಗೆ ಈ ವಿಚಾರದಲ್ಲಿ ರಾಜಕೀಯ ಮಾಡುವ ಉದ್ದೇಶವಿಲ್ಲ. ರಾಜಕೀಯ ಆಟ ಮುಗಿದಿದೆ. ಇನ್ನು ಅಭಿವೃದ್ಧಿಯತ್ತ ಗಮನಹರಿಸಬೇಕು. ರಾಜ್ಯದ ಘನತೆ, ರಾಜ್ಯದ ಸಂಸ್ಕೃತಿ ಉಳಿಸಲು ನಾವು ಕೆಲಸ ಮಾಡಬೇಕು. ಅಶೋಕ್ ಅವರಿಗೆ ಈ ವಿಚಾರವಾಗಿ ಮಾಹಿತಿ ಇಲ್ಲ. ಪ್ರಧಾನಮಂತ್ರಿಗಳ ಕಚೇರಿ ಅವರನ್ನು ರಾಜಕೀಯ ಚಿತ್ರಣದಿಂದ ದೂರವಿಟ್ಟಿದೆ. ಹೀಗಾಗಿ ಅವರು ಮಾಹಿತಿ ಇಲ್ಲದೆ ಮಾತನಾಡಿದ್ದಾರೆ. ಅದಕ್ಕೆ ನಾವೇನು ಮಾಡಲು ಸಾಧ್ಯ? ಅವರಲ್ಲಿ ಏನೋ ಸಮಸ್ಯೆ ಇರಬಹುದು ಎಂದು ಹೇಳಿದ್ದಾರೆ. 


ಕಾವೇರಿ ವಾಸ್ತವಾಂಶ ನ್ಯಾಯಾಲಯದ ಮುಂದಿಟ್ಟಿದ್ದೇವೆ :


ಕರ್ನಾಟಕದಲ್ಲಿ ನೀರಿದೆ, ಇದಕ್ಕಾಗಿಯೇ ನೀರು ಬಿಡುಗಡೆ ಮಾಡಿದ್ದು, ಈಗ ಸುಪ್ರೀಂ ಕೋರ್ಟ್ ಮುಂದೆ ನೀರಿಲ್ಲ ಎಂದು ಹೇಳುತ್ತಿದೆ ಎಂಬ ತಮಿಳುನಾಡು ಪರ ವಕೀಲ ಮುಕುಲ್ ರೋಹಟಗಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ನಾವು ಪ್ರತಿಕ್ರಿಯೆ ನೀಡವುದಿಲ್ಲ. ವಾಸ್ತವಾಂಶವನ್ನು ನ್ಯಾಯಾಲಯದ ಮುಂದಿಟ್ಟಿದ್ದೇವೆ. ಇದು ತಾಂತ್ರಿಕ ವಿಚಾರವಾಗಿದ್ದು, ನಾವು ಆಣೆಕಟ್ಟುಗಳಲ್ಲಿನ ಒಳಹರಿವಿನ ಮಾಹಿತಿಯನ್ನು ನೀಡಿದ್ದೇವೆ. ಸುಪ್ರೀಂ ಕೋರ್ಟ್ ನಲ್ಲಿ ಕೆಲವು ಅಂಶಗಳ ಬಗ್ಗೆ ಪ್ರಶ್ನೆ ಎದ್ದಿದ್ದು, ಈ ಎಲ್ಲ ಸಮಸ್ಯೆಗಳಿಗೆ ಮೇಕೆದಾಟುವೊಂದೇ ಪರಿಹಾರ. ಮೇಕೆದಾಟು ಯೋಜನೆ ನಮಗಿಂತ ಹೆಚ್ಚು ತಮಿಳುನಾಡಿಗೆ ಅನುಕೂಲವಾಗಲಿದೆ. ಕರ್ನಾಟಕ ಬಳಸಿಕೊಳ್ಳಲಾಗದ ನೀರು ತಮಿಳುನಾಡಿಗೆ ಸೇರಲಿದೆ. ಈ ನೀರನ್ನು ಸಂಕಷ್ಟದ ಸಮಯದಲ್ಲಿ ಬಳಸಿಕೊಳ್ಳಲು ಈ ಯೋಜನೆ ಅಗತ್ಯವಿದೆ. ಈ ಯೋಜನೆ ಎರಡೂ ರಾಜ್ಯಗಳ ರೈತರ ಹಿತ ಕಾಯಲಿದೆ. ಹೀಗಾಗಿ ನಾನು ತಮಿಳುನಾಡು ಸರ್ಕಾರ ಹಾಗೂ ನಾಯಕರಿಗೆ ಈ ವಿಚಾರದಲ್ಲಿ ಹೃದಯವೈಶಾಲ್ಯತೆ ಪ್ರದರ್ಶಿಸಿ, ಸಹಕಾರ ನೀಡುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.


ಕಾವೇರಿ ವಿಚಾರವಾಗಿ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗುತ್ತಿರುವುದು ರಾಜಕೀಯ ಮಾಡಲು ಎಂಬ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕೋರ್ಟ್ ಈ ವಿಚಾರದಲ್ಲಿ ಏನು ಹೇಳಬೇಕೋ ಹೇಳಿದೆ. ಅವರಿಗೆ ಕರ್ನಾಟಕ ರಾಜ್ಯದ ಬಗ್ಗೆ ಹಿತಾಸಕ್ತಿ ಇದ್ದರೆ ಅವರು ನಮ್ಮ ಜೊತೆ ಸೇರಿ ರಾಜ್ಯದ ಪರವಾಗಿ ಧ್ವನಿ ಎತ್ತಲಿ. ಇಲ್ಲದಿದ್ದರೆ ನಮ್ಮ ಕರ್ತವ್ಯ ಮಾಡುತ್ತೇವೆ. ನಾವು ಸರ್ವಪಕ್ಷ ಸಭೆಗೆ ಆಹ್ವಾನ ನೀಡಿದ್ದೆವು. ಅವರಿಗೆ ಬರಲು ಸಾಧ್ಯವಾಗಲಿಲ್ಲ. ನಾವು ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಜಲಶಕ್ತಿ ಸಚಿವರು ಸಮಯ ಕೊಟ್ಟಾಗಿ ಸರ್ವಪಕ್ಷ ನಿಯೋಗ ಹೋಗಿ ನಮ್ಮ ವಾದ ಮಂಡಿಸುತ್ತೇವೆ. ನಾವು ರೈತರ ಹಿತವನ್ನು ಕಾಯಬೇಕು ನ್ಯಾಯಾಲಯಕ್ಕೂ ಗೌರವ ನೀಡಬೇಕು ಎಂದಿದ್ದಾರೆ.


ಇದನ್ನೂ ಓದಿ: ಹತ್ತಿ ಇಳಿಯಲು ಕಾಂಗ್ರೆಸ್ ಪಕ್ಷ ಬಸ್ ಅಲ್ಲ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಡಕ್ ಮಾತು


ಕಾವೇರಿ ವಿಚಾರವಾಗಿ ಕಾನೂನು ತಜ್ಞರ ಜತೆ ಚರ್ಚೆ ಆಗಿದೆಯೇ ಎಂಬ ಪ್ರಶ್ನೆಗೆ, “ಕಾವೇರಿ ವಿಚಾರವಾಗಿ ಈಗಾಗಲೇ ನಮ್ಮ ತಂಡ ದೆಹಲಿಯಲ್ಲಿ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದೆ. ನಾನು ಮುಂದಿನ ದಿನಗಳಲ್ಲಿ ಮತ್ತೊಂದು ಸಭೆ ಮಾಡಲಿದ್ದೇನೆ ಎಂದಿದ್ದಾರೆ.


ಬೇರೆ ಪಕ್ಷದ ಶಾಸಕರ ಭೇಟಿಯಲ್ಲಿ ತಪ್ಪೇನಿದೆ?:


ರೇಣುಕಾಚಾರ್ಯ ಅವರ ಭೇಟಿ ವಿಚಾರವಾಗಿ ಕೇಳಿದಾಗ, “ಅವರದೇ ಆದ ವಿಚಾರ, ಜನ ಹಾಗೂ ಕ್ಷೇತ್ರದ ಸಮಸ್ಯೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾತಮಾಡಲು ಬರುತ್ತಾರೆ. ಅಧಿಕಾರದಲ್ಲಿ ಇದ್ದಾಗ ಅವರು ಬಂದು ನಮ್ಮನ್ನು ಭೇಟಿ ಮಾಡಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಅದರಲ್ಲಿ ತಪ್ಪೇನಿದೆ? ಸೋಮಶೇಖರ್ ಅವರ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಅದಕ್ಕಾಗಿ ಅಲ್ಲಿಗೆ ಹೋಗುತ್ತಿದ್ದೇನೆ. ಜನಪ್ರತಿನಿಧಿಗಳಿಗೆ ನಾವು ಗೌರವ ಸಲ್ಲಿಸುತ್ತೇವೆ. ಹಾಲಿ ಶಾಸಕರಲ್ಲದಿದ್ದರೂ ಅವರ ಸಮಸ್ಯೆಗಳಿರುತ್ತವೆ. ಅವುಗಳನ್ನು ನಾನು ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ. ನಮಗೆ ಆಪರೇಷನ್ ಹಸ್ತ ಮಾಡುವ ಅಗತ್ಯವಿಲ್ಲ. ರಾಜಕೀಯವಾಗಿ ಅನೇಕ ಆಸೆ ಆಕಾಂಕ್ಷೆಗಳಿರುತ್ತವೆ. ಅವರು ಎಷ್ಟು ದಿನ ಎಂದು ಕಾಯುತ್ತಾರೆ. ನಾವು ನಮ್ಮ ಕಾರ್ಯಕರ್ತರು ಹಾಗೂ ಮುಖಂಡರಿಗೆ ಸ್ಥಳೀಯ ಮಟ್ಟದಲ್ಲಿ ಬೇರೆ ಪಕ್ಷದವರನ್ನು ಸೇರಿಸಿಕೊಳ್ಳಲು ಸೂಚಿಸಿದ್ದೇವೆ ಅಷ್ಟೆ ಎಂದಿದ್ದಾರೆ.


ನಮ್ಮ ಗ್ಯಾರಂಟಿ ಯೋಜನೆಗಳು ಕೇವಲ ಕಾಂಗ್ರೆಸ್ ಕಾರ್ಯಕರ್ತರಿಗಲ್ಲ. ಎಲ್ಲಾ ಪಕ್ಷದವರಿಗೂ ಸಲ್ಲುತ್ತದೆ. ಉಡುಪಿಯಲ್ಲಿ ನಮ್ಮ ಯಾವುದೇ ಶಾಸಕರು ಇಲ್ಲ. ಆದರೂ ಶೇ.80 ರಷ್ಟು ಜನ ನೋಂದಣಿ ಮಾಡಿಸಿಕೊಂಡಿದ್ದಾರೆ. ನಮ್ಮ ಯೋಜನೆ ಪಕ್ಷಾತೀತವಾಗಿ ಸಿಗಲಿದೆ. ಹೀಗಾಗಿ ಬೇರೆ ಪಕ್ಷದ ಶಾಸಕರು ನಮ್ಮ ಸರ್ಕಾರ ಈ ಕೆಲಸ ಮಾಡಲಿಲ್ಲ. ನಿಮ್ಮ ಸರ್ಕಾರ ಮಾಡಿದೆ ಎಂದು ಶುಭಹಾರೈಸುತ್ತಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಉತ್ತರಿಸಿದ್ದಾರೆ.
ಕೆಪಿಸಿಸಿ ಪುನಾರಚನೆ ಶೀಘ್ರ:


ಕೆಪಿಸಿಸಿಗೆ ನೂತನ ಕಾರ್ಯಾಧ್ಯಕ್ಷರ ನೇಮಕ ವಿಚಾರವಾಗಿ ಕೇಳಿದಾಗ, ಕೇವಲ ಕಾರ್ಯಾಧ್ಯಕ್ಷರು ಮಾತ್ರವಲ್ಲ, ಇಡೀ ತಂಡವನ್ನೆ ಬದಲಿಸಬೇಕಿದೆ. ನಮ್ಮಲ್ಲಿ ಅನೇಕರು ಸಚಿವರಾಗಿದ್ದು, ಅವರನ್ನು ಪಕ್ಷದ ಜವಾಬ್ದಾರಿಯಿಂದ ಮುಕ್ತಗೊಳಿಸಬೇಕಿದೆ. ಹೊಸಬರಿಗೆ ಅವಕಾಶ ಮಾಡಿಕೊಡಬೇಕಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಚಂದ್ರಯಾನ-3 ಯಶಸ್ಸು ಕಂಡು ಕುಣಿದಾಡಿದ ಝಿವಾ ಧೋನಿ: ವಿಡಿಯೋ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.