ಬೆಂಗಳೂರು: ಎಂ.ಎಂ.ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಇಬ್ಬರ ಹತ್ಯೆಯಲ್ಲೂ ಮನೆಯ ಬಳಿಯೇ ಹಂತಕರು ಹತ್ಯೆ ನಡೆಸಿದ್ದು ಒಂದೇ ರೀತಿಯ ಪ್ಲಾನ್ ಮಾಡಿರುವುದು ಇಬ್ಬರ ಹತ್ಯೆಗೂ ಸಾಮ್ಯತೆ ಇರಬಹುದಾ ಎಂಬ ಅನುಮಾನಗಳಿಗೆ ಎಡೆಮಾಡಿದೆ.


COMMERCIAL BREAK
SCROLL TO CONTINUE READING

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್ಐಟಿ ತಂಡದಿಂದ ತನಿಖೆ ಮುಂದುವರಿದಿದ್ದು 
ಎಂ.ಎಂ. ಕಲ್ಬುರ್ಗಿ ಹತ್ಯೆ ಪ್ರಕರಣದ ಕಡತಗಳನ್ನು ತರಿಸಿಕೊಂಡಿರುವ ತನಿಖಾ ತಂಡ ಪರಿಶೀಲನೆ ನಡೆಸುತ್ತಿದೆ. ಸಿಐಡಿ ಕಚೇರಿಯಲ್ಲಿ ಇದ್ದ ಕಡತಗಳನ್ನ ತನಿಖಾ ತಂಡ ಪರಿಶೀಲನೆ ನಡೆಸುತ್ತಿದೆ.


ಹಂತಕರು ಎರಡು ಪ್ರಕರಣಗಳಲ್ಲಿಯೂ ಮನೆಯ ಬಳಿಯೇ ಹತ್ಯೆ ನಡೆಸಿರುವುದರಿಂದ ಎರಡು ಪ್ರಕರಣಗಳಲ್ಲಿ ಹಂತಕರದು ಒಂದೇ ರೀತಿಯ ಪ್ಲಾನ್ ಕಂಡು ಬಂದಿದೆ. ಹಾಗಾಗಿ ಕಲ್ಬುರ್ಗಿ ಹಂತಕರ ಬೆರಳಚ್ಚು ವರದಿಯನ್ನು ಮತ್ತು ಗೌರಿ ಲಂಕೇಶ್ ಅವರ ಮನೆ ಬಳಿ ಸಿಕ್ಕಿರುವ ಬೆರಳಚ್ಚು ಮಾದರಿಗಳನ್ನು ತಾಳೆ ಮಾಡಲಾಗುತ್ತಿದೆ ಎರಡು ಬೆರಳಚ್ಚುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿ ಸಾಮ್ಯತೆ ಪರೀಕ್ಷೆ. ಸಾಮ್ಯತೆಯ ವರದಿ ಬಂದ ಬಳಿಕ ತನಿಖೆಗೆ ಸ್ಪಷ್ಟ ರೂಪ ಸಿಗಲಿದೆ ಎಂದು ತನಿಖಾ ತಂಡ ತಿಳಿಸಿದೆ. 


ನೆನ್ನೆ ಘಟನೆ ನಡೆದ ಸ್ಥಳದಲ್ಲಿ  ಎಸ್ಐಟಿಯ ಎಲ್ಲಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇಂದು ಒಬ್ಬ ಡಿವೈಎಸ್ಪಿ ಹಾಗೂ  ಇನ್ಸ್‌ಪೆಕ್ಟರ್ ಗಳ ನಾಲ್ಕೈದು ತಂಡದ ರಚನೆಮಾಡಲಾಗಿದೆ. ಎಲ್ಲಾ ತಂಡಗಳು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.


ಗೌರಿ ಲಂಕೇಶ್ ಹತ್ಯೆ ಪ್ರಕರಣ ವಿಶೇಷ ತನಿಖಾ ತಂಡದೊಂದಿಗೆ ಸಮಾಲೋಚನೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆ ಕುರಿತು ಮಾಹಿತಿ ಪಡೆದಿದ್ದಾರೆ. ಸಭೆಯಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ, ವಿಶೇಷ ತನಿಖಾ ತಂಡದ ಮುಖ್ಯಸ್ಥ ಬಿ.ಕೆ.ಸಿಂಗ್, ಪೊಲೀಸ್ ಮಹಾ ನಿರ್ದೇಶಕ ದತ್ತಾ, ಗುಪ್ತದಳದ ಡಿಜಿ ಎ.ಎಂ.ಪ್ರಸಾದ್‌ ಭಾಗಿಯಾಗಿದ್ದರು.


ಪ್ಯಾಲೇಸ್ ರಸ್ತೆಯ ಸಿಐಡಿ ಕಚೇರಿಯಲ್ಲಿ ನಡೆದ ಎಸ್ ಐ ಟಿ ತಂಡದ ಮತ್ತೊಂದು ಸುತ್ತಿನ ಸಭೆಯು ಎಸ್ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ನೇತೃತ್ವದಲ್ಲಿ ನಡೆಯಿತು. ಈ ಸಭೆಯಲ್ಲಿ ಡಿಸಿಪಿ ಅನುಚೇತ್ ಮತ್ತು ಡಿವೈಎಸ್ಪಿ ಹಾಗೂ 11 ಮಂದಿ ಇನ್ಸ್‌ಪೆಕ್ಟರ್ ಗಳು ಭಾಗಿಯಾಗಿದ್ದರು.


ನಿನ್ನೆ 11ಗಂಟೆಗಳ ಕಾಲ ತನಿಖೆ ನಡೆಸಿದ್ದ ಅಧಿಕಾರಿಗಳು ಗೌರಿ ಲಂಕೇಶ್ ಮನೆಯ ಒಳಗೆ, ಮನೆಯ ಕಾಪೌಂಡ್, ಕಚೇರಿ ಸುತ್ತಾ ಹಾಗೂ ಆರ್ ಆರ್ ನಗರ ಏರಿಯಾದಲ್ಲಿ ಪರಿಶೀಲನೆ ನಡೆಸಿದ್ದರು. 


ತನಿಖೆಯ ಪ್ರಗತಿಯ ಬಗ್ಗೆ  ಸಭೆ ನಡೆಸುತ್ತಿರುವ ಐಜಿಪಿ ಬಿ.ಕೆ.ಸಿಂಗ್ ನಿನ್ನೆ ನಡೆದ ಎಲ್ಲಾ ತನಿಖೆಯ ಬೆಳವಣಿಗೆ ಹಾಗೂ ಸಾಕ್ಷ್ಯಧಾರಾಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ತನಿಖೆಯ ಪ್ರತಿ ಹಂತದ ಬೆಳವಣಿಗೆ ಬಗ್ಗೆ ಡಿಜಿಗೆ ವರದಿ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. 


ಡಿಜಿಪಿ ರೂಪಕ್ ಕುಮಾರ್ ದತ್ತಾ ಎಸ್ಐಟಿಗೆ ತನಿಖೆಗೆ ಖುದ್ದು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.