ಬೆಂಗಳೂರು: ಸದ್ಯಕ್ಕೆ ಕೆಪಿಸಿಸಿಯಲ್ಲಿ ಯಾವುದೇ ಹುದ್ದೆ ಖಾಲಿ ಇಲ್ಲ. ಅಧ್ಯಕ್ಷ ಸ್ಥಾನಕ್ಕೆ ಆಸೆ, ದುರಾಸೆ ನನ್ನಲ್ಲಿಲ್ಲ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.


COMMERCIAL BREAK
SCROLL TO CONTINUE READING

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಿಮ್ಮ ಹೆಸರು ಕೇಳಿಬರುತ್ತಿದೆ ಎಂದು ಕೇಳಿದಾಗ, “ಒಂದಷ್ಟು ಜನರು ನನ್ನನ್ನು ಖುಷಿಪಡಿಸಲು, ಮತ್ತೆ ಕೆಲವರು ಇನ್ನೊಬ್ಬರನ್ನು ಖುಷಿ ಪಡಿಸಲು ಹಾಗೂ ತಮ್ಮ ಅನುಕೂಲಕ್ಕಾಗಿ ಈ ರೀತಿ ಹೆಸರುಗಳನ್ನು ಹೇಳುತ್ತಿರುತ್ತಾರೆ. ನಾನು ಪ್ರಸ್ತುತ ವಿಶ್ರಾಂತಿಯಲ್ಲಿದ್ದೇನೆ. ಜನರು ಕೊಟ್ಟ ತೀರ್ಪನ್ನು ಪ್ರಸಾದ ಎಂದು ಸ್ವೀಕರಿಸಿ ಕೆಲಸ ಮಾಡುವವನು ನಾನು. ಯಾವುದೇ ಸ್ಥಾನ ಸಿಗಬೇಕು ಅಂತಾದರೆ ಸಿಕ್ಕೇ ಸಿಗುತ್ತದೆ. ಇಲ್ಲದಿದ್ದರೆ ಸಿಗುವುದಿಲ್ಲ. ಯಾವುದೂ ಇಲ್ಲಿ ಸ್ವಂತ ಸ್ವತ್ತಲ್ಲ. ಸಾರ್ವಜನಿಕವಾದ ಹುದ್ದೆಗಳಿವು” ಎಂದು ತಿಳಿಸಿದ್ದಾರೆ.


ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ ಎನ್ನುವ ಕೆ.ಎನ್.ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಸರ್ವಪಕ್ಷಗಳ ಹಿರಿಯ ನಾಯಕರಾದ ರಾಜಣ್ಣ ಅವರು ಹೆಚ್ಚು ಶಕ್ತಿ ಇರುವ ನಾಯಕರು. ಅವರ ನೇತೃತ್ವದಲ್ಲಿ ಪಕ್ಷ ಇನ್ನಷ್ಟು ಉತ್ತಮವಾಗಿ ಸಂಘಟನೆಯಾಗುತ್ತದೆ ಎನ್ನುವ ವಿಶ್ವಾಸ ಅವರಿಗಿದೆ. ಅವರಿಗೆ ಜನತಾದಳ, ಬಿಜೆಪಿಯವರ ಜೊತೆ ಒಳ್ಳೆ ಸಖ್ಯವನ್ನಿಟ್ಟುಕೊಂಡಿದ್ದಾರೆ. ಅಲ್ಲಿಂದ ಒಂದಷ್ಟು ಜನರನ್ನು ಕರೆದುಕೊಂಡು ಬರಬಹುದು ಎನಿಸುತ್ತದೆ. ಹೀಗಾಗಿ ಅವರು ಪಕ್ಷದ ನೇತೃತ್ವವಹಿಸಲು ತುಡಿತದಲ್ಲಿದ್ದಾರೆ. ಅವರಿಗೆ ಹೈಕಮಾಂಡ್ ಜವಾಬ್ದಾರಿ ವಹಿಸಿದರೆ ನಾವು ಸಹಕಾರ ನೀಡಲು ಸಿದ್ಧ” ಎಂದು ತಿಳಿಸಿದರು.


ಚುನಾವಣೆ ದೃಷ್ಟಿಯಿಂದ ಪೂರ್ಣಪ್ರಮಾಣದ ಅಧ್ಯಕ್ಷರ ಅವಶ್ಯಕತೆಯಿದೆಯೇ ಎಂದು ಕೇಳಿದಾಗ “ಸಂಘಟನೆ ಸೇರಿದಂತೆ ಎಲ್ಲ ರಂಗಗಳಲ್ಲೂ ಕೆಲಸ ಮಾಡುವ ಅವಶ್ಯಕತೆ ಪಕ್ಷಕ್ಕಿದೆ. ಜವಾಬ್ದಾರಿ ಹೊತ್ತುಕೊಳ್ಳಲು ಯಾರೇ ಮುಂದೆ ಬಂದರೂ, ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿ ಎಲ್ಲಾ ನಾಯಕರು, ಕಾರ್ಯಕರ್ತರು ಒಪ್ಪಿಕೊಳ್ಳುತ್ತೇವೆ, ಇದರಲ್ಲಿ ಯಾವುದೇ ಅಪಸ್ವರವಿಲ್ಲ” ಎಂದರು.


ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ರಾಮನಗರದ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಉತ್ತಮವಾದ ಆಶಾಭಾವನೆ ಇಟ್ಟುಕೊಂಡಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಶಾಸಕರು ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಕುಮಾರಸ್ವಾಮಿ ಅವರ ಹೇಳಿಕೆಯನ್ನು ಸವಾಲು ಹಾಗೂ ಪ್ರತಿಷ್ಟೆಯಾಗಿ ಸ್ವೀಕರಿಸಿ, ನಾಲ್ಕು ಶಾಸಕರು ಜಿಲ್ಲೆಯ ಜನರ ಋಣ ತೀರಿಸುವಂತೆ ಕೆಲಸ ಮಾಡಬೇಕು ಎಂದು ವಿನಯಪೂರ್ವಕ ಮನವಿ ಮಾಡುತ್ತೇವೆ” ಎಂದು ತಿಳಿಸಿದರು.


ಕನಕಪುರವನ್ನು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ ಎಂದು ಕೇಳಿದಾಗ, “ಮತದಾರರ ತೀರ್ಪು ಅಂತಿಮ. ನಾನು ಈ ರೀತಿ ಕೂತಿದ್ದೇನೆ ಎಂದರೆ ಅದು ಮತದಾರರ ತೀರ್ಪು. ಅದನ್ನು ಪ್ರಶ್ನೆ ಮಾಡಲು ಸಾಧ್ಯವೇ?” ಎಂದು ಕೇಳಿದರು.


ಒಕ್ಕಲಿಗರು ಎಂದೂ ನಮ್ಮ ಕೈಬಿಟ್ಟಿಲ್ಲ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾನೂ ಒಕ್ಕಲಿಗನೇ. ಎಲ್ಲಾ ಪಕ್ಷದಲ್ಲೂ ಒಕ್ಕಲಿಗರಿದ್ದಾರೆ” ಎಂದು ತಿಳಿಸಿದರು.


ಚನ್ನಪಟ್ಟಣದ ಗೆಲುವಿನ ನಂತರ ದೇವಸ್ಥಾನಕ್ಕೆ ಹೋಗಿ ಹರಕೆ ತೀರಿಸಿದ್ದೀರಿ ಎಂದು ಕೇಳಿದಾಗ, “ಅನೇಕ ದಿನಗಳಿಂದ ನಮ್ಮ ಸ್ನೇಹಿತರು ಆ ದೇವಾಲಯಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡುತ್ತಿದ್ದರು. ಸಮಯ ಸಿಕ್ಕಿರಲಿಲ್ಲ. ಈಗ ಸಮಯ ಸಿಕ್ಕಿತು ಹಾಗಾಗಿ ಹೋಗಿ ಬಂದೆ. ನಾನು ಅಧಿಕಾರದಲ್ಲಿದ್ದಷ್ಟು ದಿನ ಜನರನ್ನೇ ದೇವರು ಎಂದು ಭಾವಿಸಿದ್ದೆ. ಅವರು ನನ್ನ ದೂರ ಮಾಡಿದರು. ಈಗ ಎಲ್ಲರೂ ದಿನಬೆಳಗಾದರೇ ಹೋಮ ಹವನ, ದೇವಾಲಯದಲ್ಲಿ ಪೂಜೆ ಮಾಡುತ್ತಿರುತ್ತಾರೆ. ಹೀಗಾಗಿ ನಾನು ಕೂಡ ಜನರನ್ನು ಬಿಟ್ಟು ದೇವರ ಕಡೆ ಮುಖ ಮಾಡಿದ್ದೇನೆ” ಎಂದು ತಿಳಿಸಿದರು.


ಚನ್ನಪಟ್ಟಣದಲ್ಲಿ ಕೃತಜ್ಞತಾ ಸಮಾರಂಭ ಯಾವಾಗ ಎಂದು ಕೇಳಿದಾಗ, “ಡಿ.14ರಂದು ಕೃತಜ್ಞತಾ ಸಮಾರಂಭವನ್ನು ಇಟ್ಟುಕೊಂಡಿದ್ದೇವೆ. ಸಿಎಂ ಹಾಗೂ ಡಿಸಿಎಂ ಕೂಡ ಈ ದಿನಾಂಕ ಕೊಟ್ಟಿದ್ದಾರೆ. ಆದರೆ ಕೆಲವು ಶಾಸಕರು ಅಧಿವೇಶನ ಮುಕ್ತಾಯದ ಬಳಿಕ ಮಾಡಿ ಎಂದು ಕೇಳುತ್ತಿದ್ದು, ಅಧಿವೇಶನದ ಬಳಿಕ ಭಾನುವಾರದಂದು ಈ ಸಮಾರಂಭ ಮಾಡುತ್ತೇವೆ” ಎಂದು ತಿಳಿಸಿದರು.


ಮಾಜಿ ಕಾರ್ಪೋರೇಟರ್ ನಾರಾಯಣ ಸ್ವಾಮಿ ಅವರು ಮುನಿರತ್ನ ಅವರು ತಮ್ಮ ಬೆಡ್ ರೂಮ್ ನಲ್ಲಿ ಕ್ಯಾಮೆರಾ ಇಟ್ಟಿದ್ದರು ಎಂದು ಆರೋಪ ಮಾಡಿರುವ ಬಗ್ಗೆ ಕೇಳಿದಾಗ, “ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಚುನಾವಣೆ ಸಂದರ್ಭದಲ್ಲಿ ಅವರು ನನ್ನನ್ನು ಭೇಟಿ ಮಾಡಿದ್ದರು. ನಂತರ ಭೇಟಿ ಮಾಡಿಲ್ಲ” ಎಂದು ತಿಳಿಸಿದರು.


ಇದನ್ನೂ ಓದಿ:ಹಾಸನ ಸಮಾವೇಶ: ಇದು ಸಿದ್ದರಾಮಯ್ಯಗೆ ಕಾಂಗ್ರೆಸ್ಸಿಗರೇ ಪ್ಲ್ಯಾನ್ ಮಾಡಿರುವ ಬೀಳ್ಕೊಡುಗೆ ಸಮಾರಂಭವಾ?


ಕಾಂಗ್ರೆಸ್ ಸರ್ಕಾರ ಬೀಳಿಸಲು ನಾವು ಬಿಜೆಪಿಗೆ ಸಹಕಾರ ನೀಡಬೇಕು ಎಂದು ಕುಮಾರಸ್ವಾಮಿ ಅವರು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿರುವ ಬಗ್ಗೆ ಕೇಳಿದಾಗ, “ಈಗ ಅವರು ಮಾಡುತ್ತಿರುವುದು ಅದೇ ಅಲ್ಲವೇ? ಅವರು ಈಗ ಅವರು ಯಾರ ಜತೆ ಇದ್ದಾರೆ? ಕಾಂಗ್ರೆಸ್ ಜೊತೆ ಇದ್ದಾರಾ? ಸ್ವತಂತ್ರವಾಗಿದ್ದಾರಾ? ಮಾಧ್ಯಮಗಳು ಅವರ ಹೇಳಿಕೆ ವಿಶ್ಲೇಷಣೆ ಮಾಡುವುದರಲ್ಲಿ ವ್ಯತ್ಯಾಸ ಮಾಡಿರಬೇಕು ಹೀಗಾಗಿ ಈ ರೀತಿ ಹೇಳಿದ್ದಾರೆ. ಅವರ ಜತೆ ಮತ್ತೆ ಸಂಬಂಧ ಭದ್ರಪಡಿಸಿಕೊಳ್ಳಲು ಈ ಹೇಳಿಕೆ ನೀಡುತ್ತಿದ್ದಾರೆ. ಅವರು ಬಿಜೆಪಿ ಜತೆಯಲ್ಲಿದ್ದಾರೆ ಎಂದು ರಾಜ್ಯ ಹಾಗೂ ರಾಷ್ಟ್ರದ ಜನರಿಗೆ ಗೊತ್ತಿದೆ. ಅವರು ಎನ್ ಡಿಎ ಭಾಗವಾಗಿ ಕೇಂದ್ರದ ಮಂತ್ರಿಯಾಗಿದ್ದಾರೆ. ಅವರ ಪತನದ ಅಜೆಂಡಾಗೆ ರಾಜ್ಯದ ಜನ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಉತ್ತರ ನೀಡಿದ್ದಾರೆ. ಈ ಹೇಳಿಕೆ ಹೊರತುಪಡಿಸಿ ರಾಜ್ಯದ ಹಿತಕ್ಕಾಗಿ ಹಾಗೂ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿ. ಆಗ ರಾಜ್ಯದ ಜನ ಇಷ್ಟಪಡುತ್ತಾರೆ. ಚುನಾವಣೆಯಲ್ಲಿ ರಾಜ್ಯದ ಜನ ಯಾರು ಸರಿ ಎಂದು ತೀರ್ಪು ನೀಡುತ್ತಾರೆ. ಇಂತಹ ರಾಜಕೀಯಕ್ಕೆ ಎಲ್ಲಾ ಪಕ್ಷಗಳು ವಿಶ್ರಾಂತಿ ನೀಡುವುದು ಉತ್ತಮ. ಕಾಂಗ್ರೆಸ್, ಬಿಜೆಪಿ ಹಾಗೂ ದಳ ಮೂರು ಪಕ್ಷ ತಮ್ಮದೇ ಆದ ರೀತಿ ಅಧಿಕಾರದಲ್ಲಿದ್ದು ರಾಜ್ಯದ ಹಿತಕ್ಕಾಗಿ ಕೆಲಸ ಮಾಡಲಿ. ದೂಷಣೆ ಮಾಡಬೇಕು ಎಂಬ ಕಾರಣಕ್ಕೆ ಪ್ರತಿ ನಡೆಯನ್ನು ದೂಷಿಸುವುದು ಸರಿಯಲ್ಲ. ರಾಜ್ಯದ ಹಿತ, ಜೀವಂತ ಸಮಸ್ಯೆಗಳಿಗೆ ನಿಮ್ಮ ಪರಿಹಾರ ಸೂತ್ರದ ಬಗ್ಗೆ ಗಮನಹರಿಸಬೇಕು” ಎಂದು ಅಭಿಪ್ರಾಯಪಟ್ಟರು. 


ಚಂದ್ರಶೇಖರ ಸ್ವಾಮೀಜಿಗಳ ವಿರುದ್ಧದ ಪ್ರಕರಣ ವಿಚಾರವಾಗಿ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಸ್ವಾಮೀಜಿಗಳ ಮೇಲೆ ದ್ವೇಷದ ರಾಜಕಾರಣ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಈಗಾಗಲೇ ಪರಮಪೂಜ್ಯ ಸ್ವಾಮೀಜಿಗಳು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ನಾವು ಸಂವಿಧಾನದ ಅಡಿಯಲ್ಲಿ ಪ್ರಜೆಯಾಗಿ ಬದುಕುತ್ತಿದ್ದು, ಸಂವಿಧಾನ ನಮಗೆ ಮತದಾನ ಸೇರಿದಂತೆ ಅನೇಕ ಹಕ್ಕುಗಳನ್ನು ನೀಡಿದೆ. ಸಂವಿಧಾನ ನೀಡಿರುವ ವಾಕ್ ಸ್ವಾತಂತ್ರ್ಯವನ್ನು ಬಳಸಿಕೊಂಡು ಕೆಲವರು ಆಗಾಗ್ಗೆ ಏನೇನೋ ಹೇಳಿಕೆ ನೀಡುತ್ತಿರುತ್ತಾರೆ. ಪರಮಪೂಜ್ಯರು ಈಗಾಗಲೇ ಸ್ಪಷ್ಟನೆ ನೀಡಿ, ತಮ್ಮ ಮಾತು ಸಾಂದರ್ಭಿಕವಾಗಿ ತಪ್ಪು ಎಂದಿದ್ದಾರೆ. ಇಂತಹ ಹೇಳಿಕೆ ಬಂದಾಗ ಸರ್ಕಾರ ದೂರು ದಾಖಲಿಸಿಕೊಳ್ಳುವುದು ಸಹಜ. ಸ್ವಾಮೀಜಿಗಳು ವಿಷಾದ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಇಲ್ಲಿಗೆ ಮುಕ್ತಾಯಗೊಳಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಹಾಗೂ ಗೃಹಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ” ಎಂದು ತಿಳಿಸಿದರು.


ಈ ವಿಚಾರವಾಗಿ ಬಿಜೆಪಿವರು ಹೋರಾಟ ಮಾಡಲು ಮುಂದಾಗಿರುವ ಬಗ್ಗೆ ಕೇಳಿದಾಗ, “ಬಿಜೆಪಿಯವರು ತಮ್ಮ ಹೋರಾಟವನ್ನು ಯತ್ನಾಳ್ ವಿರುದ್ಧ ಹೋರಾಟ ಮಾಡುತ್ತಾರೋ, ನಮ್ಮ ವಿರುದ್ಧ ಮಾಡುತ್ತಾರೋ ಗೊತ್ತಿಲ್ಲ. ನಮ್ಮ ಸರ್ಕಾರ ಅಭಿವೃದ್ಧಿ ಕಡೆ ಮುನ್ನಡೆಯುತ್ತಿದೆ. ವಿರೋಧ ಪಕ್ಷಗಳು ಜನರ ಕಷ್ಟ ಅರಿತು ಅಭಿವೃದ್ಧಿ ಕಡೆಗೆ ಆದ್ಯತೆ ನೀಡಬೇಕು. ಸಕಾರಾತ್ಮಕ ನಿಲುವು ನೀಡಬೇಕು” ಎಂದು ತಿಳಿಸಿದರು.


ವಿಜಯೇಂದ್ರ ಹಾಗೂ ಡಿ.ಕೆ ಶಿವಕುಮಾರ್ ನಡುವಣ ಹೊಂದಾಣಿಕೆ ರಾಜಕೀಯದ ದಾಖಲೆ ಬಿಡುಗಡೆ ಮಾಡುತ್ತೇನೆ ಎಂಬ ಯತ್ನಾಳ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ದಾಖಲೆಗಳನ್ನು ಬಿಡುಗಡೆ ಮಾಡಲಿ. ವಿಜಯೇಂದ್ರ ಮಾತ್ರವಲ್ಲ ಯತ್ನಾಳ್ ಅವರಿಗೂ ಶಿವಕುಮಾರ್ ಜತೆ ಉತ್ತಮ ಬಾಂಧವ್ಯವಿದೆ. ಅವರು ಕೂಡ ಆತ್ಮೀಯರು. ಅವರು ಕೂಡ ಶಿವಕುಮಾರ್ ಅವರ ಜತೆಗೆ ಉಭಯಕುಶಲೋಪರಿ ಚರ್ಚೆ ಮಾಡುತ್ತಿರುತ್ತಾರೆ. ಕೇವಲ ವಿಜಯೇಂದ್ರ ಬಗ್ಗೆ ಯಾಕೆ ಹೇಳಿದ್ದಾರೆ ಗೊತ್ತಿಲ್ಲ. ನನಗೆ ಅವರ ಆಂತರಿಕ ವಿಚಾರ ಅಗತ್ಯವಿಲ್ಲ” ಎಂದರು.


ಸ್ವಾಭಿಮಾನಿ ಸಮಾವೇಶದ ಬಗ್ಗೆ ಕೇಳಿದಾಗ, “ಇದು ಕಾಂಗ್ರೆಸ್ ಪಕ್ಷದ ಸಮಾವೇಶ. ಇದನ್ನು ರಾಜ್ಯದ ಮೂರ್ನಾಲ್ಕು ಕಡೆಗಳಲ್ಲಿ ಮಾಡುವ ಉದ್ದೇಶವಿದ್ದು, ಮೊದಲು ಹಾಸನದಲ್ಲಿ ಮಾಡಲಾಗುತ್ತಿದೆ. ಈ ಸಮಾವೇಶದಲ್ಲಿ ರಾಜ್ಯ ಹಾಗೂ ರಾಷ್ಟ್ರ ನಾಯಕರು ಭಾಗವಹಿಸಲಿದ್ದಾರೆ. ಕೆಲವರು ಹೇಳಿಕೆ ನೀಡುವಾಗ ಅವರನ್ನು ಓಲೈಸಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಾರೆ. ಆದರೆ ಎಲ್ಲರಿಗಿಂತ ಪಕ್ಷ ಮೊದಲು ಎಂದು ಅರಿತಿದ್ದಾರೆ ಎಂದು ಭಾವಿಸಿದ್ದೇನೆ” ಎಂದು ತಿಳಿಸಿದರು.


ಇದನ್ನೂ ಓದಿ: ದೇಶದ್ರೋಹಿ ಚಟುವಟಿಕೆಯಲ್ಲಿ ಪಾಲ್ಗೊಂಡವರ ಕೇಸ್ ಹಿಂಪಡೆಯುವ ಸರಕಾರ ಸ್ವಾಮೀಜಿಗಳಿಗೆ ಬೆದರಿಕೆ ಹಾಕುವುದು ಸರಿಯಲ್ಲ: ವಿಜಯೇಂದ್ರ


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.