ಬೆಂಗಳೂರು: ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ವಿರುದ್ಧ ದಾಖಲಾಗಿರುವ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೋಟಿಸ್ ನೀಡಿದ್ದು, ಸೆ.19ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, "ಜಾರಿ ನಿರ್ದೇಶನಾಲಯದಿಂದ ನನಗೆ ನೋಟಿಸ್ ಬಂದಿರುವುದು ನಿಜ. ಅಧಿಕಾರಿಗಳು ನನ್ನನ್ನು ಸಾಕ್ಷಿಯಾಗಿ ವಿಚಾರಣೆ ನಡೆಸಲು ನೋಟಿಸ್ ನೀಡಿದ್ದಾರೆ. ಇದಕ್ಕೂ ಮೊದಲು ಸೆ.14ರಂದು ಹಾಜರಾಗಲು ತಿಳಿಸಲಾಗಿತ್ತು. ಆದರೆ ಅಂದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ ಕಾರಣ ಮತ್ತೆ ಸೆ.19ಕ್ಕೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ನಾಳೆ ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದೇನೆ. ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ" ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.


ಇದಕ್ಕೂ ಮುನ್ನ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ಪುತ್ರಿ ಐಶ್ವರ್ಯ ಅವರನ್ನು ಸೆ.12ರಂದು ವಿಚಾರಣೆ ನಡೆಸಿದ್ದ ಇಡಿ ಅಧಿಕಾರಿಗಳು, ಆಕೆಯ ಹೆಸರಿನಲ್ಲಿ ಸ್ಥಾಪಿಸಲಾದ ಸಂಸ್ಥೆಗಳು ಮತ್ತು ಹಣಕಾಸಿನ ವ್ಯವಹಾರದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದರು. ಸುಮಾರು 7 ಗಂಟೆಗಳ ಕಾಲ ಆಕೆಯನ್ನು ವಿಚಾರಣೆ ನಡೆಸಲಾಗಿತ್ತು. ಇದಲ್ಲದೆ, ಡಿ.ಕೆ.ಶಿವಕುಮಾರ್ ಆಪ್ತ ಸಚಿನ್ ನಾರಾಯಣ್ ಅವರನ್ನೂ ಸಹ ಇಡಿ ವಿಚಾರಣೆ ನಡೆಸಿದೆ.