ಬೆಂಗಳೂರು: ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಇಂದೇ ಪೂರ್ಣಗೊಳಿಸಲಾಗುವುದು ಎಂದು ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ವಿಧಾನಸೌಧಕ್ಕೆ ಹೊರಡುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸ್ಪೀಕರ್ ಕೆ. ಆರ್. ರಮೇಶ್ ಕುಮಾರ್, ವಿಶ್ವಾಸಮತ ಯಾಚನೆ ನಿರ್ಣಯ ಚರ್ಚೆ ಸಭೆಯಲ್ಲಿ ಮಂದನೆಯಾಗಿದ್ದೇ ಗುರುವಾರ. ಅಂದು ಇಡೀ ದಿನ ಪಾಯಿಂಟ್ ಆಫ್ ಆರ್ಡರ್ ಪ್ರಕಾರವೇ ನಡೆಯಿತು. ರಾಜೀನಾಮೆ ನೀಡಿರುವ ಶಾಸಕರನ್ನು ಸದನದಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ ಮಧ್ಯಂತರ ತೀರ್ಪು ನೀಡಿದೆ. ಆದರೆ ಶೆಡ್ಯೂಲ್ 10 ರ ಪ್ರಕಾರ ಸದನದಲ್ಲಿ ಪಾಲ್ಗೊಳ್ಳಲು ಸೂಚಿಸಬಹುದು ಅಂತ ಇದೇ. ಈ ಗೊಂದಲದ ಬಗ್ಗೆ ನಾನು ಅಡ್ವೋಕೇಟ್ ಜನರಲ್ ಸಲಹೆ ಪಡೆದುಕೊಂಡಿದ್ದೇನೆ. ನಾವು ಕಾನೂನಿಗೆ ಗೌರವ ನೀಡಬೇಕು, ಕಾನೂನಿನ ರಕ್ಷಣೆ ಮಾಡಬೇಕು ಎಂದು ಪ್ರತಿಕ್ರಿಯಿಸಿದರು.


ಈ ಸಂದರ್ಭದಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಇಂದೇ ಪೂರ್ಣಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದ ಸ್ಪೀಕರ್, ಸದನದಲ್ಲಿ ವಿಶ್ವಾಸಮತ ಚರ್ಚೆ ಕೇವಲ 2 ದಿನ ನಡೆದಿದ್ದು, ಇದೇನು ವರ್ಷಗಟ್ಟಲೆಯಿಂದ ನಡೆಯುತ್ತಿರುವ ಚರ್ಚೆಯಲ್ಲ. ಆದರೂ ಬಹಳ ಜನರಿಗೆ ಸದನದಲ್ಲಿ ನಡೆಯುತ್ತಿರುವ ಚರ್ಚೆ ಬಗ್ಗೆ ತಪ್ಪು ಕಲ್ಪನೆ ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಕಾಂಗ್ರೆಸ್-ಜೆಡಿಎಸ್ ನ ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಗುರುವಾರವೇ ವಿಶ್ವಾಸ ಮತಯಾಚನೆಗೆ ಸಮಯ ನಿಗದಿಯಾಗಿದ್ದರೂ ಕೂಡ ಚರ್ಚೆಗೆ ಅವಕಾಶ ಕೇಳಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇನ್ನೂ ವಿಶ್ವಾಸಮತ ಯಾಚನೆ ನಡೆಸಿಲ್ಲ. ಇಂದು ನಡೆಯುವ ಕಲಾಪದಲ್ಲಿ ಬಹುಮತ ಸಾಬೀತಪಡಿಸಲೇ ಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದರು. ಸಿಎಂ ಕುಮಾರಸ್ವಾಮಿಯವರೂ ಕೂಡ ಇಂದು ವಿಶ್ವಾಸಮತ ಯಾಚಿಸುವುದಾಗಿ ಘೋಷಿಸಿದ್ದಾರೆ.