ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ ಕಾಂಗ್ರೆಸ್ ನ ಉಮೇಶ್ ಜಾಧವ್
ಕಾಂಗ್ರೆಸ್ ನ ಚಿಂಚೋಳಿ ಕ್ಷೇತ್ರದ ಬಂಡಾಯ ಶಾಸಕ ಡಾ. ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ನ ಚಿಂಚೋಳಿ ಕ್ಷೇತ್ರದ ಬಂಡಾಯ ಶಾಸಕ ಡಾ. ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಜಾಧವ್ ತಮ್ಮ ರಾಜೀನಾಮೆಗೆ ಯಾವುದೇ ಕಾರಣವನ್ನು ವಿವರಿಸಿಲ್ಲ ಎನ್ನಲಾಗಿದೆ.ಈ ಹಿಂದೆ ಶಾಸಕ ಜಾಧವ್ ಇತರ ಶಾಸಕರಾದ ರಮೇಶ್ ಜಾರಕಿಹೋಳಿ ಬಿ,ನಾಗೇಂದ್ರ ಮಹೇಶ್ ಕುಮತಹಳ್ಳಿ ಜೊತೆ ಸೇರಿ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯದ ಬಾವುಟ ಹಾರಿಸಿದ್ದರು.
ಈಗ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ " ಉಮೇಶ್ ಜಾಧವ್ ಅವರ ರಾಜಿನಾಮೆ ಅವರು ತಮ್ಮನ್ನು ಬಿಜೆಪಿಗೆ ಈಗಾಗಲೇ ಮಾರಿಕೊಂಡಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಈ ನಾಲ್ವರು ಬಂಡಾಯ ಶಾಸಕರು ಬಜೆಟ್ ಅಧಿವೇಶನದಲ್ಲಿಯೂ ಕೂಡ ಗೈರು ಹಾಜರಾಗಿದ್ದರು,ಅಲ್ಲದೆ ಜನವರಿ 18 ಮತ್ತು ಫೆಬ್ರುವರಿ 8 ರಂದು ಕಾಂಗ್ರೆಸ್ ಪಕ್ಷದ ಶಾಸಕಾಂಗದ ಸಭೆಗೂ ಕೂಡ ಅವರು ಬಂದಿರಲಿಲ್ಲ.
ಈಗ ಅವರನ್ನು ಮುಂಬರುವ ಲೋಕಸಭೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಕಣಕ್ಕಿಳಿಸುವ ಪ್ರಯತ್ನವನ್ನು ಬಿಜೆಪಿ ಮಾಡಲಿದೆ ಎನ್ನಲಾಗಿದೆ.ಕಲ್ಬುರ್ಗಿಯಲ್ಲಿ ಲಂಬಾಣಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಕಲ್ಬುರ್ಗಿ ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಬಿಜೆಪಿ ತುದಿಗಾಲಲ್ಲಿ ನಿಂತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.