ಬೆಂಗಳೂರು:  ರಾಜ್ಯದಲ್ಲಿ ಉತ್ತಮ ಮಳೆಯಾಗಿರುವುದರಿಂದ ಈಗ ರಾಜ್ಯ ಸರ್ಕಾರ ಜಲಾಶಯಗಳಲ್ಲಿರುವ ನೀರನ್ನು ಕಾಲುವೆಗಳಿಗೆ ಹರಿಸಲು ನಿರ್ಧರಿಸಿದೆ. ಇದರ ಭಾಗವಾಗಿ ಈಗ ಹೇಮಾವತಿ ಹಾಗೂ ತುಂಗಭದ್ರಾ ಜಲಾಯಶಗಳಿಂದ ಕಾಲುವೆಗಳಿಗೆ ನೀರು ಹರಿಸಲು ಅನುಮತಿ ನೀಡಿದೆ.


COMMERCIAL BREAK
SCROLL TO CONTINUE READING

ಹೇಮಾವತಿ ಜಲಾಶಯದಿಂದ ಹೇಮಾವತಿ ಕಾಲುವೆ ಜಾಲಕ್ಕೆ ಆಗಸ್ಟ್ 7ರಿಂದ 14.53 ಟಿಎಂಸಿ ನೀರು ಬಿಡಲು ಅನುಮತಿ ನೀಡಿದೆ. ಹೇಮಾವತಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾದ ಹಿನ್ನಲೆಯಲ್ಲಿ.ಆಗಸ್ಟ್ 6 ರಂದು ಹೇಮಾವತಿ ಜಲಾಶಯದ ಒಳಹರಿವು 17,623 ಕ್ಯುಸೆಕ್ಸ್ ಆಗಿದ್ದು, ಹೊರ ಹರಿವು 5,000 ಕ್ಯುಸೆಕ್ಸ್ ಳಷ್ಟಿದೆ.  ಇದರಿಂದ ಮುಂದಿನ ಕೆಲವು ದಿನಗಳಲ್ಲಿ ಹೆಚ್ಚಿನ ಹೊರ ಹರಿವನ್ನು ನಿರೀಕ್ಷಿಸಲಾಗುತ್ತಿದೆ.



ಹೇಮಾವತಿ ಜಲಾಶಯದಲ್ಲಿ ಹೆಚ್ಚಿನ ನೀರಿನ ಸಂಗ್ರಹವಿಲ್ಲದ ಕಾರಣ ಕೆರೆಗಳು ಮತ್ತು ಅಣೆಕಟ್ಟುಗಳಿಗೆ ನೀರು ತುಂಬಿಸುವ ಮೂಲಕ ಕುಡಿಯುವ ನೀರು ಪೂರೈಕೆಯ ಉದ್ದೇಶಕ್ಕೆ ಮಾತ್ರ ಲಭ್ಯ ನೀರನ್ನು ಬಳಸಲು ಹಾಗೂ ನೀರಾವರಿ ಉದ್ದೇಶಗಳಿಗೆ ನೀರು ಒದಗಿಸದೆ ಇರಲು ಉದ್ದೇಶಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಮುಂದಿನ ಕೆಲವು ದಿನಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡುವುದರೊಂದಿಗೆ ಹೇಮಾವತಿ ಜಲಾಶಯದಿಂದ ಕಾಲುವೆ ಜಾಲಕ್ಕೆ ಮುಂದಿನ 25 ದಿನಗಳಿಗೆ 14.53 ಟಿಎಂಸಿ ನೀರು ಹರಿಸಿ, ಯೋಜನೆಯ ವ್ಯಾಪ್ತಿಗೆ ಬರುವ ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳ ಕೆರೆಗಳು, ಆಣೆಕಟ್ಟೆಗಳನ್ನು ತುಂಬಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.


ಅದೇ ರೀತಿಯಾಗಿ ತುಂಗಭದ್ರಾ ಜಲಾಶಯದಲ್ಲಿ ಒಳ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳಿಗೆ ನೀರು ಬಿಡಲು ಸರ್ಕಾರ ತೀರ್ಮಾನಿಸಿದೆ.ತುಂಗಭದ್ರಾ ಜಲಾಶಯದ ಒಳಹರಿವು ಆಗಸ್ಟ್ 6 ರಂದು 23,052 ಕ್ಯುಸೆಕ್ಸ್ ಇತ್ತು. ಅಂತೆಯೇ ಶಿವಮೊಗ್ಗದ ತುಂಗಾ ಜಲಾಶಯದ ಹೊರ ಹರಿವು 77,000 ಕ್ಯುಸೆಕ್ಸ್ ಇದೆ. 



ಈಗ ತುಂಗಾ ಜಲಾಶಯದ ಹೊರ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ 30 ರಿಂದ 40 ಟಿಎಂಸಿ ನೀರು ಸಂಗ್ರಹವಾಗುವುದೆಂದು ನಿರೀಕ್ಷಿಸಲಾಗಿದೆ.  ಈ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದ ಎಡದಂಡೆ, ಬಲದಂಡೆ ನಾಲೆಗಳು ಹಾಗೂ ವಿಜಯನಗರ ಕಾಲುವೆಗಳಿಗೆ 9800 ಕ್ಯುಸೆಕ್ಸ್ ನೀರು ಬಿಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.