ಬೆಂಗಳೂರು: ಆಹಾರ ಇಲಾಖೆಯಿಂದ ಪಡಿತರ ಕಾರ್ಡ್(Ration Card) ಹೊಂದಿರುವವರಿಗೆ ಸಿಹಿ ಸುದ್ದಿಯೊಂದು ಲಭ್ಯವಾಗಿದೆ. ಸರ್ವರ್ ಹಾಗೂ ತಂತ್ರಾಂಶ ಸಮಸ್ಯೆಯಿಂದಾಗಿ ಬಯೋಮೆಟ್ರಿಕ್ ನೀಡದೆ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ವತಿಯಿಂದ  ಸುತ್ತೋಲೆ ಹೊರಡಿಸಲಾಗಿದ್ದು, ಬಯೋಮೆಟ್ರಿಕ್ ರಹಿತ ಫಲಾನುಭವಿಗಳಿಗೂ ಪಡಿತರ ವಿತರಿಸಬೇಕೆಂದು ನ್ಯಾಯಬೆಲೆ ಅಂಗಡಿಯವರಿಗೆ ಆದೇಶ ನೀಡಿದೆ.


COMMERCIAL BREAK
SCROLL TO CONTINUE READING

ಈ ಕುರಿತು ಸುತ್ತೋಲೆ ಹೊರಡಿಸಿರುವ ಆಹಾರ ಇಲಾಖೆಯು, ಜನವರಿ 30ರ ವರೆಗೆ ಪ್ರತಿ ದಿನ ಬೆಳಗ್ಗೆ 7 ರಿಂದ ರಾತ್ರಿ 9 ರ ವರೆಗೆ ನ್ಯಾಯಬೆಲೆ ಅಂಗಡಿ ತೆರೆದು ಪಡಿತರ ವಿತರಿಸಬೇಕು ಎಂದು ಉಲ್ಲೇಖಿಸಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣಾ ಪ್ರಮಾಣದಲ್ಲಿ ಶೇ. 75 ಕ್ಕಿಂತ ಕಡಿಮೆ ಇದೆ. ಸರ್ವರ್ ಮತ್ತು ತಂತ್ರಾಂಶ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಮ್ಯಾನುವಲ್ ಮೂಲಕವೇ ಪಡಿತರ ವಿತರಿಸಬೇಕು. ಅಲ್ಲದೇ, ದಿನಕ್ಕೆ ಎಷ್ಟು ಪ್ರಮಾಣದ ಪಡಿತರ ವಿತರಿಸಲಾಗಿದೆ ಎಂಬ ಮಾಹಿತಿಯನ್ನು ಅಂದೇ ಆಹಾರ ನಿರೀಕ್ಷಕರಿಗೆ ನೀಡಬೇಕು ಎಂದು ಹೇಳಲಾಗಿದೆ. 


ಈ ಹಿನ್ನೆಲೆಯಲ್ಲಿ 10 ದಿನ ಯಾವುದೇ ಸಿಬ್ಬಂದಿಗೆ ರಜೆ ಮಂಜೂರು ಮಾಡದಂತೆ ಉಪನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಇಲಾಖೆ ಆಯುಕ್ತೆ ಶಮ್ಲಾ ಇಕ್ಬಾಲ್ ಮಾಹಿತಿ ನೀಡಿದ್ದಾರೆ.


 ಸದ್ಯಕ್ಕೆ ಬಯೋಮೆಟ್ರಿಕ್ ಇಲ್ಲದಿದ್ದರೂ ಪಡಿತರ ವಿತರಿಸುವಂತೆ ಸೂಚನೆ ನೀಡಲಾಗಿದೆ. ಪಡಿತರ ವಿತರಣೆ ಪೂರ್ಣಗೊಂಡ ಬಳಿಕ ಫೆಬ್ರವರಿ 1ರಿಂದ  e-KYCಗೆ ಮತ್ತೆ ಚಾಲನೆ ನೀಡಲಾಗುತ್ತದೆ ಎನ್ನಲಾಗಿದೆ.