ಆ್ಯಂಬಿಡೆಂಟ್ ಕಿಕ್ ಬ್ಯಾಕ್ ಪ್ರಕರಣ: ವಿಚಾರಣೆ ಬಳಿಕ ಜನಾರ್ಧನ ರೆಡ್ಡಿ ಬಂಧನ
ಮಾಜಿ ಸಚಿವ ಜನಾರ್ಧನ ರೆಡ್ಡಿಯವರನ್ನು ಸುದೀರ್ಘ ಕಾಲ ವಿಚಾರಣೆಗೊಳಪಡಿಸಿದ್ದ ಸಿಸಿಬಿ ಪೊಲೀಸರು ಇದೀಗ ರೆಡ್ಡಿಯವರನ್ನು ಬಂಧಿಸಿದ್ದಾರೆ.
ಬೆಂಗಳೂರು: ಆ್ಯಂಬಿಡೆಂಟ್ ಕಿಕ್ ಬ್ಯಾಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದ ಮಾಜಿ ಸಚಿವ ಜನಾರ್ಧನ ರೆಡ್ಡಿಯನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ಆ್ಯಂಬಿಡೆಂಟ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪರ ವಕೀಲರೊಂದಿಗೆ ನಿನ್ನೆಯಷ್ಟೇ ಸಿಸಿಬಿ ಕಚೇರಿಗೆ ಹಾಜರಾಗಿದ್ದ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರನ್ನು ಸಂಜೆ ಸುಮಾರು 4 ಗಂಟೆಯಿಂದ ತಡರಾತ್ರಿವರೆಗೂ ವಿಚಾರಣೆಗೆ ಒಳಪಡಿಸಿದ್ದ ಸಿಸಿಬಿ ಪೊಲೀಸರು ಇಂದು ಮುಂಜಾನೆ ಕೂಡ ಜನಾರ್ದನ ರೆಡ್ಡಿ ಹಾಗೂ ಫರೀದ್ ಅವರ ವಿಚಾರಣೆ ಮುಂದುವರೆಸಿದ್ದರು.
ಇವರ ವಿರುದ್ಧ ಸೂಕ್ತವಾದ ಯಾವುದೇ ಸಾಕ್ಷ್ಯಾಧಾರಗಳು ಸಿಗದಿದ್ದುದರಿಂದ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾತು ಕೇಳಿಬಂದಿತ್ತು. ಸುದೀರ್ಘ 20 ಗಂಟೆಯ ಅವಧಿಯ ವಿಚಾರಣೆ ನಡೆಸಿದ ಬಳಿಕ ಸಿಸಿಬಿ ಪೊಲೀಸರು ಜನಾರ್ಧನ ರೆಡ್ಡಿಯವರನ್ನು ಬಂಧಿಸಿದ್ದಾರೆ. ರೆಡ್ಡಿ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತಿದೆ ಎಂದು ವರದಿಯಾಗಿದೆ.