ಬೆಡ್ ರೂಂನಲ್ಲೇ ಭಾರೀ ಬೆಂಕಿ, ಅಪಾಯದಿಂದ ಪಾರಾದ ಸಚಿವ ಈಶ್ವರಪ್ಪ ದಂಪತಿ
ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣ ಮಾತ್ರದಲ್ಲಿ ಸಂಪೂರ್ಣ ರೂಮ್ ಸುಟ್ಟು ಭಸ್ಮವಾಗಿದೆ.
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa)ರವರ ನಿವಾಸದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು ಅದೃಷ್ಟವಶಾತ್ ಈಶ್ವರಪ್ಪ ದಂಪತಿ ಅಪಾಯದಿಂದ ಪಾರಾಗಿದ್ದಾರೆ.
ಸಚಿವರ ಕೋಣೆಯಲ್ಲಿ ಎಸಿಯಿಂದ ಕಾಣಿಸಿಕೊಂಡ ಬೆಂಕಿ:
ಸಚಿವ ಕೆ.ಎಸ್. ಈಶ್ವರಪ್ಪ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಮಲಗಲು ತಮ್ಮ ಬೆಡ್ ರೂಂಗೆ ತೆರಳಿದ್ದಾರೆ. ತಾವು ಮಲಗುವ ಮುನ್ನ ಈಶ್ವರಪ್ಪ ಎಸಿ ಸ್ವಿಚ್ ಆನ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ದಂಪತಿಗಳು ಕೋಣೆಯಿಂದ ತಕ್ಷಣವೇ ಹೊರಬಂದಿದ್ದಾರೆ.
ಈಶ್ವರಪ್ಪ ಕೂಡಲೇ ತಮ್ಮ ಅಳಿಯನಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಅವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಕ್ಷಣಾರ್ಧದಲ್ಲಿ ಸಂಪೂರ್ಣ ರೂಮ್ ಆವರಿಸಿದ ಬೆಂಕಿಯಿಂದಾಗಿ ಇಡೀ ಬಂಗಲೆಯ ವಿದ್ಯುತ್ ವೈರಿಗಂಗಳು ಮತ್ತು ವುಡ್ ವರ್ಕ್ ನ ಹಲವು ಸಾಮಾಗ್ರಿಗಳು ಭಾಗಶಃ ಸುಟ್ಟು ಕರಕಲಾಗಿವೆ.
ಘಟನೆಯಲ್ಲಿ ಒಂದು ಕೊಠಡಿ ಸಂಪೂರ್ಣ ಸುಟ್ಟು ಹೋಗಿದ್ದು, ಬಟ್ಟೆ, ಬೆಡ್, ಕರ್ಟನ್ ಸೇರಿದಂತೆ ಎಲ್ಲವೂ ಸುಟ್ಟು ಕರಕಲಾಗಿವೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಈಶ್ವರಪ್ಪ ದಂಪತಿ ಹೊರಗೆ ಬಂದಿದ್ದರಿಂದ ಯಾರಿಗೂ ಏನೂ ಅಪಾಯವಾಗಿಲ್ಲ.