2011ರ ಜನಗಣತಿ ಪ್ರಕಾರ ಬೆಂಗಳೂರಿಗೆ ನೀರು ಕೊಡಿ
ಸುಪ್ರೀಂಕೋರ್ಟ್ನಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳು ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಕರ್ನಾಟಕ ಪರ ವಕೀಲ ಮೋಹನ್ ಕಾತರಕಿ ಬೆಂಗಳೂರಿಗೆ ನೀರು ಹಂಚಿಕೆ ಮಾಡಿದ ವಿಚಾರವನ್ನು ಪ್ರಸ್ತಾಪಿಸಿದರು.
ನವದೆಹಲಿ: ಕಾವೇರಿ ನ್ಯಾಯಾಧಿಕರಣ ತೀರ್ಪುನೀಡುವಾಗ 1991ರ ಜನಗಣತಿಯನ್ನು ಆಧರಿಸಿ ಬೆಂಗಳೂರಿಗೆ ಕುಡಿಯುವ ನೀರನ್ನು ನಿಗಧಿ ಮಾಡಿದೆ. ಈಗ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ 2011ರ ಜನಗಣತಿಯ ಮಾಹಿತಿಗಳನ್ನು ಆಧರಿಸಿ ಬೆಂಗಳೂರಿಗೆ ನೀರನ್ನು ನೀಡಬೇಕೆಂದು ಕರ್ನಾಟಕ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿಕೊಂಡಿದೆ.
ಕಾವೇರಿ ನ್ಯಾಯಾಧೀಕರಣದ ಐತೀರ್ಪು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಗಳ ಅಂತಿಮ ಹಂತದ ವಿಚಾರಣೆ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಪೀಠದಲ್ಲಿ ನಡೆಯುತ್ತಿದ್ದು ಗುರುವಾರ ತಮಿಳುನಾಡಿನ ವಾದಕ್ಕೆ ಕರ್ನಾಟಕದ ಪರ ವಕೀಲರು ಪ್ರತಿವಾದ ಮಂಡಿಸಿದರು. ತಮ್ಮ ಪ್ರತಿವಾದದ ವೇಳೆ ಕರ್ನಾಟಕದ ಪರ ವಕೀಲ ಮೋಹನ್ ಕಾತರಕಿ ಬೆಂಗಳೂರಿಗೆ ನೀರು ಹಂಚಿಕೆ ಮಾಡಿದ ವಿಚಾರವನ್ನು ಪ್ರಸ್ತಾಪಿಸಿದರು. ಬೆಂಗಳೂರಿಗೆ 1991ರ ಜನಗಣತಿ ಆಧರಿಸಿ ನೀರು ಹಂಚಿಕೆ ಮಾಡಲಾಗಿದೆ. ಆದರೆ 2011ರ ಜನಗಣತಿ ಆಧರಿಸಿ ಹಂಚಿಕೆ ಮಾಡಬೇಕು ಎಂದು ಮನವಿ ಮಾಡಿದರು.
ಜೊತೆಗೆ ತಮಿಳುನಾಡಿನಲ್ಲಿ 20 ಟಿಎಂಸಿ ಅಂತರ್ಜಲ ಲಭ್ಯವಿದೆ. ಆದುದರಿಂದ 192 ಟಿಎಂಸಿ ನೀರಿನ ಬದಲು ತಮಿಳುನಾಡಿಗೆ 172 ಟಿಎಂಸಿ ನೀರನ್ನು ಮಾತ್ರ ಹಂಚಬೇಕಿತ್ತು. ಅಂತರ್ಜಲ ಲಭ್ಯತೆಯ ಬಗ್ಗೆ ವಿಶ್ವಸಂಸ್ಥೆ ನೀಡಿರುವ ವರದಿಯನ್ನು ಕಾವೇರಿ ನ್ಯಾಯಾಧೀಕರಣ ತನ್ನ ಐತೀರ್ಪು ಪ್ರಕಟಿಸುವಾಗ ಪರಿಗಣಿಸಿರಲಿಲ್ಲ. ಈಗಲಾದರೂ ತಮಿಳುನಾಡಿನಲ್ಲಿರುವ ಅಂತರ್ಜಲ ಲಭ್ಯತೆ ಬಗೆಗೆ ಮತ್ತು ಈ ಕುರಿತು ವಿಶ್ವಸಂಸ್ಥೆ ನೀಡಿರುವ ವರದಿಯ ಬಗೆಗೆ ಪರಿಗಣಿಸಬೇಕು ಎಂದು ಕೂಡ ಕೇಳಿಕೊಂಡರು.
ಇನ್ನೊಬ್ಬ ವಕೀಲ ಶಾಂ ದಿವಾನ್ ವಾದ ಮಂಡಿಸಿ ಬೆಂಗಳೂರು ಮಹಾನಗರದಲ್ಲಿರುವ ಜನಸಂಖ್ಯೆಯ 2/3 ರಷ್ಟನ್ನು ಆಧರಿಸಿ ನೀರು ಹಂಚಿಕೆ ಮಾಡಬೇಕೆಂದು ವಿನಂತಿಸಿಕೊಂಡರು.
ಮಂಗಳವಾರದಿಂದ ಕೇಂದ್ರ ಸರ್ಕಾರ ವಾದ ಮಂಡನೆ ಮಾಡಲಿದ್ದು, ವಿಶೇಷವಾಗಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಕುರಿತು ತನ್ನ ಅಭಿಪ್ರಾಯವನ್ನು ತಿಳಿಸಲಿದೆ. ಕರ್ನಾಟಕ ಮೊದಲಿನಿಂದಲೂ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ವಿರೋಧಿಸುತ್ತಿದೆ. ತಮಿಳುನಾಡು ಮೊದಲಿನಿಂದಲೂ ಮಂಡಳಿ ರಚನೆಯ ಪರವಾಗಿದೆ. ಹಾಗಾಗಿ ಕೇಂದ್ರದ ಅಭಿಪ್ರಾಯ ಈಗ ಕುತೂಹಲ ಮೂಡಿಸಿದೆ.