ಇಡಿ ಸಮನ್ಸ್: ನಾನು ಕೆಂಪೇಗೌಡನ ಮಗ, ಹೆದರಿ ಹೋಗುವ ಮಾತೇ ಇಲ್ಲ- ಡಿ.ಕೆ. ಶಿವಕುಮಾರ್
ನಾನು ನ್ಯಾಯಯುತವಾಗಿ ಜೀವನ ನಡೆಸುತ್ತಿದ್ದೇನೆ- ಮಾಜಿ ಸಚಿವ ಡಿ.ಕೆ. ಶಿವಕುಮಾರ್
ಬೆಂಗಳೂರು: ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ಮಾಡಲಾಗುತ್ತಿದೆ. ನ್ಯಾಯಬದ್ಧವಾಗಿ ನಾನು ಕೆಲಸ ಮಾಡಿದ್ದೇನೆ. ಕಾನೂನು ಚೌಕಟ್ಟಿನಲ್ಲಿ ಎಲ್ಲವನ್ನೂ ಎದುರಿಸಲು ನಾನು ಸಿದ್ಧ. ನಾನೂ ಕಾನೂನು, ರಾಜಕೀಯ ಹಾಗೂ ಸಾಮಾಜಿಕವಾಗಿ ಎಲ್ಲವನ್ನೂ ಎದುರಿಸುತ್ತೇನೆ. ನಾನು ಕೆಂಪೇಗೌಡರ ಮಗ. ನಾನು ಎದುರಿ ಓಡಿ ಹೋಗುವವನಲ್ಲ, ಹೆದರಿ ಅವಿತುಕೊಳ್ಳುವ ವ್ಯಕ್ತಿ ನಾನಲ್ಲ ಎಂದು ಮಾಜಿ. ಸಚಿವ ಡಿ.ಕೆ. ಶಿವಕುಮಾರ್ ಸ್ಪಷ್ಟವಾಗಿ ಹೇಳಿದರು.
ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗುವಂತೆ ತಮಗೆ ನೀಡಿರುವ ಸಮನ್ಸ್ ಕುರಿತು ಸದಾಶಿವನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ಮಾಧ್ಯಮಗಳು ತಮಗೆ ಬೇಕಾದಂತೆ ನನ್ನನ್ನು ಬಿಂಬಿಸುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನೇನು ಮಾತನಾಡಲು ಹೋಗುವುದಿಲ್ಲ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಿಂಬಿಸಿದ್ದೀರಿ. ನಾನೊಬ್ಬ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ, ನಾಯಕನಾಗಿ ಪಕ್ಷ ನೀಡಿದ ಜವಾಬ್ದಾರಿಯನ್ನು ನಡೆಸಿಕೊಂಡು ಬಂದಿದ್ದೇನೆ ಎಂದರು.
ಕಳೆದ 40 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನೂ ನಾನು ಕಂಡಿದ್ದೇನೆ. ಗುಜರಾತ್ ಶಾಸಕರನ್ನು ಕಾಪಾಡುವಂತಹ ಜವಾಬ್ದಾರಿ, ಹಿಂದೆ ಮಹಾರಾಷ್ಟ್ರ ಶಾಸಕರನ್ನು ಕಾಪಾಡುವ ಜವಾಬ್ದಾರಿ, ನಮ್ಮ ರಾಜ್ಯದ ಶಾಸಕರನ್ನು ಕಾಪಾಡುವ ಜವಾಬ್ದಾರಿಯನ್ನು ಹೀಗೆ ಪಕ್ಷ ವಹಿಸಿದ್ದ ಕೆಲಸವನ್ನು ಒಬ್ಬ ಕಾರ್ಯಕರ್ತನಾಗಿ ನಿಷ್ಠೆಯಿಂದ ಮಾಡಿಕೊಂಡು ಬಂದಿದ್ದೇನೆ. ಕೆಲವರು ಸಂತೋಷಪಟ್ಟಿರಬಹುದು, ಕೆಲವರು ದುಃಖ ಪಟ್ಟಿರಬಹುದು.
ನಾನು ರೆಸಾರ್ಟ್ ನಲ್ಲಿದ್ದ ಸಂದರ್ಭದಲ್ಲಿ ನನ್ನ, ನನ್ನ ಕುಟುಂಬದವರು, ನನ್ನ ಸ್ನೇಹಿತರು, ಸಂಬಂಧಿಕರು ಮತ್ತು ಆಪ್ತರ ಮೇಲೆ ಐಟಿ-ಇಡಿ ದಾಳಿ ಆಗಿದ್ದನ್ನು ನೀವೆಲ್ಲರೂ ನೋಡಿದ್ದೀರಿ. ನ್ಯಾಯಬದ್ಧವಾಗಿ ಕಾನೂನಿಗೆ ಗೌರವ ಕೊಡುವ ಶಾಸಕ ನಾನು. ನ್ಯಾಯಾಂಗಕ್ಕೆ, ಶಾಸಕಾಂಗಕ್ಕೆ ಏನೆಲ್ಲಾ ಗೌರವಕೊಡಬೇಕೋ ಕೊಟ್ಟಿದ್ದೇನೆ ಎಂದು ಹೇಳಿದರು.
ಹಲವು ಬಾರಿ ನನಗೆ ಸಮನ್ಸ್ ಬಂದಿವೆ. ಅವರದ್ದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡ್ತಿದ್ದಾರೆ. ಆ ನೋಟೀಸ್ ಗಳಿಗೆ ನಾನು ಕಾನೂನು ಬದ್ಧವಾಗಿ ಉತ್ತರವನ್ನೂ ನೀಡಿದ್ದೇನೆ. ಆ ಬಗ್ಗೆ ನಮ್ಮ ಆಡಿಟರ್ ಕರೆಸಿ ಕೆಲವೊಂದಕ್ಕೆ ಉತ್ತರ ಕೊಟ್ಟಿದ್ದೇನೆ ಎಂದ ಅವರು ನನಗೆ ಸಮಯ ಪ್ರಜ್ಞೆ ಸಹ ಇದೆ ಎಂದರು.
ನಾನು ಬಡತನದಿಂದ ಬಂದವನು ಎಂದು ಹೇಳಲು ಇಷ್ಟಪಡುವುದಿಲ್ಲ:
ನಾನು ಬಡತನದಿಂದ ಬಂದವನು ಎಂದು ಹೇಳಲು ಇಷ್ಟಪಡುವುದಿಲ್ಲ. ನಾನು ಒಬ್ಬ ಮಧ್ಯಮ ವರ್ಗದ ಕುಟುಂಬದಿಂದ ಬಂದವನು. 85 ವರ್ಷದ ನನ್ನ ತಾಯಿಗೆ ಒಬ್ಬ ಮಗ ಸಂಸದನಾಗಿದ್ದಾನೆ, ಒಬ್ಬ ಮಗ ಶಾಸಕನಾಗಿದ್ದಾನೆ. ನಮ್ಮ ತಾಯಿ ತಮ್ಮ ಎಲ್ಲಾ ಆಸ್ತಿಯನ್ನು ನಮ್ಮ ಹೆಸರಿಗೆ ಬರೆದಿದ್ದಾರೆ. ಇಂತಹ ಆಸ್ತಿಯ ಮೇಲೆ ಬೇನಾಮಿ ಆಸ್ತಿ ಎಂದು ನ್ಯಾಯಾಲಯ ಹೇಳಿದೆ. ಇದಕ್ಕೆ ತಡೆಯಾಜ್ಞೆ ನೀಡಲಾಗಿದೆ. ಮಗ ತಾಯಿ ನಂಬದೇ, ತಾಯಿ ಮಗನನ್ನು ನಂಬದೇ ಯಾರನ್ನು ನಂಬಿ ನಡೆದುಕೊಂಡು ಹೋಗಬೇಕು.? ಆ ತಾಯಿಗೆ ಕೆಂಪೇಗೌಡ(ಪತಿ) ಇಲ್ಲ. ಆ ತಾಯಿಗೆ ಇರುವುದು ನಾವಿಬ್ಬರು ಮಕ್ಕಳು. ಆ ತಾಯಿ ನಮ್ಮನ್ನು ನಂಬದೆ ಮತ್ತಾರನ್ನು ನಂಬಬೇಕು ಎಂದು ಪ್ರಶ್ನಿಸಿದರು.
ನನ್ನ ಮನೆಯಲ್ಲಿ, ಸ್ನೇಹಿತರ ಮನೆಯಲ್ಲಿ ಸಿಕ್ಕ ಹಣ ನಮ್ಮದೇ ಎಂದು ನಾವು ತಿಳಿಸಿದ್ದೇವೆ. ಬೇರೆಯವರ ಹಣ ಎಂದು ಹೇಳಿಲ್ಲ. ಅದಕ್ಕೆ ಸಂಬಂದ ಪಟ್ಟಂತೆ ಆದಾಯ ತೆರಿಗೆ ಇಲಾಖೆಗೆ ದಾಖಲೆಗಳನ್ನೂ ಕೂಡ ನಾವು ಸಲ್ಲಿಸಿದ್ದೇವೆ. ಆದಾಯ ತೆರಿಗೆ ರಿಟರ್ನ್ಸ್ ಕೂಡ ಸಲ್ಲಿಸಿದ್ದೇನೆ. ನಾನು ತಪ್ಪು ಮಾಡಿಲ್ಲ, ಲಂಚ ತೆಗೆದುಕೊಂಡಿಲ್ಲ, ಭ್ರಷ್ಟಾಚಾರ ಮಾಡಿಲ್ಲ ಎಂದರು.
ವಿದೇಶಗಳಲ್ಲಿ ಕೂಡ ನನ್ನ ಆಸ್ತಿ ಇದೇ ಎಂದು ಹೇಳಲಾಗುತ್ತಿದೆ. ಆದರೆ ಇವೆಲ್ಲವೂ ಕಾಲ್ಪನಿಕ. ಭಾರತದೊಳಗೆ ಹೊರತುಪಡಿಸಿ ಭಾರತದಿಂದಾಚೆಗೆ ನಾನು ಯಾವ ಆಸ್ತಿಯನ್ನೂ ಹೊಂದಿಲ್ಲ. ಇದೊಂದು ಕಟ್ಟು ಕತೆ ಎಂದು ಹೇಳಿದರು.
ನಿನ್ನೆ ಹೈಕೋರ್ಟ್ ನಲ್ಲಿ ನಾವು ಸಲ್ಲಿಸಲಾಗಿದ್ದ ತಡೆ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಅದರ ಪ್ರತಿ ಕೂಡ ನನಗಿನ್ನೂ ಲಭಿಸಿಲ್ಲ. ನಿನ್ನೆ ವಿವಿಧ ಕೆಲಸಗಳಿಂದಾಗಿ ಹೊರಗಿದ್ದ ನಾನು ರಾತ್ರಿ ಸುಮಾರು 09:40ರ ವೇಳೆಗೆ ಮನೆಗೆ ಬಂದಾಗ ನಾಲ್ಕೈದು ಇಡಿ ಅಧಿಕಾರಿಗಳು ಬಂದು ನಿಮಗೆ ಸಮನ್ಸ್ ಇದೆ ಎಂದು ನೋಟೀಸ್ ಕೊಟ್ಟು ಹೋಗಿದ್ದಾರೆ. ಶುಕ್ರವಾರ ಮಧ್ಯಾಹ್ನ ಒಂದು ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಆದರೆ ನಾನು ಖಂಡಿತವಾಗಿ ಇಂದೇ ವಿಚಾರಣೆಗೆ ಹಾಜರಾಗುತ್ತೇನೆ ಎಂದರು.
ನಾನು ಯಾವುದೇ ಮಾಡಬಾರದ ಕೆಲಸ ಮಾಡಿಲ್ಲ. ಕಾನೂನು ರೀತಿಯಲ್ಲೇ ನಾನು ಹೋರಾಟ ಮಾಡಿದ್ದೇನೆ. ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುತ್ತೇನೆ. ನಾನು ಕೆಂಪೇಗೌಡರ ಮಗ. ನಾನು ಹೆದರಿ ಓಡಿ ಹೋಗುವವನಲ್ಲ. ಎಲ್ಲವನ್ನೂ ಕಾನೂನಾತ್ಮಕವಾಗಿ ಎದರಿಸುತ್ತೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ 'ಆಪರೇಷನ್ ಕಮಲ'ದ ವಿಚಾರವನ್ನು ಪ್ರಸ್ತಾಪಿಸಿದ ಡಿಕೆಶಿ, ಸದನದಲ್ಲಿ ಶ್ರೀನಿವಾಸಗೌಡರು ಆಪರೇಷನ್ ಕಮಲದ ಬಗ್ಗೆ ಪ್ರಸ್ತಾಪಿಸಿದ್ದರು. ಅವರ ಮನೆಗೆ 5 ಕೋಟಿ ರೂ. ತಂದಿಟ್ಟಿದ್ದ ವಿಚಾರವನ್ನು ಹೆಸರು ಸಮೇತ ಹೇಳಿದ್ದರು. ಆದರೂ ಬಿಜೆಪಿಯವರಿಗೆ ಯಾಕೆ ಇಡಿ ನೋಟೀಸ್ ನೀಡಿಲ್ಲ. ನನಗೆ ಮಾತ್ರ ಯಾಕೆ ನೋಟೀಸ್ ನೀಡುತ್ತಾರೆ ಎಂದು ಪ್ರಶ್ನಿಸಿದರು.
ಇಡಿ ಒಬ್ಬರಿಗೊಂದು ನ್ಯಾಯ ಮತ್ತೊಬ್ಬರಿಗೊಂದು ನ್ಯಾಯದಂತೆ ನಡೆದುಕೊಳ್ಳುತ್ತಿದೆ. ನನಗೆ, ನನ್ನ ಪಕ್ಷಕ್ಕೆ, ನನ್ನ ಕುಟುಂಬಕ್ಕೆ ಏನೇನೂ ತೇಜೋವಧೆ ಮಾಡಬೇಕೋ ಹಾಗೆಲ್ಲಾ ಮಾಡಲಾಗುತ್ತಿದೆ. ಜಾರಿ ನಿರ್ದೇಶನಾಲಯದಿಂದ ಸಮನ್ಸ್ ನೀಡಿದ್ದಾರೆ. ಅದಕ್ಕೆ ಗೌರವವಾಗಿ ಪ್ರತಿಕ್ರಿಯಿಸುತ್ತೇನೆ. ನಾನು ನಮ್ರತೆಯಿಂದಲೇ ಎಲ್ಲದಕ್ಕೂ ಉತ್ತರಿಸುತ್ತೇನೆ. ನಾನು ಖಂಡಿತ ವಿಚಾರಣೆಗೆ ಹಾಜರಾಗುತ್ತೇನೆ. ನಾನು ಕಾನೂನಿನ ಚೌಕಟ್ಟಿನಲ್ಲಿ ಹೋರಾಡುತ್ತೇನೆ ಎಂದು ಡಿಕೆಶಿ ಮತ್ತೊಮ್ಮೆ ಸ್ಪಷ್ಟ ಪಡಿಸಿದರು.
ಆದಾಯ ತೆರಿಗೆ ಇಲಾಖೆ ದಾಳಿ ಸಮಯದಲ್ಲಿ ದೆಹಲಿಯ ಫ್ಲ್ಯಾಟ್ ಹಾಗೂ ಮನೆಯಲ್ಲಿ ದೊರೆತಿರುವ 8.59 ಕೋಟಿ ರೂ. ಮೌಲ್ಯದ ಅಕ್ರಮ ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ರದ್ದು ಮಾಡುವಂತೆ ಕೋರಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಅವರ ಆಪ್ತರು ಸಲ್ಲಿಸಿದ್ದ ಅರ್ಜಿಗಳನ್ನು ರಾಜ್ಯ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ಇದರ ಬೆನ್ನಲ್ಲೆ ಶುಕ್ರವಾರ(ಆಗಸ್ಟ್ 30) ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಡಿ.ಕೆ. ಶಿವಕುಮಾರ್‌ಗೆ ಸಮನ್ಸ್ ಜಾರಿ ಮಾಡಿದ್ದರು.