ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದೆ ಕೊಡಗು; ರಕ್ಷಣೆಗೆ ಧಾವಿಸಿದ ಸೇನೆ- ಸಂಪೂರ್ಣ ವರದಿ
ವರುಣನ ರುದ್ರ ನರ್ತನಕ್ಕೆ ನಲುಗಿದ ಜನ, ಜೀವ ಉಳಿಸಿಕೊಳ್ಳಲು ಗ್ರಾಮವನ್ನೇ ಬಿಟ್ಟು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
ಬೆಂಗಳೂರು/ಕೊಡಗು: ವರುಣನ ರುದ್ರ ನರ್ತನಕ್ಕೆ ರಾಜ್ಯದ ಕೊಡಗು ಜಿಲ್ಲೆ ತತ್ತರಿಸಿಹೋಗಿದೆ. ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಭಾರೀ ಮಳೆಗೆ ಕೊಡಗು ಸಂಪೂರ್ಣ ಕೊಚ್ಚಿ ಹೋಗಿದ್ದು, ಸಂಕಷ್ಟದಲ್ಲಿರುವ ಜನರ ನೆರವಿಗೆ ಸೇನಾ ತಂಡ ಧಾವಿಸಿದೆ.
ಪ್ರವಾಹದಿಂದ 6 ಮಂದಿ ಸಾವು
ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿದ್ದು, ಇನ್ನೂ ಹಲವರ ಪತ್ತೆಯಾಗಿಲ್ಲ. ಕೊಡಗಿನ ಮಕ್ಕಂದೂರು, ಮುಕೋಡ್ಲು, ದೇವಸ್ತೂರು, ಕಾಲೂರು, ಮೇಘತಾಳು ಗ್ರಾಮಗಳ ನಡುವಿನ ಕೋಟೆ, ಬೆಟ್ಟ ಕುಸಿಯುವ ಭೀತಿ ಹೆಚ್ಚಿದೆ. ಹಲವೆಡೆ ಗುಡ್ಡಗಳು ಕುಸಿದ ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿದೆ. ನೋಡನೋಡುತ್ತಿದ್ದಂತೆಯೇ ಮನೆಗಳು ಭೂಕುಸಿತದಿಂದಾಗಿ ಹಾನಿಗೊಳಗಾಗುತ್ತಿವೆ. ವರುಣನ ರುದ್ರ ನರ್ತನಕ್ಕೆ ನಲುಗಿದ ಜನ, ಜೀವ ಉಳಿಸಿಕೊಳ್ಳಲು ಗ್ರಾಮವನ್ನೇ ಬಿಟ್ಟು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
845 ಮನೆಗಳ ನೆಲಸಮ
ಈಗಾಗಲೇ ಕೊಡಗು ಜಿಲ್ಲಾದ್ಯಂತ ಪ್ರವಾಹದಿಂದಾಗಿ 98 ಕಿಲೋ ಮೀಟರ್ ರಸ್ತೆ ಸಂಪೂರ್ಣ ಹಾಳಾಗಿದೆ. ಒಟ್ಟು 845 ಮನೆಗಳು ನೆಲಸಮವಾಗಿದ್ದು, 243 ಸರಕಾರಿ ಕಟ್ಟಡಗಳಿಗೆ ಹಾನಿಯಾಗಿದೆ. ಅಲ್ಲದೆ, ನೀರಿನ ರಭಸಕ್ಕೆ 58 ಸೇತುವೆಗಳು ಹಾನಿಯಾಗಿದ್ದು, 3006 ವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮರ್ ಹಾನಿಯಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.
ನಿರಾಶ್ರಿತ ಕೇಂದ್ರ ಮತ್ತು ಗಂಜಿ ಕೇಂದ್ರ ಸ್ಥಾಪನೆ
ಅತಿವೃಷ್ಟಿಯಿಂದಾಗಿ ಮನೆಗಳನ್ನೂ ಕಳೆದುಕೊಂಡು ನಿರಾಶ್ರಿತರಾಗಿರುವ ಜನತೆಗೆ ಜಿಲ್ಲಾಡಳಿತ 17 ನಿರಾಶ್ರಿತ ಕೇಂದ್ರಗಳನ್ನು ಸ್ಥಾಪಿಸಿದೆ. ಇದುವರೆಗೂ 576 ಮಂದಿ ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಅಗತ್ಯವಿರುವ ಕಡೆ ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಕಾಟಿಕೇರಿಯಲ್ಲಿ ಸಿಲುಕಿದ್ದ 200, ಕಾಂಡನಕೊಲ್ಲಿಯಲ್ಲಿ 80 ಜನರನ್ನು ರಕ್ಷಿಸಲಾಗಿದೆ.
ಜನರ ರಕ್ಷಣೆಗೆ ಸೇನಾ ತಂಡಗಳ ನಿಯೋಜನೆ
ಸಂತ್ರಸ್ತರ ನೆರವಿಗಾಗಿ ರಕ್ಷಣಾ ತಂಡ ಧಾವಿಸಿದ್ದು, 30 ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ತಂಡಗಳು, 12 ಮುಳುಗು ತಜ್ಞರು, 200 ಅಗ್ನಿಶಾಮಕ ಸಿಬ್ಬಂದಿ ಮತ್ತು 50ಕ್ಕೂ ಹೆಚ್ಚು ಬೋಟ್ ಗಳನ್ನು ನಿಯೋಜಿಸಲಾಗಿದೆ. ಈಗಾಗಲೇ ರಕ್ಷಣಾ ಕಾರ್ಯಾಚರಣೆಗೆ ವಾಯುಪಡೆಯ ಹೆಲಿಕಾಪ್ಟರ್ಗಳನ್ನೂ ಕಳುಹಿಸಲಾಗಿದ್ದರೂ, ಹವಾಮಾನ ವೈಪರೀತ್ಯದಿಂದ ಕಾರ್ಯಾಚರಣೆಗೆ ಸಾಧ್ಯವಾಗದೆ ಮೈಸೂರಿಗೆ ಹಿಂದಿರುಗಿವೆ. ನಾಳೆ ಬೆಳಿಗ್ಗೆಯಿಂದ ಹೆಲಿಕ್ಯಾಪ್ಟರ್ ರಕ್ಷಣಾ ಕಾರ್ಯಾಚರಣೆ ನಡೆಯಲಿದೆ. ರಾಜ್ಯದ ವಿವಿಧೆಡೆಯಿಂದ ವೈದ್ಯರ ತಂಡವೂ ಧಾವಿಸಲಿದೆ.
ಅಧಿಕಾರಿಗಳೊಂದಿಗೆ ಸಚಿವ ಆರ್.ವಿ.ದೇಶಪಾಂಡೆ ಸಭೆ
ಕೊಡಗಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ನೊಂದವರಿಗೆ ಸಹಾಯ ಮಾಡಲು ಸಚಿವರಾದ ಆರ್.ವಿ.ದೇಶಪಾಂಡೆ, ಎನ್ ಮಹೇಶ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಂತರ ಮಾತನಾಡಿದ ಅವರು, ಈಗಾಗಲೇ 70 ಯೋಧರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ರಕ್ಷಣಾ ಕಾರ್ಯಕ್ಕಾಗಿ ಕಾರಾವಾರದಿಂದ ನೌಕಾಪಡೆ ಮತ್ತು ಮಂಗಳೂರಿನಿಂದ 80 ಯೋಧರು ಆಗಮಿಸುತ್ತಿದ್ದಾರೆ. ಮೈಸೂರು, ಹಾಸನದಿಂದ ಕಂದಾಯ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಮೈಸೂರಿನಿಂದ ಸೀಮೆಎಣ್ಣೆ ಪೂರೈಕೆಗೆ ಸೂಚನೆ ನೀಡಲಾಗಿದೆ. ತ್ವರಿತವಾಗಿ ರಸ್ತೆಗಳ ತೆರವು ಕಾರ್ಯವನ್ನ ಮಾಡಲು ಆದೇಶಿಸಲಾಗಿದೆ ಎಂದು ಹೇಳಿದರು.
ಸಂತ್ರಸ್ತರಿಗೆ ನೆರವಾಗುವಂತೆ ನಟರಾದ ದರ್ಶನ್, ಸುದೀಪ್ ಮನವಿ
ಕೇರಳದಲ್ಲಿ ವರುಣನ ರುದ್ರ ನರ್ತನ ಮುಂದುವರೆದಿರುವ ಹಿನ್ನೆಲೆಯಲ್ಲಿಯೇ ಕರ್ನಾಟಕದ ಕೊಡಗು ವರುಣನ ಅವಕೃಪೆಯಿಂದಾಗಿ ಸಂಪೂರ್ಣ ಜಲಾವೃತವಾಗಿದೆ. ಈ ಹಿನ್ನೆಲೆಯಲ್ಲಿ ಹಲವರು ಸಂಕಷ್ಟದಲ್ಲಿ ಸಿಲುಕಿದ್ದು, ಜನರ ನೆರವಿಗೆ ಧಾವಿಸುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ಕರೆ ನೀಡಿದ್ದಾರೆ.
16 ರೈಲ್ವೇ ಸಿಬ್ಬಂದಿಯ ರಕ್ಷಣೆ
ಕೊಡಗಿನ ಯಡಕುಮರಿಯಲ್ಲಿ ಆಗಸ್ಟ್ 14ರಿಂದ ಸಿಲುಕಿದ್ದ 16 ರೈಲ್ವೆ ಸಿಬ್ಬಂದಿಯನ್ನು ಶುಕ್ರವಾರ ಮಧ್ಯಾಹ್ನ ರಕ್ಷಿಸಲಾಗಿದೆ.
ಸಹಾಯವಾಣಿ ಆರಂಭ
ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗೆ, ನೆರವಿಗಾಗಿ ಸಹಾಯವಾಣಿ ಆರಂಭಿಸಲಾಗಿದೆ. ಈ ಬಗ್ಗೆ ಐಪಿಎಸ್ ಅಧಿಕಾರಿ ಡಿ.ರೂಪಾ ಟ್ವೀಟ್ ಮಾಡಿದ್ದಾರೆ. ಸಹಾಯ ಬಯಸುವ ಯಾರೇ ಆದರೂ ಈ ಸಹಾಯವಾಣಿಯನ್ನು ಸಂಪರ್ಕಿಸಬಹುದು.
ಏತನ್ಮಧ್ಯೆ, ಭಾರಿ ಮಳೆಯಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ತಲೆದೋರಿರುವ ಪ್ರವಾಹ ಹಾಗೂ ಮಣ್ಣಿನ ಕುಸಿತದಲ್ಲಿ ಸಿಲುಕಿಕೊಂಡ ಜನರ ರಕ್ಷಣೆ ಮತ್ತು ಇತರ ಪರಿಹಾರ ಕಾರ್ಯಾಚರಣೆಗಳ ಕುರಿತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯ ಕಾರ್ಯದರ್ಶಿ ಟಿ..ಎಂ.ವಿಜಯಭಾಸ್ಕರ್ ಅವರಿಂದ ಮಾಹಿತಿ ಪಡೆದಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ ನೀಡಿದ್ದಾರೆ.