ಬೆಂಗಳೂರು: ಸಹಕಾರ ಇಲಾಖೆಗಳಲ್ಲಿ ಹಣ ದುರುಪಯೋಗಗಳಂತಹ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇಂಥವುಗಳನ್ನು ಸಹಿಸಲಾಗದು. ಸಾರ್ವಜನಿಕರ ಹಣ ಯಾವುದೇ ಕಾರಣಕ್ಕೂ ದುರುಪಯೋಗವಾಗಬಾರದು. ಇಂಥಹ ಹಗರಣ ಮಾಡುವವರ ಮೇಲೆ ಮುಲಾಜಿಲ್ಲದೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ (ST Somashekhar) ಸೂಚಿಸಿದರು.


COMMERCIAL BREAK
SCROLL TO CONTINUE READING

ವಿಕಾಸಸೌಧ ಸಚಿವರ ಕಚೇರಿಯಲ್ಲಿ ಸಹಕಾರ ಇಲಾಖೆಯ ಆಡಿಟ್ ಸಭೆ ನಡೆಸಿ, ಇಲಾಖೆಯಲ್ಲಿನ ಹಣದುರುಪಯೋಗ ಆಗುತ್ತಿರುವ ಕುರಿತು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಅಪೆಕ್ಸ್ ಬ್ಯಾಂಕ್, ಕೆಎಂಎಫ್, ಮಾರ್ಕೆಟಿಂಗ್ ಫೆಡರೇಷನ್ ಗಳ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗಳಿಗೆ ಐಎಎಸ್ ಅಧಿಕಾರಿಗಳನ್ನೇ ನಿಯೋಜಿಸಬೇಕು. ಆಗ ಆಡಳಿತ ಚುರುಕುಗೊಂಡು ಬಿಗಿ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಈ ಹುದ್ದೆಯಲ್ಲಿಯೇ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು.  ಜೊತೆಗೆ ಅವರಿಗೆ ಆ ಕ್ಷೇತ್ರದ ಮೇಲೆ ಆಸಕ್ತಿಯೂ ಇರಬೇಕು. ಅಂಥವರನ್ನೇ ಆಯ್ಕೆ ಮಾಡಿಕೊಳ್ಳುವುದರ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಇತ್ತೀಚಿನ ಹಗರಣಗಳು, ಸಾರ್ವಜನಿಕ ಹಣ ದುರುಪಯೋಗಗಳಂತಹ ಪ್ರಕರಣಗಳನ್ನು ಗಮನಿಸಿದಾಗ ಇಂತಹ ಕಠಿಣ ನಿಯಮ ಜಾರಿಗೆ ತರುವುದು ಅನಿವಾರ್ಯ ಎಂದು ಸೋಮಶೇಖರ್ ಹೇಳಿದರು.


ತಪ್ಪು ಮಾಡಿದವರೇ ತನಿಖೆ ನಡೆಸುವುದು ಬೇಡ: 
ದುರುಪಯೋಗಪಡಿಸಿಕೊಂಡ ಪ್ರಕರಣದ ತನಿಖೆ, ವಿಚಾರಣೆಯನ್ನು ಸೊಸೈಟಿ ಬೋರ್ಡ್ ಗೆ ಕೊಡುವಂತಾಗಬಾರದರು. ತಪ್ಪು ಮಾಡಿದವರ ಬಳಿಯೇ ತನಿಖೆಯ ಅಧಿಕಾರಿ ಕೊಟ್ಟರೆ ಹಗರಣ ಹೊರಬೀಳುವುದಾದರೂ ಹೇಗೆ? ತಪ್ಪಿತಸ್ಥರಿಗೆ ಶಿಕ್ಷೆಯಾಗುವುದಾದರೂ ಹೇಗೆ?  ಆ ನಿಟ್ಟಿನಲ್ಲಿ ಕಾನೂನು-ಕಾಯ್ದೆ ಬಲಗೊಳಿಸಲು ಬೇಕಾದ ಅಂಶಗಳೊಂದಿಗೆ ವರದಿ ಸಿದ್ಧಪಡಿಸಿ ನನ್ನ ಬಳಿ ತರುವುದು. ನಾನು ಆ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮವಹಿಸುತ್ತೇನೆ ಎಂದು ಸಚಿವರು ಇದೇ ವೇಳೆ ಸೂಚನೆ ನೀಡಿದರು.


ಹಳೇ ಪದ್ಧತಿಯೇ ಅನುಷ್ಠಾನಕ್ಕೆ ಬರಲಿ
ಇಂದು ನಾನಿರುತ್ತೇನೆ, ನಾಳೆ ಬೇರೆಯವರು ಬರುತ್ತಾರೆ. ಆದರೆ, ನಾವು ಇಂದು ಯಾವ ವ್ಯವಸ್ಥೆಯನ್ನು ತರುತ್ತೇವೆಯೋ ಅದು ಮುಂದೆಯೂ ಮುಂದುವರಿದು ಸಹಕಾರ ತತ್ವಗಳನ್ನು ಶಾಶ್ವತವಾಗಿ ಉಳಿಸಿಕೊಂಡು ಹೋಗುವಂತಿರಬೇಕು. ಆ ನಿಟ್ಟಿನಲ್ಲಿ ಹಳೇ ಪದ್ಧತಿಯಲ್ಲಿ ಇದ್ದಂತಹ ಅಧಿಕಾರಯುತ ಕಾಯ್ದೆಗಳನ್ನು ಪುನಃ ಜಾರಿಗೆ ತರುವ ಮೂಲಕ ಯಾರೂ ತಪ್ಪು ಮಾಡಲು ಅವಕಾಶ ಸಿಗದಂತಾಗಬೇಕು. ಒಮ್ಮೆ ತಪ್ಪು ಮಾಡಿದರೂ ಕ್ರಮ ತೆಗೆದುಕೊಂಡು, ಶಿಕ್ಷೆ ಅನುಭವಿಸುವಂತಾಗಬೇಕು. ಆ ನಿಟ್ಟಿನಲ್ಲಿ ಬೇಕಾದ ತಿದ್ದುಪಡಿಯನ್ನು ಮಾಡೋಣ ಎಂದು ಸಚಿವರು ತಿಳಿಸಿದರು.


ರಾಷ್ಟ್ರೀಯ ಸಮ್ಮೇಳನದ ಅಗತ್ಯವಿದೆ
ಸಹಕಾರ ಇಲಾಖೆಯ ಈಗಿನ ಕಾಯ್ದೆಗಳನ್ನು ಮತ್ತಷ್ಟು ಬಿಗಿಗೊಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲ ರಾಜ್ಯಗಳ ಸಹಕಾರ ಇಲಾಖೆಗಳ ರಾಷ್ಟ್ರೀಯ ಕಾರ್ಯಾಗಾರ ಕರೆದು ಎಲ್ಲರ ಸಮಸ್ಯೆಗಳು, ಅಲ್ಲಿರುವ ಉತ್ತಮ ಅಂಶಗಳನ್ನೆಲ್ಲ ಪಟ್ಟಿಮಾಡಬೇಕಿದೆ. ಇಲ್ಲಿ ಒಮ್ಮತದ ನಿರ್ಧಾರಕ್ಕೆ ಬಂದು ಕೇಂದ್ರಕ್ಕೆ ವರದಿ ಸಲ್ಲಿಸಬೇಕಿದೆ. ಹಾಗಾಗಿ ಶೀಘ್ರವಾಗಿ ಕಾರ್ಯಾಗಾರ ಏರ್ಪಡಿಸಬೇಕಿದ್ದು, ಅಲ್ಲಿ ಯಾವ ಯಾವ ವಿಷಯಗಳು ಚರ್ಚೆಯಾಗಬೇಕು ಎಂಬುದನ್ನು ಪಟ್ಟಿ ಮಾಡಿ ಗಮನಕ್ಕೆ ತನ್ನಿ ಎಂದು ಉನ್ನತ ಅಧಿಕಾರಿಗಳಿಗೆ ಸಚಿವರು ನಿರ್ದೇಶಿಸಿದರು.