ಬೆಂಗಳೂರು: ನಗರಾಭಿವೃದ್ಧಿ ಸಚಿವರಾದ ಡಾ.ಜಿ. ಪರಮೇಶ್ವರ್ ಅವರು ಇಂದು ಬೆಳಗ್ಗೆ ದೇವಸಂದ್ರ ಬಳಿ ಇರುವ ರಾಧಕೃಷ್ಣ ದೇವಸ್ಥಾನ ಇಂದಿರಾ ಕ್ಯಾಂಟಿನ್, ಇಂದಿರಾ ಅಡುಗೆ ಮನೆ, ಸಾರ್ವಜನಿಕ ಗ್ರಂಥಾಲಯ, ರಿಂಗ್‌ರಸ್ತೆ ವೈಟ್‌ಟಾಪಿಂಗ್, ಗಂಗಾನಗರ ಹೆರಿಗೆ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.


COMMERCIAL BREAK
SCROLL TO CONTINUE READING

ಮೊದಲಿಗೆ ದೇವಸಂದ್ರ ಇಂದಿರಾ ಕ್ಯಾಂಟಿನ್‌ ಭೇಟಿ ನೀಡಿದ ಪರಮೇಶ್ವರ್, ಅಲ್ಲಿ ಜನರಿಗೆ ನೀಡುವ ತಿಂಡಿಗಳ ಬಗ್ಗೆ ಪರಿಶೀಲನೆ ನಡೆಸಿದರಿ. ಮೂರು ಇಡ್ಲಿ ಹಾಗೂ ಬಿಸಿಬೇಳೆ ಬಾತ್‌‌ಗೆ 10 ರೂಪಾಯಿ ಹಣ ನೀಡಿ ಖರೀದಿಸಿ, ತಿಂಡಿ ರುಚಿ ಪರಿಶೀಲಿಸಿದರು. 



ಇದೇ ವೇಳೆ ಇಂದಿರಾ ಕ್ಯಾಂಟೀನ್‌ಗೆ ಬಂದಿದ್ದ ಸಾರ್ವಜನಿಕರ ಬಳಿ ಮಾತನಾಡಿಸಿ, ಕ್ಯಾಂಟಿನ್‌ನಲ್ಲಿ ನೀಡುವ ಊಟದ ಬಗ್ಗೆ ವಿಚಾರಿಸಿದರು.



ಪ್ರತಿಯೊಬ್ಬರೂ ತಿಂಡಿಯ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ಕಂಡು ಸಂತಸಗೊಂಡರು.



ಬಳಿಕ ದೇವಸಂದ್ರ ಇಂದಿರಾ ಕ್ಯಾಂಟೀನ್‌ ತೆರಳಿದ ಅವರು, ಅಡುಗೆ ತಯಾರಿಸುವ ವಿಧಾನ ಹಾಗೂ ಶುಚಿತ್ವವನ್ನು ಪರಿಶೀಲಿಸಿದರು. ಪ್ರತಿಯೊಂದು ಸ್ವಚ್ಛವಾಗಿದ್ದರಿಂದ ಅಲ್ಲಿನ ಸಿಬ್ಬಂದಿಗೆ ಶ್ಲಾಂಘಿಸಿದರು.


ಬಳಿಕ ಪಕ್ಕದಲ್ಲೇ ಇದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ತೆರಳಿದ ಅವರು, ನಿತ್ಯ ಎಷ್ಟು ‌ಮಂದಿ ಪುಸ್ತಕ ಓದಲು ಆಗಮಿಸುತ್ತಾರೆ ಎಂದು ಹಾಜರಾತಿ ಪುಸ್ತಕ ವೀಕ್ಷಿಸಿದರು.



ಬಳಿಕ ಹೆಬ್ಬಾಳ ರಿಂಗ್‌ ರಸ್ತೆಯಲ್ಲಿ‌ ನಡೆಯುತ್ತಿದ್ದ ವೈಟ್‌ಟಾಪಿಂಗ್‌ ಕಾಮಗಾರಿ ವೀಕ್ಷಿಸಿದರು.‌ಶೀಘ್ರವೇ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಗಂಗಾನಗರ ಹೆರಿಗೆ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ ಅವರು ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು.


ಇಂದಿರಾ ಕ್ಯಾಂಟೀನ್‌ಗಳಲ್ಲಿ‌ ಊಟದ ಗುಣಮಟ್ಟದ ಬಗ್ಗೆ ದೂರು:
ಬಳಿಕ ಮಾಧ್ಯಮದಿಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್‌ಗಳಲ್ಲಿ‌ ಊಟದ ಗುಣಮಟ್ಟದ ಬಗ್ಗೆ ದೂರು ಕೇಳಿ ಬಂದಿದ್ದರಿಂದ ಇಂದು ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದೆ.‌ ನಾನೂ ಸಹ ತಿಂಡಿ ಸೇವಿಸಿದೆ.‌ ರುಚಿ ಹಾಗೂ ಶುಚಿ ಎರಡೂ ಉತ್ತಮವಾಗಿದೆ ಎಂದು ಹೇಳಿದರು.


ಗಂಗಾನಗರ ಹೆರಿಗೆ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಇತ್ತೀಚೆಗೆ ಬಿಬಿಎಂಪಿ ವತಿಯಿಂದ ನಿರ್ಮಿಸಲಾಗಿದ್ದು, ಖಾಸಗಿ ಆಸ್ಪತ್ರೆಯಷ್ಟೇ ಗುಣಮಟ್ಟದ್ದಾಗಿದೆ. ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.


ಮೊದಲೇ ತಿಳಿಸಿ ಪರಿಶೀಲನೆಗೆ ತೆರಳಿದರೆ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಳ್ಳುತ್ತಾರೆ. ಹೀಗಾಗಿ ದಿಢೀರ್‌ ಭೇಟಿ ‌ನೀಡಿದೆ. ಮುಂದಿನ‌ ದಿನಗಳಲ್ಲಿ ಇಂಥ ಇನ್ನಷ್ಟು ದಿಢೀರ್‌ ಭೇಟಿ ನೀಡಿ, ವಸ್ತು ಸ್ಥಿತಿಯನ್ನು ಪರಿಶೀಲಿಸಿ ಕ್ರಮ‌ಕೈಗೊಳ್ಳುತ್ತೇನೆ ಎಂದು ಹೇಳಿದರು.