ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ಡಿ‌.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಅವರನ್ನೂ ವಿಚಾರಣೆ ನಡೆಸಲಿದ್ದಾರೆ. 


COMMERCIAL BREAK
SCROLL TO CONTINUE READING

ಈಗಾಗಲೇ 7 ದಿನ ಡಿ.ಕೆ. ಶಿವಕುಮಾರ್ ಅವರನ್ನು ವಿಚಾರಣೆ ನಡೆಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಪುತ್ರಿ ಐಶ್ವರ್ಯ ಅವರಿಗೆ ಸೆಪ್ಟೆಂಬರ್ 12ನೇ ತಾರೀಖು ದೆಹಲಿಯ ಜಾರಿ‌ ನಿರ್ದೇಶನಾಲಯದ ಕಚೇರಿಗೆ ವಿಚಾರಣೆಗಾಗಿ ಆಗಮಿಸಬೇಕೆಂದು ಸಮನ್ಸ್ ನೀಡಿದ್ದರು. ಈ ಸಮನ್ಸ್ ಅನ್ವಯ ಗುರುವಾರ ಐಶ್ವರ್ಯ ವಿಚಾರಣೆಗೆ ಹಾಜರಾಗಲಿದ್ದಾರೆ.


ಐಶ್ವರ್ಯ ಜಾರಿ‌ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ನೀಡುವ ಹೇಳಿಕೆಗಳು ಡಿ‌.ಕೆ. ಶಿವಕುಮಾರ್ ಅವರ ಭವಿಷ್ಯವನ್ನು ನಿರ್ಧರಿಸುತ್ತವೆ. ಡಿ.ಕೆ. ಶಿವಕುಮಾರ್, ಐಶ್ವರ್ಯ ಹೆಸರಿನಲ್ಲಿ ಬೇನಾಮಿ‌ ಆಸ್ತಿ ಮಾಡಿದ್ದಾರೆ. ವಿದೇಶಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂಬುದು ಇಡಿ ಅಧಿಕಾರಿಗಳ ದಟ್ಟ ಅನುಮಾನ. ಆದರೆ ಡಿಕೆಶಿ ಈ ಬಗ್ಗೆ ಬಾಯಿ ಬಿಡುತ್ತಿಲ್ಲ. ಅದರಿಂದಾಗಿ ಈಗ ಇಡಿ ಅಧಿಕಾರಿಗಳು ಡಿಕೆಶಿ ಪುತ್ರಿ ಐಶ್ವರ್ಯ ಅವರಿಂದ ಬಾಯಿ ಬಿಡಿಸಲು ಪ್ರಯತ್ನಿಸಲಿದ್ದಾರೆ. 


ಡಿ.ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಮೊಮ್ಮಗಳಾದ ಐಶ್ವರ್ಯಗೆ ನೀಡಿರುವ ಆಸ್ತಿ ಮತ್ತು ಹಣವೇ ಈಗ ಅಪಾಯವಾಗಿ ಪರಿಣಮಿಸಿದೆ.  ಗೌರಮ್ಮ ಅವರು 2001ಲ್ಲಿ ಐಶ್ವರ್ಯಗೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ 3 ಎಕರೆ ಜಮೀನನ್ನು ಗಿಫ್ಟ್​ ಡೀಡ್ ಮಾಡಿಕೊಟ್ಟಿದ್ದರು. 2002ರಲ್ಲಿ ಹೊಸಕೆರೆಹಳ್ಳಿಯಲ್ಲಿ 3 ಎಕರೆ ಜಮೀನಿಗೆ ಗಿಫ್ಟ್ ಡೀಡ್ ಮಾಡಿಕೊಟ್ಟಿದ್ದರು. ಇದಲ್ಲದೆ 2018ರಲ್ಲಿ ತಮ್ಮ ಅಕೌಂಟ್​ನಿಂದ ಐಶ್ವರ್ಯ ಖಾತೆಗೆ 3 ಕೋಟಿ ರೂಪಾಯಿ ಹಾಕಿದ್ದರು.   ಇವೆಲ್ಲವನ್ನೂ ಅಕ್ರಮ, ಬೇನಾಮಿ ಎಂದು ಪರಿಗಣಿಸಿರುವ ಇಡಿ ಅಧಿಕಾರಿಗಳು ಈ ಸಂಬಂಧ ಐಶ್ವರ್ಯ ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ.


ಐಶ್ವರ್ಯ ಅಕೌಂಟಿಗೆ ಸಿಂಗಲ್ ಟ್ರ್ಯಾಜಕ್ಷನ್ ಮೂಲಕ 193 ಕೋಟಿ ಕ್ರೆಡಿಟ್ ಆಗಿದೆ. ಇದಲ್ಲದೆ ಐಶ್ವರ್ಯ ಅಕೌಂಟಿನಿಂದ ಕೆಫೆ ಕಾಫಿ ಡೇಗೆ ಮತ್ತು ಕೆಫೆ ಕಾಫಿ ಡೇಯಿಂದ ಐಶ್ವರ್ಯ ಅಕೌಂಟಿಗೆ 20 ಕೋಟಿ ರೂಪಾಯಿ ವರ್ಗವಾಗಿದೆ. ಇದಲ್ಲದೆ ಶೋಭಾ ಡೆವೆಲಪರ್ಸ್, ಸೋಲ್ ಅಂಡ್ ಸ್ಪೇಸ್, ನ್ಯಾಷನಲ್ ಗ್ಲೋಬಲ್ ಕಾಲೇಜು ಮತ್ತಿತರ ಕಂಪನಿಗಳಲ್ಲೂ ಐಶ್ವರ್ಯ ಹೆಸರಿನಲ್ಲಿ ಬಂಡವಾಳ ಹೂಡಿಕೆ ಮಾಡಲಾಗಿದೆ ಎಂದು ವಿಚಾರಣೆ ನಡೆಸಲಾಗುತ್ತದೆ.