ಬೆಂಗಳೂರು: ರಾಜ್ಯದ 12 ಕಿರು ಬಂದರುಗಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಒತ್ತು ನೀಡಿ ತನ್ಮೂಲಕ ಉದ್ಯೋಗ ಸೃಜನೆಯನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೂಚಿಸಿದರು. 


COMMERCIAL BREAK
SCROLL TO CONTINUE READING

ಇಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಚಟುವಟಿಕೆಗಳ ಕುರಿತ ಸಭೆಯಲ್ಲಿ ಅವರು ಮಾತನಾಡುತ್ತಿದ್ದ ಅವರು, ಕಾರವಾರ ಮತ್ತು ಮಂಗಳೂರು ಬಂದರುಗಳನ್ನು ಹೊರತುಪಡಿಸಿದರೆ ಉಳಿದ ಕಿರು ಬಂದರುಗಳಲ್ಲಿ ಹೆಚ್ಚಿನ ವಾಣಿಜ್ಯ ಚಟುವಟಿಕೆಗಳು ನಡೆಯಬೇಕು. ಮೀನುಗಾರಿಕೆ ಸೇರಿದಂತೆ ಇತರೆ ವಾಣಿಜ್ಯ ಚಟುವಟಿಕೆಗಳಿಗೂ ಆದ್ಯತೆ ನೀಡಿ ರಾಜ್ಯದ ಎಲ್ಲ ಬಂದರುಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. ಮ್ಯಾರಿಟೈಮ್ ಮಂಡಳಿಗೆ ಶೀಘ್ರದಲ್ಲಿಯೇ ಅಧಿಕಾರಿಯನ್ನು  ನೇಮಿಸಲಾಗುವುದು ಎಂದು ಮುಖ್ಯಮಂತ್ರಿಗಳು ಇದೇ ವೇಳೆ ಭರವಸೆಯಿತ್ತರು. 


ಕಾರವಾರ ಬಂದರಿನ 2 ನೇ ಹಂತದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದ್ದು, ಬಂದರಿನ ಉತ್ತರಕ್ಕೆ 1258 ಮೀ.ಉದ್ದದ ಬರ್ರ್ತ್ ನ್ನು ವಿಸ್ತರಿಸಲು ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿದ್ದು, ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. 


ಸಾಗರಮಾಲಾ ಕೋಸ್ಟಲ್  ಬರ್ತ್ ಯೋಜನೆಯಡಿ ಪ್ರಸಕ್ತ ಸಾಲಿಗೆ 54.10 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದ್ದು, ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿದೆ ಹಾಗೂ ಕಾರವಾರ ಕೋಸ್ಟಲ್  ಬರ್ತ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಮತ್ತು ಮಂಗಳೂರು ಹಳೇ ಬಂದರಿನಲ್ಲಿ ಕೋಸ್ಟಲ್  ಬರ್ತ್ ನಿರ್ಮಾಣಕ್ಕೆ ತಾಂತ್ರಿಕ ಮಂಜೂರಾತಿ ಕಾರ್ಯ ಪ್ರಗತಿಯಲ್ಲಿದೆ ಎಂದು ಸಭೆ ಮಾಹಿತಿ ಒದಗಿಸಲಾಯಿತು.


ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ, ಆರ್ಥಿಕ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಲೋಕೋಪಯೋಗಿ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಉಪಸ್ಥಿತರಿದ್ದರು.