ಮಂಡ್ಯ: ಮಂಡ್ಯ ಕೆ.ಆರ್.ಎಸ್. ಜಲಾಶಯದಿಂದ ಭಾರೀ ಪ್ರಮಾಣದ ನೀರು ಹೊರಬಿಟ್ಟ ಹಿನ್ನೆಲೆಯಲ್ಲಿ ಕಾವೇರಿ ನದಿ ಅಪಾಯ ಪ್ರಮಾಣವನ್ನೂ ಮೀರಿ ಹರಿಯುತ್ತಿದ್ದು, ಜಿಲ್ಲೆಯಾದ್ಯಂತ ಪ್ರವಾಹ ಭೀತಿ ಎದುರಾಗಿದೆ. 


COMMERCIAL BREAK
SCROLL TO CONTINUE READING

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಳಿಯಿರುವ ನಿಮಿಷಾಂಬ ದೇವಾಲಯದ ಸನ್ನಿಧಿವರೆಗೂ ಕಾವೇರಿ ನೀರಿನ ಪ್ರವಾಹ ಉಂಟಾಗಿದೆ. ದೇವಾಲಯದ ಪ್ರಾಂಗಣ ಸಂಪೂರ್ಣ ಜಲಾವೃತವಾಗಿದ್ದು, ಸಾಯಿಮಂದಿರ ಸೇರಿ ಸಮೀಪದ ಬಹುತೇಕ ಮನೆಗಳು ಜಲಾವೃತವಾಗಿವೆ. 


ಇನ್ನೂ, ಕಾವೇರಿ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಪಶ್ಚಿಮವಾಹಿನಿಯಲ್ಲಿ ನಡೆಯುತ್ತಿದ್ದ ಪಿಂಡ ಪ್ರದಾನ ಕಾರ್ಯಗಳಿಗೂ ಬ್ರೇಕ್ ಬಿದ್ದಿದೆ. ದೇವಾಲಯದ ಬಾಗಿಲ ಬಳಿ ಬ್ಯಾರಿಕೇಡ್ ಹಾಕಿ ನದಿಗೆ ಇಳಿಯದಂತೆ ಭಕ್ತರಿಗೆ ನಿಷೇಧ ಹೇರಲಾಗಿದೆ. ಇನ್ನೂ ಪ್ರಸಿದ್ಧ ಪ್ರವಾಸಿ ತಾಣವಾದ ರಂಗನತಿಟ್ಟೂ ಸಹ ಸಂಪೂರ್ಣ ಜಲಾವೃತವಾಗಿದ್ದು, ನೆಲಮಟ್ಟದಿಂದ 4 ಅಡಿ ಎತ್ತರದವರೆಗೆ ನೀರು ಆವೃತವಾಗಿದೆ. ದೋಣಿ ವಿಹಾರದ ಟಿಕೆಟ್ ಕೌಂಟರ್, ವಾಯು ವಿಹಾರ ಮಾರ್ಗಗಳು ಸಂಪೂರ್ಣ ಜಲಾವೃತವಾಗಿವೆ. 


ಈಗಾಗಲೇ ಕೃಷ್ಣರಾಜಸಾಗರ ಜಲಾಶಯದಿಂದ 1.50ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿರುವ ಹಿನ್ನೆಲೆಯಲ್ಲಿ ಅಪಾಯದ ಪ್ರಮಾಣವನ್ನೂ ಮೀರಿ ನದಿಯಲ್ಲಿ ನೀರು ಹರಿಯುತ್ತಿದೆ. ಅಲ್ಲದೆ, ಜಲಾಶಯದ ಭದ್ರತಾ ದೃಷ್ಟಿಯಿಂದ ಮತ್ತಷ್ಟು ಪ್ರಮಾಣದ ನೀರನ್ನು ಹೊರಹಾಕುವ ಸಾದ್ಯತೆ ಇರುವ ಹಿನ್ನೆಲೆಯಲ್ಲಿ ಸಮೀಪದ ಪ್ರದೇಶಗಳ, ಊರುಗಳ ಜನರನ್ನು ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಜಿಲ್ಲಾಡಳಿತ ಕರ್ಮ ಕೈಗೊಂಡಿದೆ.