ಹೊಸ ವರ್ಷದ ಸಂಭ್ರಮದಲ್ಲಿ ರಂಗೇರಿದ ಉದ್ಯಾನ ನಗರಿ
ಉದ್ಯಾನ ನಗರಿ ಬೆಂಗಳೂರು ಹೊಸ ವರ್ಷ-2018ನ್ನು ಬಹಳ ಸಂಭ್ರಮ, ಸಡಗರದಿಂದ ಆಚರಿಸಿದೆ.
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರು ಹೊಸ ವರ್ಷ-2018ನ್ನು ಬಹಳ ಸಂಭ್ರಮ, ಸಡಗರದಿಂದ ಆಚರಿಸಿದೆ.
ಪಟಾಕಿಗಳ ಸದ್ದು, ಬಾನೆತ್ತರದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿದ ಸಿಡಿ ಮದ್ದುಗಳು, ಕೇಕೆ– ಕುಣಿತ, ಮೋಜು–ಮಸ್ತಿಗಳು ಗತವರ್ಷಕ್ಕೆ ವಿದಾಯ ಹೇಳಿ, ಹೊಸತನವನ್ನು ಸ್ವಾಗತಿಸುವ ಅಪೂರ್ವ ಗಳಿಗೆಯ ಖುಷಿಯನ್ನು ನೂರ್ಮಡಿಗೊಳಿಸಿದವು. ಈ ಸಂಭ್ರಮ ವರ್ಷಪೂರ್ತಿ ಮುಂದುವರಿಯಲಿ ಎಂದು ಶುಭಾಶಯ ವಿನಿಮಯ ಮಾಡಿಕೊಂಡರು. ಆತ್ಮೀಯ ಅಪ್ಪುಗೆ ಹೊಸ ಬಾಂಧವ್ಯಗಳನ್ನು ಬೆಸೆದಿತ್ತು. ಹೊಸ ಭರವಸೆ ಮೂಡಿಸಿತ್ತು.
ನಗರದ ಪ್ರಮುಖ ತಾಣಗಳಾದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ಮಲ್ಲೇಶ್ವರದ ಸಂಪಿಗೆ ರಸ್ತೆ ಹಾಗೂ ಹೊಸೂರು ರಸ್ತೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ರಾತ್ರಿ 12 ಗಂಟೆಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಪ್ರಮುಖ ಪ್ರದೇಶಗಳ ಬಾರ್, ಪಬ್, ಡಿಸ್ಕೋಥೆಕ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಹೊಸ ವರ್ಷದ ಪ್ರಯುಕ್ತ ವಿವಿಧ ವಿನೋದಾವಳಿಗಳನ್ನು ಆಯೋಜಿಸಲಾಗಿತ್ತು. ಮದಿರೆ, ಹಾಡು, ಕುಣಿತ ಹೊಸವರ್ಷದ ಸಡಗರಕ್ಕೆ ಹೊಸ ರಂಗು ತುಂಬಿತು.ಲಕ್ಷಾಂತರ ಸಂಖ್ಯೆಯಲ್ಲಿ ರಸ್ತೆಗಳಲ್ಲಿ ಜನರು ಹೊಸ ವರ್ಷವನ್ನು ಸ್ವಾಗತಿಸಿದರು. ಈ ವರ್ಷ ಭದ್ರತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಆಗಮಿಸಿದ್ದರು.
ಹೊಸ ವರ್ಷದ ಸಂಭ್ರಮ, ಸಡಗರ ಕೋರಮಂಗಲ, ಇಂದಿರಾನಗರ ಮತ್ತು ಬಿಇಎಲ್ ರಸ್ತೆಯಲ್ಲಿ ಕೂಡ ಕಂಡುಬಂತು. ಬ್ರಿಗೇಡ್ ರಸ್ತೆಯಲ್ಲಿ 11.30ರ ಸುಮಾರಿಗೆ ಜನರ ದಟ್ಟಣೆ ತೀವ್ರವಾಗಿದ್ದರಿಂದ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಇನ್ನೂ ಹೆಚ್ಚಿನ ಜನ ಬರುವುದಕ್ಕೆ ಅನಿವಾರ್ಯವಾಗಿ ತಡೆಯೊಡ್ಡಿದರು.