ಬೆಂಗಳೂರು: ಪಂಚ ಗ್ಯಾರಂಟಿ, ಬದ್ಧ ವೆಚ್ಚ, ಬಂಡವಾಳ ವೆಚ್ಚದ ಹೊರೆ ನಿಭಾವಣೆಗಾಗಿ ಸಿದ್ದರಾಮಯ್ಯ ಸರ್ಕಾರ ಈಗಷ್ಟೇ ಮುಗಿದ ಆರ್ಥಿಕ ವರ್ಷದಲ್ಲಿ ಹೆಚ್ಚು ಸಾಲವನ್ನೇ ನೆಚ್ಚಿಕೊಂಡಿತ್ತು. ಆದರೆ, ರಾಜ್ಯ ಸರ್ಕಾರ 2023-24 ಸಾಲಿನಲ್ಲಿ ಬಜೆಟ್ ಅಂದಾಜು‌ ಮೀರಿ ಹೆಚ್ಚಿನ ಸಾಲ ಮಾಡಿರುವುದು ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

2023-24 ಆರ್ಥಿಕ ವರ್ಷ ಮುಕ್ತಾಯವಾಗಿದೆ. 2023-24 ಆರ್ಥಿಕ ವರ್ಷದಲ್ಲಿ ಆರ್ಥಿಕ ಸ್ಥಿತಿಗತಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲದ ಕಾರಣ ಹಣಕಾಸು ನಿರ್ವಹಣೆ ತಲೆನೋವಾಗಿ ಪರಿಣಮಿಸಿತು. ಅದರಲ್ಲೂ ಪಂಚ ಗ್ಯಾರಂಟಿಗಳ ಹೊರೆ ಮಧ್ಯೆ ಬರಸಿಡಿಲಿನಂತೆ ಹೊಡೆದ ಬರ ರಾಜ್ಯದ ಆರ್ಥಿಕ ಸ್ಥಿತಿಗೆ ಸಂಕಷ್ಟತಂದೊಡ್ಡಿತು. ಇತ್ತ ಪ್ರಸಕ್ತ ವರ್ಷದಲ್ಲಿ ತೆರಿಗೆ ಸಂಗ್ರಹ ನಿಗದಿತ ಗುರಿ ತಲುಪದ ಕಾರಣ ಕಾಂಗ್ರೆಸ್ ಸರ್ಕಾರದ ಆರ್ಥಿಕ ಸಂಕಟ ಉಲ್ಬಣಗೊಳಿಸಿತು. ಹೀಗಾಗಿ ಪಂಚ ಗ್ಯಾರಂಟಿಗೆ ಅನುದಾನ, ಬದ್ಧ ವೆಚ್ಚದ ಹೊರೆ, ಬರದ ನಿರ್ವಹಣೆ, ತೆರಿಗೆ ಸಂಗ್ರಹದ ಕೊರತೆಯನ್ನು ನಿಭಾಯಿಸಲು ಸರ್ಕಾರಕ್ಕೆ ಸಾಲದ ಮೊರೆ ಅನಿವಾರ್ಯವಾಗಿತ್ತು. 


2023-24 ಸಾಲಿನ ಆರ್ಥಿಕ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದಿಂದ 6,254 ಕೋಟಿ ರೂ. ಸಾಲ ಮಾಡಲು ಅಂದಾಜಿಸಿತ್ತು. ಮುಕ್ತ ಮಾರುಕಟ್ಟೆಯಲ್ಲಿ 78,363 ಕೋಟಿ ರೂ. ಸಾಲ ಎತ್ತುವಳಿ ಮಾಡಲು ಅಂದಾಜಿಸಿತ್ತು. ಉಳಿದಂತೆ ಎಲ್ಐಸಿ, ಎನ್ ಎಸ್ಎಸ್ಎಫ್, ಎನ್ ಸಿಡಿಸಿಯಿಂದ 1,201 ಕೋಟಿ ರೂ. ಸಾಲವಾಗಿ ಒಟ್ಟು ಅಂದಾಜು 85,818 ಕೋಟಿ ರೂ. ಸಾಲ ಮಾಡುವುದಾಗಿ ಬಜೆಟ್ ನಲ್ಲಿ ತಿಳಿಸಲಾಗಿತ್ತು. 2023-24 ಬಜೆಟ್ ವರ್ಷ ಮುಕ್ತಾಯವಾಗಿದ್ದು, ಸರ್ಕಾರ ಬಜೆಟ್ ಅಂದಾಜಿಗಿಂತ ಹೆಚ್ಚಿನ ಸಾಲ ಮಾಡಿರುವುದು ಆರ್ಥಿಕ ಇಲಾಖೆ ನೀಡಿದ ಸಾರ್ವಜನಿಕ ಸಾಲದ ಅಂಕಿಅಂಶದಿಂದ ಗೊತ್ತಾಗುತ್ತೆ. 


ಬಜೆಟ್ ಅಂದಾಜು ಮೀರಿ ಸಾಲ ಎತ್ತುವಳಿ?:
ರಾಜ್ಯ ಸರ್ಕಾರ 2023-24 ಸಾಲಿನ ಬಜೆಟ್ ನಲ್ಲಿ ಒಟ್ಟು 85,818 ಕೋಟಿ ರೂ. ಸಾಲ ಮಾಡುವುದಾಗಿ ಅಂದಾಜಿಸಿತ್ತು. ಈ ಪೈಕಿ ಮುಕ್ತ ಮಾರುಕಟ್ಟೆಯಿಂದ 78,363 ಕೋಟಿ ರೂ. ಸಾಲ ಎತ್ತುವಳಿ ಮಾಡುವುದಾಗಿ ಹೇಳಲಾಗಿತ್ತು. ಅದರಂತೆ ರಾಜ್ಯ ಸರ್ಕಾರ ಆರ್ ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ 2023-24 ಆರ್ಥಿಕ ವರ್ಷದಲ್ಲಿ ಒಟ್ಟು 78,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ರಾಜ್ಯ ಸರ್ಕಾರ ಕಳೆದ ಅಕ್ಟೋಬರ್ 17ನಿಂದ ಆರ್ ಬಿಐ ಮೂಲಕ ರಾಜ್ಯ ಅಭಿವೃದ್ಧಿ ಸಾಲದ ರೂಪದಲ್ಲಿ ಮುಕ್ತ ಮಾರುಕಟ್ಟೆಯಿಂದ ಸಾಲದ ಎತ್ತುವಳಿ ಆರಂಭಿಸಿ ಬಜೆಟ್ ವರ್ಷದ ಅಂತ್ಯ ಮಾರ್ಚ್ ವರೆಗೆ 78,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. 


ಆರ್ಥಿಕ ಇಲಾಖೆ ಏಪ್ರಿಲ್ ನಿಂದ ಫೆಬ್ರವರಿ ಅಂತ್ಯದ ವರೆಗೆ ನೀಡಿರುವ ಅಧಿಕೃತ ಜಮೆ-ವೆಚ್ಚಗಳ ಅಂಕಿಅಂಶದಂತೆ ಸಾರ್ವಜನಿಕ ಸಾಲವಾಗಿ ಒಟ್ಟು 67,367 ಕೋಟಿ ರೂ.‌ ಎತ್ತುವಳಿ ಮಾಡಿದೆ. ಈ ಪೈಕಿ ಫೆಬ್ರವರಿ ವರೆಗೆ ಆರ್ ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ 57,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ಇನ್ನು ಇತರ ಮೂಲಗಳಾದ ಕೇಂದ್ರದಿಂದ ಸಾಲ ಹಾಗೂ ಇತರ ಸಾರ್ವಜನಿಕ ಹಣಕಾಸು ಸಂಸ್ಥೆಗಳಿಂದ ಸಾಲದ ರೂಪದಲ್ಲಿ 10,367 ಎತ್ತುವಳಿ ಮಾಡಿದೆ. ಆ ಮೂಲಕ ಫೆಬ್ರವರಿ ಅಂತ್ಯಕ್ಕೆ ಒಟ್ಟು 67,367 ಕೋಟಿ ಸಾರ್ವಜನಿಕ ಸಾಲ ಮಾಡಿರುವುದಾಗಿ ಆರ್ಥಿಕ ಇಲಾಖೆ ತಿಳಿಸಿದೆ. ಮಾರ್ಚ್ ಅಂತ್ಯದ ವರೆಗಿನ ಜಮೆ-ವೆಚ್ಚ-ಸಾಲದ ಅಂತಿಮ ಅಂಕಿಅಂಶವನ್ನು ಆರ್ಥಿಕ ಇಲಾಖೆ ಸಿದ್ಧಪಡಿಸುತ್ತಿದೆ. 


ಆರ್ಥಿಕ ವರ್ಷದ ಕೊನೆ ತಿಂಗಳಾದ ಮಾರ್ಚ್ ತಿಂಗಳಲ್ಲಿ ರಾಜ್ಯ ಸರ್ಕಾರ ಆರ್ ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ಒಟ್ಟು 21,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ಲಭ್ಯವಿರುವ ಅಂಕಿಅಂಶದ ಪ್ರಕಾರ ಫೆಬ್ರವರಿ ತಿಂಗಳವರೆಗಿನ ಒಟ್ಟು ಸಾಲದ ಮೊತ್ತವಾದ 67,367 ಕೋಟಿಗೆ ಮಾರ್ಚ್ ತಿಂಗಳಲ್ಲಿ ಮುಕ್ತ ಮಾರುಕಟ್ಟೆಯಿಂದ ಎತ್ತುವಳಿ ಮಾಡಿದ ಸಾಲವಾದ 21,000 ಕೋಟಿ ರೂ. ಸೇರ್ಪಡೆಗೊಳಿಸಿದರೆ ಒಟ್ಟು 88,367 ಕೋಟಿ ರೂ. ಸಾಲ ಮಾಡಿದಂತಾಗಿದೆ. ಅಂದರೆ ಬಜೆಟ್ ಅಂದಾಜು 85,818 ಕೋಟಿ ಸಾಲದ ಮೊತ್ತ ಮೀರಿ ಸುಮಾರು 2,549 ಕೋಟಿ ರೂ. ಹೆಚ್ಚುವರಿ ಸಾಲ ಮಾಡಲಾಗಿದೆ. ಮಾರ್ಚ್ ತಿಂಗಳಲ್ಲಿ ಮುಕ್ತ ಮಾರುಕಟ್ಟೆ ಹೊರತಾಗಿ ಇತರ ಮೂಲಗಳಿಂದಲೂ ಸಾಲ ಮಾಡಲಾಗಿದ್ದು, ಅದರ ನಿಖರ ಅಂಕಿಅಂಶ ಲಭ್ಯವಾಗಿಲ್ಲ. ಇತರ ಮೂಲಗಳ ಸಾಲದ ಮೊತ್ತವೂ ಸೇರಿದರೆ 2023-24 ಸಾಲಿನಲ್ಲಿ 90,000 ಕೋಟಿ ರೂ. ಗೂ ಅಧಿಕ ಸಾಲ ಮಾಡಿರುವ ಬಲವಾದ ಅನುಮಾನ ಮೂಡಿದೆ. 


2024-25 ಸಾಲಿನ ಮೊದಲ ತ್ರೈ ಮಾಸಿಕದಲ್ಲೇ ಸಾಲ:
2024-25 ಬಜೆಟ್ ವರ್ಷ ಆರಂಭವಾಗಿದ್ದು, ಈ ಬಾರಿ ರಾಜ್ಯ ಸರ್ಕಾರ ಮೊದಲ ತ್ರೈಮಾಸಿಕದಲ್ಲೇ ಆರ್ ಬಿಐ ಮೂಲಕ ಸಾಲ ಎತ್ತುವಳಿ ಮಾಡುವುದಾಗಿ ಆರ್ ಬಿಐಗೆ ಮಾಹಿತಿ ನೀಡಿದೆ. 2024-25 ಸಾಲಿನಲ್ಲಿ ಅಂದಾಜು 1,05,246 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿದೆ. ಅದರಂತೆ ಕೇಂದ್ರ ಸರ್ಕಾರದಿಂದ 6,855 ಕೋಟಿ ರೂ. ಸಾಲ ಪಡೆಯಲು ಅಂದಾಜಿಸಲಾಗಿದೆ. ಬಹಿರಂಗ ಮಾರುಕಟ್ಟೆ ಮೂಲಕ 96,840ಕೋಟಿ ರೂ. ಸಾಲ ಮಾಡಲು ಮುಂದಾಗಿದೆ. 


ಕಳೆದ ಬಾರಿ ರಾಜ್ಯ ಸರ್ಕಾರ ಆರ್ಥಿಕ ವರ್ಷದ ಎರಡು ತ್ರೈಮಾಸಿಕ ಅಂದರೆ ಮೊದಲು ಆರು ತಿಂಗಳು ಆರ್ ಬಿಐ ಮೂಲಕ ಸಾಲವನ್ನೇ ಎತ್ತುವಳಿ ಮಾಡಿರಲಿಲ್ಲ. ಆದರೆ, ಈ ಬಾರಿ ಮೊದಲ ತ್ರೈಮಾಸಿಕದಲ್ಲೇ ಮುಕ್ತ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡುವುದಾಗಿ ಆರ್ ಬಿಐಗೆ ಮಾಹಿತಿ ನೀಡಿದೆ. ಅದರಂತೆ ಏಪ್ರಿಲ್-ಜೂನ್ ಮೊದಲ ತ್ರೈಮಾಸಿಕದಲ್ಲೇ 10,000 ಕೋಟಿ ರೂ. ಸಾಲ ಮಾಡುವುದಾಗಿ ರಾಜ್ಯ ಸರ್ಕಾರ ಆರ್ ಬಿಐಗೆ ಮಾಹಿತಿ ನೀಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.