ಗೌರಿ ಹತ್ಯೆ ಪ್ರಕರಣ : ಮತ್ತೋರ್ವ ಎಸ್ಐಟಿ ವಶಕ್ಕೆ
ಆರು ತಿಂಗಳುಗಳ ಹಿಂದೆ ನಡೆದಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಬೆಂಗಳೂರು: ಆರು ತಿಂಗಳುಗಳ ಹಿಂದೆ ನಡೆದಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಟಿ.ನವೀನ್ ಕುಮಾರ್(37) ಅಲಿಯಾಸ್ ಹೊಟ್ಟೆ ಮಂಜನನ್ನು ಕರ್ನಾಟಕ ಪೊಲೀಸರ ವಿಶೇಷ ತನಿಖಾ ತಂಡ (ಎಸ್ಐಟಿ) ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆದುಕೊಂಡಿದೆ ಎಂದು ತನಿಖಾಧಿಕಾರಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಫೆ.18ರಂದು ಉಪ್ಪಾರಪೇಟೆ ಠಾಣೆ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ನವೀನ್ ಕುಮಾರ್‌ನನ್ನು ಅಕ್ರಮ ಶಸ್ತ್ರಾಸ್ತ್ರ ಮಾರಾಟದ ಆರೋಪದಲ್ಲಿ ಬಂಧಿಸಿದ್ದರು. ಮದ್ದೂರು ತಾಲೂಕಿನಲ್ಲಿರುವ ಈತನ ಮನೆ ಮೇಲೆ ದಾಳಿ ನಡೆಸಿ ಆರೋಪಿಯಿಂದ 32 ಎಂಎಂನ 15ಕ್ಕೂ ಅಧಿಕ ಗುಂಡುಗಳು ಮತ್ತು ನಾಲ್ಕೈದು ಗನ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಸಂಬಂಧ ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ನಂತರ ವಿಶೇಷ ತನಿಖಾ ತಂಡದ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್‌ಐಟಿ ತನಿಖಾಧಿಕಾರಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.