ರಾಜ್ಯ ಸರಕಾರಕ್ಕೆ ಗಡುವು ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
ಕೆಲ ದಿನಗಳಿಂದ ಅಶಾಂತಿ ಬೇಗುದಿಯಲ್ಲಿ ಬೇಯುತ್ತಿರುವ ಕರ್ನಾಟಕ ರಾಜ್ಯವು ಒಂದು ತಿಂಗಳ ಒಳಗಾಗಿ ಸಹಜ ಸ್ಥಿತಿಗೆ ಮರಳದೇ ಇದ್ದರೆ ಶಾಂತಿ, ಸಾಮರಸ್ಯ, ಸೌಹಾರ್ದ ಹಾಗೂ ಸಾಮರಸ್ಯ ಕರ್ನಾಟಕದ ಪುನರ್ ಸ್ಥಾಪನೆಗಾಗಿ ರಾಜ್ಯವ್ಯಾಪಿ ಪಾದಯಾತ್ರೆ ಕೈಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಘೋಷಣೆ ಮಾಡಿದರು.
ಬೆಂಗಳೂರು: ಕೆಲ ದಿನಗಳಿಂದ ಅಶಾಂತಿ ಬೇಗುದಿಯಲ್ಲಿ ಬೇಯುತ್ತಿರುವ ಕರ್ನಾಟಕ ರಾಜ್ಯವು ಒಂದು ತಿಂಗಳ ಒಳಗಾಗಿ ಸಹಜ ಸ್ಥಿತಿಗೆ ಮರಳದೇ ಇದ್ದರೆ ಶಾಂತಿ, ಸಾಮರಸ್ಯ, ಸೌಹಾರ್ದ ಹಾಗೂ ಸಾಮರಸ್ಯ ಕರ್ನಾಟಕದ ಪುನರ್ ಸ್ಥಾಪನೆಗಾಗಿ ರಾಜ್ಯವ್ಯಾಪಿ ಪಾದಯಾತ್ರೆ ಕೈಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಘೋಷಣೆ ಮಾಡಿದರು.
ಬೆಂಗಳೂರಿನ ಗಾಂಧಿ ಭವನದಲ್ಲಿ ಇಂದು, ಜೆಪಿ ವಿಚಾರ ವೇದಿಕೆ ಹ್ಮಮಿಕೊಂಡಿದ್ದ 'ಸರ್ವ ಜನಾಂಗದ ಶಾಂತಿಯ ತೋಟ - ಕರ್ನಾಟಕ : ಒಂದು ಭಾವೈಕ್ಯ ಚರ್ಚೆ' ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಾಂತಿ, ಸಹನೆ, ಸೌಹಾರ್ದ, ಸಾಮರಸ್ಯದ ತಾಣವಾಗಿದ್ದ ಕರ್ನಾಟಕವೂ ಈಗ ಹಿಂಸೆ, ಅಸಹನೆ, ಕೋಮು ದ್ವೇಷದ ದಳ್ಳುರಿಯಲ್ಲಿ ಉರಿಯುತ್ತಿದೆ. ಈ ಕಾರಣಕ್ಕಾಗಿಯೇ ನಾನು ಸರಕಾರಕ್ಕೆ ಗಡುವು ಕೊಡುತ್ತಿದ್ದೇನೆ. ಒಂದು ತಿಂಗಳಲ್ಲಿ ಈ ವಾತಾವರಣವನ್ನು ತಿಳಿಗೊಳಿಸದಿದ್ದರೆ ರಾಜ್ಯದ ಉದ್ದಗಲಕ್ಕೂ ಪಾದಯಾತ್ರೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತೇನೆ. ಅವರನ್ನು ಬಡಿದೆಬ್ಬಿಸುತ್ತೇನೆ. ಸರ್ವ ಜನಾಂಗದ ಶಾಂತಿಯ ತೋಟವನ್ನು ಮತ್ತೆ ಪ್ರತಿಷ್ಠಾಪನೆ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದರು.
ರಾಜ್ಯದಲ್ಲಿ ಸೃಷ್ಟಿ ಆಗಿರುವ ಭಯದ ವಾತಾವರಣವನ್ನು ಹೋಗಲಾಡಿಸಬೇಕು.ನಾಡಿನ ಮಕ್ಕಳನ್ನು ಇಂತದ್ದರಿಂದ ಪಾರು ಮಾಡಬೇಕು. ಪಾದಯಾತ್ರೆ ಮುಖಾಂತರ ಎಲ್ಲರನ್ನೂ ಭೇಟಿಯಾಗಿ ಮಾತನಾಡುತ್ತೇನೆ. ಸಮಾನ ಮನಸ್ಕರ ಜತೆ ಚರ್ಚೆ ನಡೆಸಿ ಮುಂದುವರಿಯುತ್ತೇನೆ ಎಂದು ಅವರು ನುಡಿದರು.
ರಾಜ್ಯದಲ್ಲಿ ಉಂಟಾಗಿರುವ ಪರಿಣಾಮಗಳ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿ ಮಾತನಾಡಿದ ಅವರು; ಕಿಡಿಗೇಡಿ, ತಿಳಿಗೇಡಿ, ಸಮಾಜಘಾತಕರು ಈ ದೇಶವನ್ನೂ ಛಿದ್ರಗೊಳಿಸಲು ಹೊರಟಿದ್ದಾರೆ. ಯಾರ ಹೃದಯವನ್ನು ಸ್ವಚ್ಛ ಮಾಡುವುದು ಕಾಣುತ್ತಿಲ್ಲ. ಅದರ ವಿರುದ್ಧ ದನಿ ಎತ್ತಲು ಹೋದರೆ ಅಂತವರನ್ನು ಸಂಪೂರ್ಣ ನಿಗ್ರಹ ಮಾಡಲು ಕೆಲ ಸಂಸ್ಥೆಗಳನ್ನು ದಾಳಿಗೆ ಬಿಡುತ್ತಾರೆ. ವಿಹೆಚ್ ಪಿ, ಭಜರಂಗದಳಕ್ಕಿಂತ ಇಡಿ, ಐಟಿ ಸಂಸ್ಥೆಗಳು ಭಯೋತ್ಪಾದಕ ಕೆಲಸ ಮಾಡುತ್ತಿವೆ ಎಂದು ಕೆಲ ಮಾಧ್ಯಮಗಳು ಬರೆದಿವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಆದರೆ ಕರ್ನಾಟಕದಲ್ಲಿ ಇಂಥದ್ದಕ್ಕೆ ಅವಕಾಶ ಕೊಡುವ ಪ್ರಶ್ನೆ ಇಲ್ಲ. ಇದು ಉತ್ತರ ಪ್ರದೇಶ ಅಲ್ಲ, ಕರ್ನಾಟಕ ಎನ್ನುವುದನ್ನು ಕೆಲವರು ಅರ್ಥ ಮಾಡಿಕೊಳ್ಳಬೇಕು. ನಾನು ಯಾರಿಗೂ ಹೆದರುವ ಪೈಕಿ ಅಲ್ಲ. ಹೋರಾಟ ನಡೆಸಿಯೇ ಸಿದ್ಧ ಎಂದು ಅವರು ನೇರ ಮಾತುಗಳಲ್ಲಿ ಹೇಳಿದರು.
ಮುಂದುವರೆದು ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಿಷ್ಟು:
ಕುವೆಂಪು ಅವರು ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿ ಸಾಮರಸ್ಯ ಗೀತೆ ಬರೆದರು. ಅದನ್ನು ನಾವು ನಾಡಗೀತೆಯಾಗಿ ಸ್ವೀಕಾರ ಮಾಡಿದ್ದೇವೆ. ಅಂತಹ ಮಹಾಪುರುಷ ಹುಟ್ಟಿದ ಜಿಲ್ಲೆಯಲ್ಲೇ ಇವತ್ತು ಅಶಾಂತಿ ಉಂಟಾಗಿದೆ. ಒಂದು ಕಡೆ ಸ್ವಚ್ಚ ಭಾರತ ಎಂದು ಹೇಳುತ್ತಾರೆ. ಅದಕ್ಕೆ ಸಾವಿರಾರು ಕೋಟಿ ಹರಿದು ಹೋಗಿದೆ. ಆದರೆ ಹೃದಯವನ್ನೂ ಸ್ವಚ್ಚಗೊಳಿಸುತ್ತಿಲ್ಲ.
ಈ ಕಲುಷಿತ ವಾತಾವರಣ ಸರಿ ಮಾಡಬೇಕಿದೆ.ಇಲ್ಲವಾದರೆ ಕರ್ನಾಟಕ ದೊಡ್ಡ ಅಪಾಯಕ್ಕೆ ಸಿಲುಕಲಿದೆ.ಹಾಗೆ ಆದರೆ ಇಲ್ಲಿಗೆ ಹೂಡಿಕೆ ಮಾಡಲು ಯಾರು ಬರುತ್ತಾರೆ? ಇಂಥ ಪರಿಸ್ಥಿತಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಮಾಡಲು ಮೀಟಿಂಗ್ ಮಾಡುತ್ತಿದ್ದಾರೆ.ಇವರ ಹಣೆಬರಹಕ್ಕೆ ಏನು ಹೇಳುವುದು?
ಸ್ವಾತಂತ್ರ್ಯ ಬಂದಾಗ ನಾವು-ನೀವು ಹುಟ್ಟಿರಲಿಲ್ಲ. ಅನೇಕರ ಶ್ರಮದಿಂದ ನಾವು ಸ್ವತಂತ್ರರಾಗಿ ಬದುಕುತ್ತಿದ್ದೇವೆ. ಈ ದೇಶ ಒಂದು ಧರ್ಮ, ಒಂದು ಭಾಷೆಗೆ ಸೀಮಿತವಾದುದ್ದಲ್ಲ. ಆದರೆ ಸಮಾಜವನ್ನು ಹಾಳು ಮಾಡುವ ಘಟನೆಗಳು ಉತ್ತರ ಭಾರತದಲ್ಲಿ ನಡೆದವು. ಕರ್ನಾಟಕದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಕೆಲ ವಿನಾಶಕಾರಿ ಸಂಘಟನೆಗಳು ಶಾಂತಿಯನ್ನು ಕದಡಲು ಪ್ರಯತ್ನ ಮಾಡುತ್ತಿವೆ.
ಹಸಿವಿನಿಂದ ಎಷ್ಟು ಜನ ಬಳಲುತ್ತಿದ್ದಾರೆ ಎನ್ನುವ ಪ್ರಜ್ಞೆ ಅವರಿಗೆ ಇದೆಯಾ? ಮಾತೆತ್ತಿದರೆ ದೇವಸ್ಥಾನ ಕಟ್ಟಿದ್ದೇವೆ, ಕಟ್ಟುತ್ತೇವೆ ಎನ್ನುತ್ತಾರೆ. ಕೋಲಾರ ಜಿಲ್ಲೆಯ ಶಿವಾರಪಟ್ಟಣದಲ್ಲಿ ದೇವರ ವಿಗ್ರಹಗಳನ್ನು ಕೆತ್ತನೆ ಮಾಡುವವರು ಮುಸ್ಲಿಮರು ಇದ್ದಾರೆ. ಈಗಾಗಲೇ ಅನೇಕ ದೇಗುಲಗಳಲ್ಲಿ ಅವರು ಕೆತ್ತಿದ ವಿಗ್ರಹಗಳಿವೆ. ಅವುಗಳನ್ನು ಈಗ ಏನು ಮಾಡುತ್ತಾರೆ? ತೆಗೆದು ಹಾಕುತ್ತಾರಾ?
ಸಮಾಜ ಒಡೆಯಲು 12 ಮತ್ತು 23 ಸೂತ್ರ:
ವ್ಯಾಪಾರದಿಂದ ಅನ್ಯಮತೀಯರನ್ನು ದೂರ ಇಡಿ. ಜೈ ಶ್ರೀರಾಮ್ ಅಂತ ಅವರಿಂದ ಹೇಳಿಸಿ ಹಾಗೂ
ವ್ಯಾಪಾರಕ್ಕೋಸ್ಕರ ಜೈ ಶ್ರೀರಾಮ್ ಅಂತ ಸುಳ್ಳು ಹೇಳುತ್ತಾರೆ ಅವರು. ಹೀಗಾಗಿ ಅದನ್ನು ಪರಿಕ್ಷೇ ಮಾಡಲು ಅವರ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ನೋಡಿ. ಅವರ ಶೂ ನೋಡಿ, ಕಣ್ಣಿಗೆ ಕಾಡಿಗೆ ಇಟ್ಟವನ ನೋಡಿ. ಹೀಗೆ 12 ಸೂತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದು ಹಂಚಲಾಗುತ್ತಿದೆ. ನಾವು ಸಿನಿಮಾದಲ್ಲಿ ಸುಖ ಸಂಸಾರಕ್ಕೆ 12 ಸೂತ್ರ ಎಂದು ನೋಡಿದ್ದೆವು. ಕಿಡಿಗೇಡಿಗಳು ಮುಸ್ಲಿಂ ವ್ಯಾಪಾರಿಗಳ ನಾಶಕ್ಕೆ 12, 23 ಸೂತ್ರಗಳನ್ನು ಮಾಡಿ ಕಲಿಸುತ್ತಿದ್ದಾರೆ.
ಇವರ ಆಟ ಇಷ್ಟಕ್ಕೆ ನಿಲ್ಲಲ್ಲ. ಓಲ ಅಥವಾ ಉಬರ್ ಕ್ಯಾಬ್ ಬುಕ್ ಮಾಡಬೇಕಾದರೆ ಅದರ ಚಾಲಕ ಹಿಂದುನಾ, ಮುಸ್ಲಿಮಾ ಅಂತ ನೋಡಿ ಅಂತಾರೆ. ಹಣ್ಣು ವ್ಯಾಪಾರ, ಮೆಡಿಕಲ್ ಶಾಪ್ ಹೀಗೆ ಎಲ್ಲ ಕಡೆ ನೋಡಿಕೊಂಡು ವ್ಯಾಪಾರ ಮಾಡಿ. ಗೋಮಾತೆ ಫೋಟೋ ಇಟ್ಟುಕೊಂಡು ಗಿಫ್ಟಾಗಿ ಕೊಡಿ. ಅದನ್ನು ಪಡೆದರೆ ಅವನು ಯೋಗ್ಯ. ಸದ್ಯಕ್ಕೆ ಶಸ್ತ್ರದ ಪ್ರಯೋಗ ಈಗ ಬೇಡ. ಸಾಮ ಧಾನ ಈಗ ಇರಲಿ, ಆಮೇಲೆ ನೋಡೋಣ. ಇದನ್ನು ನೋಡಿದರೆ ಮನುಷ್ಯತ್ವ ಇರುವ ಯಾರಿಗೆ ಆದರೂ ಸಿಟ್ಟು ಬರುತ್ತದೆ.
ಇದನ್ನೂ ಓದಿ: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ: ಪಕೀರನನ್ನು ಪ್ರಶ್ನೆ ಕೇಳಬೇಡಿ ಎಂದ ರಾಹುಲ್ ಗಾಂಧಿ
ಈ ಘಟನೆಗಳನ್ನು ಕರಾವಳಿ, ಶಿವಮೊಗ್ಗದಿಂದ ಇಡೀ ರಾಜ್ಯಕ್ಕೆ ವ್ಯವಸ್ಥಿತವಾಗಿ ಹರಡಿಸಲಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ರಾಜ್ಯದ ಸ್ಥಿತಿ ಏನಾಗಬೇಕು? ಕೈಗಾರಿಕೆ ಕ್ಷೇತ್ರದಲ್ಲಿ ರಾಜ್ಯ ಹಾಳಾಗುತ್ತಿದೆ. ಹೂಡಿಕೆದಾರರು ಇಲ್ಲಿಗೆ ಬರಲು ಹಿಂಜರಿಯುತ್ತಿದ್ದಾರೆ. ಬಯೋಕಾನ್ ಸಂಸ್ಥೆಯ ಕಿರಣ್ ಮಜುಂದಾರ್ ಷಾ ಅವರು ಒಂದು ಟ್ವೀಟ್ ಮಾಡಿದ್ದಾರೆ. ರಾಜ್ಯದ ಪರಿಸ್ಥಿತಿಯನ್ನು ಅವರ ಟ್ವೀಟ್ ತೆರೆದಿಟ್ಟಿದೆ. ಈಗಲಾದರೂ ಸರಕಾರ ಎಚ್ಚೆತ್ತುಕೊಳ್ಳಬೇಕು.
ನಾನು ಮೊದಲೇ ಹೇಳಿದ್ದೆ:
ನಾನು ಮೊದಲೇ ಹೇಳಿದ್ದೆ. ಇನ್ನು ಕೆಲವೇ ದಿನಗಳಲ್ಲಿ ಇವೆಲ್ಲ ಒಂದೊಂದಾಗಿ ಶುರು ಆಗುತ್ತವೆ ಎಂದಿದ್ದೆ. ಅದೇ ಆಗುತ್ತಿದೆ.ಒಂದಾದ ಮೇಲೊಂದು ಆಗುತ್ತಿದೆ. ಕೆಲ ಸಂಘಟನೆಗಳು ಮಾಡುತ್ತಿವೆ. ಸರಕಾರ ಎಲ್ಲವನ್ನೂ ನೋಡುತ್ತಾ ಮೌನವಾಗಿ ನೋಡುತ್ತಿದೆ. ಮೌನಂ ಸಮ್ಮತಿ ಲಕ್ಷಣಂ ಎನ್ನುವ ರೀತಿಯಲ್ಲಿ ಎಲ್ಲವೂ ನಡೆಯುತ್ತಿದೆ. ಇಂಥ ಭಯಕಂರ ಪರಿಸ್ಥಿತಿ ತರಲು ಹೊರಟವರು ಭಜರಂಗದಳದವರು. ತ್ರಿಶೂಲ ಹಂಚಲಾಗುತ್ತಿದೆ. ಅಮಾಯಕರ ಬ್ರೈನ್ ವಾಶ್ ಮಾಡಲಾಗುತ್ತಿದೆ. ಇದು ನಿಲ್ಲಬೇಕು.
ಆರ್ ಎಸ್ ಎಸ್ ಮೇಲೆ ವಾಗ್ದಾಳಿ:
ಇನ್ನು ಆರ್ ಎಸ್ ಎಸ್ ಇದೆಯಲ್ಲ, ಅದು ನೋಂದಾಯಿತ ಸಂಸ್ಥೆ ಅಲ್ಲ. ಅದಕ್ಕೊಂದು ವಿಳಾಸವೂ ಇಲ್ಲ. ಅದಕ್ಕೆ ಅಧಿಕೃತ ಕಚೇರಿಯೂ ಇಲ್ಲ. ನನ್ನ ಬಳಿ ದಾಖಲೆಗಳು ಇವೆ. ಇಂತಹ ಕೃತ್ಯಗಳನ್ನು ಯಾರು ಮಾಡುತ್ತಾರೆ, ಯಾರು ಬೆಂಕಿ ಹಚ್ಚುತ್ತಾರೆ ಎನ್ನುವುದು ಗೊತ್ತಾಗುವುದೇ ಇಲ್ಲ. ಅದು ಗುಪ್ತಗಾಮಿನಿಯಾಗಿದೆ. ಇದು ಆತಂಕಕಾರಿ.
ಭಜರಂಗದಳ ಕುವೆಂಪು ಆಶಯ ಹಾಳು ಮಾಡುತ್ತಿದೆ:*
ಕುವೆಂಪು (Kuvempu) ಸಂದೇಶ ಧೂಳಿಪಟ ಮಾಡಲು ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು, ಭಜರಂಗದಳವರು ಹೊರಟಿದ್ದಾರೆ. ಶಾಲೆಗೆ ಹೋಗುವ ಮಕ್ಕಳಲ್ಲೂ ವಿಷ ತುಂಬುವ ಕೆಲಸ ಮಾಡುತ್ತಿದ್ದಾರೆ. ಹಾದಿ ಬೀದಿಯಲ್ಲಿ ಬೆಂಕಿ ಹಾಕುತ್ತಿದ್ದಾರೆ. ಸರಕಾರ ಮಾತ್ರ ಮೌನಕ್ಕೆ ಶರಣಾಗಿದೆ.ಯಾರು ಬೇಕಾದರೂ ಸಮಾಜ ಸೇವೆ ಮಾಡಬಹುದು. ದೇಶ ಕಟ್ಟುವ ಕೆಲಸ ಮಾಡಬಹುದು. ಆದರೆ ದೇಶ ಕಟ್ಟುವ ಸೋಗು ಹಾಕಿಕೊಂಡು ಸಮಾಜ ಒಡೆಯುವ ಕೆಲಸ ಮಾಡಬಾರದು. ಇದಕ್ಕೆ ನನ್ನ ವಿರೋಧ ಇದೆ. ಹೀಗೆ ಜಾಲ ತಾಣಗಳಲ್ಲಿ ಕೆಟ್ಟ ಸಂದೇಶಗಳನ್ನು ಹರಡುತ್ತಿರುವವರ ಮೇಲೆ ಸರಕಾರ ಏನು ಕ್ರಮ ತೆಗೆದುಕೊಂಡಿದೆ. ಹಲಾಲ್ ಮಾಡಿದ್ದು ತಿನ್ನಬೇಡಿ ಅಂತಾರೆ, ಹಾಗಾದರೆ ಇಷ್ಟು ವರ್ಷ ತಿಂದಿದ್ದೀವಲ್ಲಾ, ಏನು ಮಾಡೋದು?
ಇದನ್ನೂ ಓದಿ: ಶೋಷಿತ ಸಮುದಾಯಗಳಿಗೆ ಮೀಸಲಾತಿ ನೀಡುವುದಕ್ಕೆ ಮೀನಾಮೇಷ ಮಾಡಬಾರದು- ಬಿ.ಕೆ.ಹರಿಪ್ರಸಾದ್
ಇಂಥ ಪ್ರಚೋದನೆಗಳಿಗೆ ಯುವಕರು ಬಲಿಯಾಗುವುದು ಬೇಡ. ವಿಶ್ವ ಮಾನವರಾಗಿ ಎಂದು ಕುವೆಂಪು ಹೇಳಿದ್ದಾರೆ. ನಾವೆಲ್ಲ ಹಾಗೆ ಬೇಳೆಯೋಣ. ಸಮಾಜ ಘಾತುಕಗಳು ಬೀದಿಯಲ್ಲಿ ರಾಜಾರೋಷವಾಗಿ ಹೊರಟಿದ್ದಾರೆ. ಎಲ್ಲ ಧರ್ಮಗಳಿಗಿಂತ ಮನುಷ್ಯ ಧರ್ಮವೇ ಶ್ರೇಷ್ಠ ಅಂತ ಕುವೆಂಪು ಹೇಳಿದ್ದಾರೆ. ಆದರೆ ರಾಮನ ಹೆಸರಿನಲ್ಲಿ ಹಿಂಸೆ ಬೇಡ. ಕೋವಿಡ್ ಬಂದು ರಾಜ್ಯದಲ್ಲಿ 45 ಸಾವಿರ ಜನ ಕೆಲಸ ಕಳೆದುಕೊಂಡಿದ್ದೀರಾ? ಅದರ ಬಗ್ಗೆ ಭಜರಂಗದಳ ದವರು ಏನು ಹೇಳುತ್ತಾರೆ?
ನಿಷ್ಕ್ರಿಯ ಸರಕಾರ:
ಸಂವಿಧಾನ ಉಲ್ಲಂಘನೆ ಮಾಡುವ ಸಮಾಜಘಾತುಕರ ಮೇಲೆ ಏನೂ ಕ್ರಮ ಆಗಿಲ್ಲ. ಇಂಥಹ ಸರಕಾರಕ್ಕೆ ಏನೆನ್ನಬೇಕು? ನನ್ನ ಪ್ರಕಾರ ಇದೊಂದು ನಿಷ್ಕ್ರಿಯ ಸರಕಾರ ಅಂದರೆ ತಪ್ಪಾಗಲ್ಲ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ವಿಷಾದ ವ್ಯಕ್ತಪಡಿಸಿದ ಮಾಜಿ ಸಿಎಂ:
ಇಂದು ಬೆಳಗ್ಗೆ ಚನ್ನಪಟ್ಟಣದಲ್ಲಿ ಮುಖ್ಯಮಂತ್ರಿ ವಿರುದ್ಧ ಒಂದು ಪದ ಬಳಸಿದೆ. ಸಾಮಾನ್ಯವಾಗಿ ನಾನು ಅಂತಹ ಪದ ಬಳಸಲ್ಲ. ಕೆಲವೊಮ್ಮೆ ಪರಿಸ್ಥಿತಿಯನ್ನು ನೋಡಿ ಸಹಿಸಲಾಗದೆ ಇಂಥ ಪದಗಳು ಆಕ್ರೋಶದಿಂದ ಹೊರಬರುತ್ತವೆ. ಈ ಬಗ್ಗೆ ನನಗೆ ವಿಷಾದ ಇದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಆದಿಚುಂಚನಗಿರಿ ಮಠದ ಬೆಂಗಳೂರು ಶಾಖಾ ಮಠದ ಶ್ರೀ ಸೌಮ್ಯಾನಂದ ನಾಥ ಸ್ವಾಮೀಜಿಗಳು, ಸಾಹಿತಿ ಕುಂ.ವೀರಭದ್ರಪ್ಪ, ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್, ಹಿರಿಯ ಪತ್ರಕರ್ತ ಬಿ.ಎಂ.ಹನೀಫ್, ಇಮಾಮ್ ಮತ್ತು ಮುಸ್ಲಿಂ ಧಾರ್ಮಿಕ ವಿದ್ವಾಂಸರು ಮುಫ್ತಿ ಮಹಮ್ಮದ್ ಆಲಿ ಮಿಸ್ವಾಹಿ ಜಮಾಲಿ ನೂರಿ, ಆರ್ಚ್ ಡಯಾಸಿಸ್ ಕಮ್ಯೂನಿಕೇಷನ್ ಸೆಂಟರ್ ನ ಫಾ.ಸಿರಿಲ್ ವಿಕ್ಟರ್ ಮಾತನಾಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.